ADVERTISEMENT

ವೈರಲ್‌ ಆಗಿದ್ದ ಹುಲಿ ವಿಡಿಯೊ ಬಂಡೀಪುರದ್ದಲ್ಲ, ಮಹಾರಾಷ್ಟ್ರದ್ದು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:22 IST
Last Updated 25 ಜುಲೈ 2020, 12:22 IST
ವೈರಲ್‌ ವಿಡಿಯೊದಲ್ಲಿ ಸೆರೆಯಾದ ಹುಲಿಯ ಚಿತ್ರ 
ವೈರಲ್‌ ವಿಡಿಯೊದಲ್ಲಿ ಸೆರೆಯಾದ ಹುಲಿಯ ಚಿತ್ರ    

ಚಾಮರಾಜನಗರ: ಕೆಲವು ದಿನಗಳ ಹಿಂದೆ ವೈರಲ್‌ ಆಗಿದ್ದ ಹುಲಿಯೊಂದರ ವಿಡಿಯೊ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ್ದಲ್ಲ, ಮಹಾರಾಷ್ಟ್ರದ್ದು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಭಾಗದಲ್ಲಿರುವ ಪೆಂಚ್‌ ರಾಷ್ಟ್ರೀಯ ಉದ್ಯಾನದ ಚೋರ್ಬಾಹುಲಿ ವಲಯದಲ್ಲಿ ಜುಲೈ 18ರಂದು ಈ ವಿಡಿಯೊ ಸೆರೆ ಹಿಡಿದಿರುವುದಾಗಿ ನಾಗ್ಪುರದ ವಕೀಲ ನೀಲೇಶ್‌ ಆರ್‌.ಶರ್ಮಾ ಅವರು ಹೇಳಿಕೊಂಡಿದ್ದಾರೆ.

ವೈರಲ್‌ ಆಗಿರುವ ವಿಡಿಯೊದ ಬಗ್ಗೆ ಮಾಹಿತಿ ಕೇಳಿದ್ದ ಸಂದರ್ಭದಲ್ಲಿ, ‘ವಿಡಿಯೊ ಬಂಡೀಪುರದ್ದು’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದರು. ಹುಲಿಗೆ ‘ಮಾಯಾರ್‌ ಕಿಂಗ್‌’ ಎಂದು ಹೆಸರಿಡಲಾಗಿದೆ ಎಂದೂ ಹೇಳಿದ್ದರು.

ADVERTISEMENT

ಮಾಧ್ಯಮಗಳಲ್ಲಿ ವರದಿ ಬಂದ ನಂತರ,ನೀಲೇಶ್‌ ಶರ್ಮಾ ಅವರ ಸ್ನೇಹಿತ ಅಮಲ್‌ ಜಾರ್ಜ್‌ ಎಂಬುವವರು, ‘ಇದು ಬಂಡೀಪುರದ್ದಲ್ಲ; ಚೋರ್ಬಾಹುಲಿ ವಲಯದಲ್ಲಿ ಕಂಡು ಬಂದ ಗಂಡು ಹುಲಿ. ನಾಗ್ಪುರದ ನೀಲೇಶ್‌ ಶರ್ಮ ಅವರು 2020ರ ಜುಲೈ 18ರಂದು ಈ ವಿಡಿಯೊವನ್ನು ಸೆರೆಹಿಡಿದಿದ್ದಾರೆ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

‘ಪ್ರಜಾವಾಣಿ’ಯು ಇಬ್ಬರನ್ನೂ ಸಂಪರ್ಕಿಸಿ, ಈ ಬಗ್ಗೆ ವಿಚಾರಿಸಿದಾಗ, ‘ಚೋರ್ಬಾಹುಲಿ ವಲಯದಲ್ಲಿ ಸೆರೆ ಹಿಡಿದಿರುವ ವಿಡಿಯೊ. ಇದನ್ನು ಬಂಡೀಪುರದ್ದು ಎಂದು ಅಲ್ಲಿನ ಅಧಿಕಾರಿಗಳು ಹೇಗೆ ದೃಢಪಡಿಸಿದರು’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ವಿಡಿಯೊ ಮೂಲದ ಬಗ್ಗೆ ಟಿ.ಬಾಲಚಂದ್ರ ಅವರನ್ನು ಪ್ರಶ್ನಿಸಿದಾಗ, ‘ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಆದರೆ, ನಮ್ಮವರ (ಸಿಬ್ಬಂದಿ) ಬಳಿ ವಿಡಿಯೊ ಇತ್ತು. ಬಂಡೀಪುರ ವಲಯದಲ್ಲಿ ‘ಮಾಯಾರ್‌ ಕಿಂಗ್’‌ ಎಂದು ಹೆಸರಿಸಲಾಗಿರುವ ದಷ್ಟಪುಷ್ಟ ಹುಲಿ ಇರುವುದು ನಿಜ. ಅದರ ಫೋಟೊಗಳು ನಮ್ಮ ಬಳಿ ಇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.