ADVERTISEMENT

ವಿಜ್ಞಾನ ಲೋಕದೊಳಗೆ ವೃಕ್ಷ ಮಾಹಿತಿ ಹೂರಣ

ಧೀನಬಂಧು ಸಂಸ್ಥೆಯಲ್ಲಿ ‘ಮರ–ಭೂಮಿ ತಾಯಿಯ ವರ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:06 IST
Last Updated 9 ಜುಲೈ 2025, 5:06 IST
ಚಾಮರಾಜನಗರದ ದೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮರ–ಭೂಮಿತಾಯಿಯ ವರ’ ಕಾರ್ಯಕ್ರಮ ಉದ್ಘಾಟಿಸಿದ ಕೆ.ಎಸ್‌.ಮುರಳಿ ಮಾತನಾಡಿದರು
ಚಾಮರಾಜನಗರದ ದೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮರ–ಭೂಮಿತಾಯಿಯ ವರ’ ಕಾರ್ಯಕ್ರಮ ಉದ್ಘಾಟಿಸಿದ ಕೆ.ಎಸ್‌.ಮುರಳಿ ಮಾತನಾಡಿದರು   

ಚಾಮರಾಜನಗರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೃಜನಶೀಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಿತ್ತುಕೊಂಡಿರುವ ಸರ್ಕಾರ ನಾಲ್ಕು ಕೋಣೆಗಳ ಮಧ್ಯೆ ಕಲಿಸಲು ಮುಂದಾಗಿರುವುದು ಮಕ್ಕಳ ಸರ್ವಾಂಗೀಣ ಕಲಿಕೆಗೆ ಪೆಟ್ಟುಕೊಟ್ಟಂತಾಗಿದೆ ಎಂದು ದೀನ ಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ್ ಬೇಸರ ವ್ಯಕ್ತಪಡಿಸಿದರು.

ನಗರದ ದೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮರ–ಭೂಮಿತಾಯಿಯ ವರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆ ನಾಲ್ಕುಗೋಡೆಗಳ ಮಧ್ಯೆಯೇ ಇರಬೇಕು ಎಂದು ಭಾವಿಸುವುದು ಅಪರಾಧ. ಖಾಸಗಿ ಶಾಲೆಗಳ ಕಲಿಕಾ ಮಾದರಿ ಅನುಸರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕಲಿಕಾ ಸಮಯವನ್ನು ವ್ಯರ್ಥಮಾಡುವ ಅನಗತ್ಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ನಿರ್ಬಂಧ ಹೇರುವುದು ಸರಿ. ಅನಗತ್ಯ ಅತಿಯಾದ ತರಬೇತಿಯೂ ಅಗತ್ಯವಿಲ್ಲ. ಆದರೆ, ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಅಡ್ಡಿಪಡಿಸುವುದು ಸಲ್ಲದು ಎಂದರು.

ADVERTISEMENT

ಮರಗಳ ಕುರಿತು ಅಗಾಧ ಮಾಹಿತಿ ನೀಡುವ ಪ್ರದರ್ಶನವನ್ನು ಸಂಸ್ಥೆಯ ವಿಜ್ಞಾನ ಲೋಕದಲ್ಲಿ ಆಯೋಜಿಸಲಾಗಿದ್ದು ಸರ್ಕಾರಿ ಶಾಲಾ–ಕಾಲೇಜು ಮಕ್ಕಳು ವೀಕ್ಷಿಸಬೇಕು. ಸಂಸ್ಕೃತಿ, ಜನಪದ, ಬದುಕಿನೊಂದಿಗೆ ಬೆರೆತುಹೋಗಿರುವ ಪರಿಸರದ ಜ್ಞಾನ ಸಾರ್ವಜನಿಕರಿಗೂ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಕೆ.ಎಸ್‌.ಮುರಳಿ ಮಾತನಾಡಿ, ಪ್ರಕೃತಿಯೊಂದಿಗಿನ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದು ವಿಕಾಸವಾದ ಪ್ರಕ್ರಿಯೆಯಲ್ಲಿ ಮರಗಳ ಮಹತ್ವವನ್ನು ಮನದಟ್ಟು ಮಾಡಿಕೊಳ್ಳಬಹುದು. ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಡಯಟ್‌ ಪ್ರಾಂಶುಪಾಲ ಕಾಶಿನಾಥ್ ಮಾತನಾಡಿ, ಮಕ್ಕಳ ವಿಜ್ಞಾನದ ಬಗ್ಗೆ ಕುತೂಹಲ ತಣಿಸುತ್ತಿರುವ, ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿರುವ ಧೀನಬಂಧು ಸಂಸ್ಥೆಯು ನಾಡಿನ ಸಾಂಸ್ಕೃತಿಕ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸರ್ಕಾರ ಕೂಡ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಮನೆಯ ಆವರಣ, ಹಿತ್ತಲು, ರಸ್ತೆಯ ಬದಿಗಳಲ್ಲಿ ಗಿಡ ನೆಡಲು ಮಕ್ಕಳನ್ನು ಪ್ರೇರೇಪಿಸುತ್ತಿದೆ ಎಂದು ತಿಳಿಸಿದರು.

