
ಯಳಂದೂರು: ತಾಲ್ಲೂಕಿನ ಅರೆ ನೀರಾವರಿ ಪ್ರದೇಶಗಳಲ್ಲಿ ದ್ವಿದಳ ಧಾನ್ಯ ಬೆಳೆಗಳು ರಾರಾಜಿಸುತ್ತಿವೆ. ತೊಗರಿ, ಅವರೆ, ಕಡಲೆ ಬೆಳೆ ಸಮೃದ್ಧವಾಗಿ ಬಂದಿದ್ದು ಸುವರ್ಣವತಿ ನದಿ ತಟದ ಸುತ್ತಮುತ್ತ ತೊಗರಿ ಕೊಯ್ಲು ಬಿರುಸು ಪಡೆದುಕೊಂಡಿದೆ. ಸಮೃದ್ಧ ಫಸಲು ಹಾಗೂ ದರ ರೈತರ ಮೊಗದಲ್ಲಿ ನಗು ಚೆಲ್ಲುವಂತೆ ಮಾಡಿದೆ.
ಕಬಿನಿ ನೀರಿನ ಆಶ್ರಯದಲ್ಲಿ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಉತ್ತಮ ಫಸಲು ನೀಡಿದೆ. ಮಳೆಯಾಶ್ರಿತ ಭೂಮಿಯಲ್ಲಿ ಕೃಷಿಕರು ಹಿಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ್ದ ತೊಗರಿಯೂ ಸಮೃದ್ಧ ಫಸಲು ನೀಡಿದೆ. ನೂರಾರು ಎಕರೆ ಪ್ರದೇಶದಲ್ಲಿ ಪರ್ಯಾಯ ಬೆಳೆಯಾಗಿ ತೊಗರಿ ಬೆಳೆಯಾಗಿದ್ದು ಸಾಗುವಳಿದಾರರಿಗೆ ಇಳುವರಿ ಹಾಗೂ ಉತ್ತಮ ಆದಾಯ ತಂದಿತ್ತಿದೆ.
ಸುವರ್ಣ ನದಿಗುಂಟದಲ್ಲಿ ವಾಣಿಜ್ಯ ಬೆಳೆಗಾಳದ ಅಡಿಕೆ, ತೆಂಗು ಬೆಳೆ ಹೆಚ್ಚಾಗಿದೆ. ಕಬಿನಿ ನಾಲೆಯ ಸುತ್ತಮುತ್ತಲ ಪ್ರದೇಶಗಳು ಆಹಾರ ಬೆಳೆಗಳಿಗೆ ಮಿತಿಯಾಗಿದೆ. ರಬಿ ಕಾಲದಲ್ಲಿ ಬಿತ್ತನೆಯಾದ ತೊಗರಿ, ಅವರೇಕಾಳು ಅಕಾಲಿಕ ಮಳೆಯ ನಡುವೆಯೂ ಗುಣಮಟ್ಟದ ಫಸಲು ತಂದಿದೆ. ಪ್ರತಿದಿನ ನೂರಾರು ಕೆಜಿಯಷ್ಟು ತೊಗರಿ ಅವರೆ ಕೊಯ್ಲು ಮಾಡಿ ಹೊಲದಲ್ಲಿಯೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಬೆಳೆಗಾರರು.
ತಾಲ್ಲೂಕಿನ 10.5 ಸಾವಿರ ಹೆಕ್ಟೇರ್ ಪ್ರದೇಶ ಕೃಷಿಗೆ ಒಳಪಟ್ಟಿದ್ದು ಶೇ 90 ಭಾಗ ಭತ್ತ, ಮುಸುಕಿನಜೋಳ ಹಾಗೂ ಕಬ್ಬು ಬೇಸಾಯಕ್ಕೆ ಒಳಪಟ್ಟಿದೆ. ಶೇ 10ರಷ್ಟು ಭಾಗದಲ್ಲಿ ಹಿಂಗಾರು ಅವಧಿಯಲ್ಲಿ ಅಲಸಂದೆ, ಉದ್ದು, ಸಾಸಿವೆ ಮತ್ತಿತರ ಬೀಜಗಳನ್ನು ನಾಟಿ ಮಾಡಲಾಗಿತ್ತು. ಈ ಬಾರಿ ತೊಗರಿಗೂ ರೈತರು ಆದ್ಯತೆ ನೀಡಿದ್ದರು. ಬಿತ್ತನೆ ಮಾಡಿ ಮೂರ್ನಾಲ್ಕು ತಿಂಗಳಲ್ಲಿ ತೊಗರಿ ಆದಾಯ ನೀಡುತ್ತಿದೆ.