ಸಾಹಿತಿ ಹನೂರು ಕೃಷ್ಣಮೂರ್ತಿ ಮಾತನಾಡಿ ‘ನಾಲ್ಕುಗೋಡೆಗಳ ಮಧ್ಯೆ ಹೇಳಿಕೊಡುವ ಪಾಠ ಪರಿಣಾಮಕಾರಿಯಲ್ಲ; ಪ್ರಕೃತಿಯೊಂದಿಗಿನ ಪ್ರಾಯೋಗಿಕ ಕಲಿಕೆ ಮಕ್ಕಳ ಮನಸ್ಸಿನೊಳಗೆ ಇಳಿದು ಬಹುಕಾಲ ಉಳಿಯುತ್ತದೆ. ದೀನಬಂಧು ಸಂಸ್ಥೆ ಸೃಜನಶೀಲ ಕಲಿಕೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.

ಶತಮಾನಗಳ ಹಿಂದೆ ಸರ್ಕಾರಿ ಶಾಲೆಗಳ ಆವರಣದಲ್ಲಿ ನೆಟ್ಟ ಗಿಡಗಳು ಹೆಮ್ಮರಗಳಾಗಿ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಹೇಳುತ್ತಿವೆ. ವಿಪರ್ಯಾಸ ಎಂದರೆ ಶಿಕ್ಷಣ ಇಲಾಖೆ ಶತಮಾನ ಕಂಡ ಶಾಲೆ ಹಾಗೂ ಮರಗಳನ್ನು ಉಳಿಸಿಕೊಳ್ಳಲು ಮುಂದಾಗದಿರುವುದು ಬೇಸರದ ಸಂಗತಿ ವಿಷಾದಿಸಿದರು.

ಕಾರ್ಯಕ್ರಮದಲ್ಲಿ ದೀನಬಂಧು ಸಂಸ್ಥೆಯ ಅಧ್ಯಕ್ಷ ಡಾ.ಆರ್‌.ಎಸ್‌.ನಾಗಾರ್ಜುನ, ಪ್ರೊ.ಶಶಿಕಲಾ, ಜಯಂತಿ, ಸಾಲುಮರದ ವೆಂಕಟೇಶ್‌, ಶ್ರೀಕಂಠರಾಜೇ ಅರಸ್‌, ಬಿಳಿಗಿರಿರಂಗನಬೆಟ್ಟದ ರಾಮೇಗೌಡರು ಇದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ವೃಕ್ಷ ಲೋಕ ಅನಾವರಣ

ಧೀನಬಂಧು ಸಂಸ್ಥೆಯ ವಿಜ್ಞಾನ ಲೋಕದ ಆವರಣದಲ್ಲಿ ವೃಕ್ಷ ಲೋಕವೇ ಅನಾವರಣವಾಗಿದೆ. ಜಗತ್ತಿನ ಪ್ರಾಚೀನ ಮರಗಳು ಅತಿ ಎತ್ತರದ ಮರಗಳು ಮರಗಳ ಆಯಸ್ಸು ಪ್ರಾಣಿಗಳಿಗೂ ಸಸ್ಯಗಳಿಗೂ ಇರುವ ಸಂಬಂಧ ದೇವರ ಕಾಡು ನೆಡುತೋಪು ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುವ ಗಿಡ ಮರಗಳ ಮಾಹಿತಿ ನೀಡಲಾಗಿದೆ. ಕಾಡು ಉಳಿಸುವ ಪ್ರಮುಖ ಹೋರಾಟಗಳ ಬಗ್ಗೆಯೂ ವಿವರಗಳು ಇವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.