ತೊಗರಿ ಬೆಳೆಯುವ ಹಂತದಲ್ಲಿ 50 ರಿಂದ 60 ದಿನಗಳ ಅವಧಿಯಲ್ಲಿ ಕುಡಿ ಚಿವುಟುವುದರಿಂದ ಬಹು ಬೇಗ ಕಾಳು ಕಟ್ಟುತ್ತವೆ. ಲಘು ಪೋಷಕಾಂಶಗಳನ್ನು ಹಾಕುವುದರಿಂದ ಗುಣಮಟ್ಟದ ಕಾಯಿಗಳು ದೊರೆಯುವುದರ ಜೊತೆಗೆ ಇಳುವರಿಯೂ ಇಮ್ಮಡಿಯಾಗುತ್ತದೆ. ತೊಗರಿ ಬೆಳೆಗೆ ಒಂದೆರಡು ಬಾರಿ ಕೀಟಬಾಧೆ ಕಾಡುವುದು ಬಿಟ್ಟರೆ, ಹೆಚ್ಚು ಖರ್ಚು ಬೇಡುವುದಿಲ್ಲ.
‘ಮಿಶ್ರ ಕೃಷಿಯಲ್ಲಿ ಒಂದು ಎಕರೆಯಲ್ಲಿ ತೊಗರಿ ಹಾಗೂ ಅವರೆ ಬೆಳೆದಿದ್ದು, ಕೆಜಿಗೆ ₹ 40 ರಂತೆ ಮಾರಾಟ ಮಾಡುತ್ತಿದ್ದೇನೆ. ಗದ್ದೆ ಬದಿಯಲ್ಲಿ ಹಾಕಿರುವ ತೊಗರಿಯನ್ನು ವ್ಯಾಪಾರಿಗಳು ಜಮೀನಿಗೆ ಬಂದು ಕೊಳ್ಳುವುದರಿಂದ ಮಾರುಕಟ್ಟೆಗೆ ಸಾಗಣೆ ಮಾಡುವ ಹೆಚ್ಚುವರಿ ಖರ್ಚು ಬಾಧಿಸುವುದಿಲ್ಲ’ ಎನ್ನುತ್ತಾರೆ ಕೃಷಿಕ ಮೆಲ್ಲಹಳ್ಳಿ ಮರಿಸ್ವಾಮಿ.
‘ತೊಗರಿ ಬಿತ್ತನೆಯಿಂದ ವರ್ಷದ 4 ತಿಂಗಳು ಮನೆಖರ್ಚಿಗೆ ಅಗತ್ಯ ವರಮಾನ ಪಡೆಯಬಹುದು. ಈ ಸಲ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬಂದಿದ್ದು, ಜನವರಿ ಅಂತ್ಯದವರೆಗೂ ತೊಗರಿ ಕೊಯಿಲು ಸಿಗಲಿದೆ. ಚಳಿ ಮುಂದುವರಿದರೆ ಫೆಬ್ರುವರಿಯಲ್ಲೂ ಫಸಲು ಸಿಗಲಿದೆ. ತೊಗರಿ ಕೃಷಿಯಿಂದ ಬೇಸಿಗೆ ಅವಧಿಯಲ್ಲಿ ಭೂಮಿಯ ಬಿಸಲಿಗೆ ಮೈ ಒಡ್ಡುವ, ವಿಪರೀತ ಕೀಟನಾಶಕ, ರಸಾಯನಿಕ ಗೊಬ್ಬರ ನೀಡುವ ತಾಪತ್ರಯ ತಪ್ಪಲಿದೆ. ಜೊತೆಗೆ ಭೂಮಿಗೆ ಬಹುಮುಖ್ಯವಾಗಿ ಬೇಕಾಗಿರುವ ಸಾರಜನಕ ಹೆಚ್ಚಳವಾಗಲಿದೆ’ ಎಂದು ಗೌಡಹಳ್ಳಿ ಮಹೇಶ್ ಹೇಳಿದರು.
250 ಎಕರೆಯಲ್ಲಿ ಬೆಳೆ: ತಾಲ್ಲೂಕಿನಲ್ಲಿ 250 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಭಾಗದಲ್ಲಿ ಬಿಆರ್‌ಜಿ 7 ತಳಿ ಹೆಚ್ಚು ಇಳುವರಿ ನೀಡಿದ್ದು, 4 ತಿಂಗಳಲ್ಲಿ 5 ಅಡಿ ಬೆಳೆದಿದೆ. ಕಾಂಡಕೊರಕ ರೋಗ ಹೊರತುಪಡಿಸಿದರೆ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಹೊಂದಿದೆ. ಲಘು ಪೋಷಕಾಂಶಗಳಾದ ಜಿಂಕ್ ಮತ್ತು ಬೋರಾನ್ ಬಳಸಿ ಎಕರೆಗೆ 6 ಕ್ವಿಂಟಲ್ ಕಾಯಿ ಬೆಳೆದಿದ್ದೇವೆ ಎನ್ನುತ್ತಾರೆ ರೈತರು.
ಅರಿಸಿನ ರಾಗಿ ಜೋಳದ ಜೊತೆಯೂ ಅವರೆ ಹಾಗೂ ತೊಗರಿಯನ್ನು ಬಿತ್ತನೆ ಮಾಡಬಹುದು. ಎರಡೂ ಬೆಳೆಗಳು ಅಲ್ಫಾವಧಿ ಬೆಳೆಯಾಗಿ ರೈತರಿಗೆ ಉತ್ತಮ ಆದಾಯ ನೀಡುತ್ತಿದೆ.ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.