ADVERTISEMENT

ವಿಜ್ಞಾನ ಲೋಕದೊಳಗೆ ಕೌತುಕಗಳ ಅನಾವರಣ

ಧೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದಲ್ಲಿ ಮರಗಿಡಗಳ ಕುರಿತು ಪ್ರದರ್ಶನ; ಉಚಿತ ಪ್ರವೇಶ

ಬಾಲಚಂದ್ರ ಎಚ್.
Published 12 ಜುಲೈ 2025, 5:36 IST
Last Updated 12 ಜುಲೈ 2025, 5:36 IST
ಚಾಮರಾಜನಗರದ ಧೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದಲ್ಲಿ ಆಯೋಜಿಸಿರುವ ಪ್ರದರ್ಶನದಲ್ಲಿ ಮರಗಳ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಸಹಪಾಠಿಗಳಿಗೆ ಮಾಹಿತಿ ನೀಡುತ್ತಿರುವುದು
ಚಾಮರಾಜನಗರದ ಧೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದಲ್ಲಿ ಆಯೋಜಿಸಿರುವ ಪ್ರದರ್ಶನದಲ್ಲಿ ಮರಗಳ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಸಹಪಾಠಿಗಳಿಗೆ ಮಾಹಿತಿ ನೀಡುತ್ತಿರುವುದು   

ಚಾಮರಾಜನಗರ: ಜಗತ್ತಿನ ಅತ್ಯಂತ ಎತ್ತರದ ಮರ ಯಾವುದು ? ಒಬ್ಬ ವ್ಯಕ್ತಿ 1 ವರ್ಷ ಉಸಿರಾಡಲು ಎಷ್ಟು ಕೆ.ಜಿ ಆಮ್ಲಜನಕ ಬೇಕಾಗಬಹುದು? ನೆಡುತೋಪಿಗೂ ಕಾಡಿಗೂ ಇರುವ ವ್ಯತ್ಯಾಸಗಳೇನು ? ಮರಗಳ ಆಯಸ್ಸು ಎಷ್ಟು ? ಡೈನೋಸಾರ್‌ಗಳಿದ್ದಾಗ ಯಾವ ಮರಗಳು ಇದ್ದವು ? ಹೀಗೆ ವೃಕ್ಷ ಸಂಕುಲದ ಬಗ್ಗೆ ಕುತೂಹಲಕಾರಿ ಉಪಯುಕ್ತ ಮಾಹಿತಿಯು ಧೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದ ಆವರಣದಲ್ಲಿ ಅನಾವರಣಗೊಂಡಿದೆ.

ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳೊಳಗೆ ಕಳೆದುಹೋಗಿರುವ ವಿದ್ಯಾರ್ಥಿಗಳು ಮತ್ತೆ ಪರಿಸರದೊಂದಿಗೆ ಬೆಸೆದುಕೊಳ್ಳಬೇಕು ಎಂಬ ಆಶಯದೊಂದಿಗೆ ಧೀನಬಂಧು ಸಂಸ್ಥೆಯು ವೃಕ್ಷಗಳ ಕುರಿತು ಅಗಾಧ ಮಾಹಿತಿಯನ್ನೊಳಗೊಂಡ ಪ್ರದರ್ಶನವನ್ನು ಆಯೋಜಿಸಿದೆ. 

ಮುಂದಿನ 15 ದಿನಗಳ ಕಾಲ ಪ್ರದರ್ಶನ ವೀಕ್ಷಣೆಗೆ ಲಭ್ಯವಿದ್ದು ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೂ ಮುಕ್ತ ಪ್ರವೇಶವಿದೆ. ಸಹಸ್ರಾರು ಗಿಡ–ಮರಗಳ ಸಚಿತ್ರ ಮಾಹಿತಿಯು ಪ್ರದರ್ಶನದಲ್ಲಿ ಲಭ್ಯವಿದ್ದು ಮಕ್ಕಳ ಜ್ಞಾನ ವಿಕಸನಕ್ಕೆ ಸಹಕಾರಿಯಾಗಿದೆ.

ADVERTISEMENT

ಮಾಲಿನ್ಯ ನಿಯಂತ್ರಣ, ಜೀವವೈವಿಧ್ಯ ರಕ್ಷಣೆ, ಜಲಚಕ್ರ, ಪ್ರಾಣಿಪಕ್ಷಿಗಳ ಆವಾಸಸ್ಥಾನ, ಔಷಧೀಯ ಗುಣ, ಮಣ್ಣಿನ ಫಲವತ್ತತೆ ಹೆಚ್ಚಳ, ಇಂಗಾಲದ ಪ್ರಮಾಣ ತಗ್ಗಿಸುವಿಕೆ, ಪ್ರವಾಹ ನಿಯಂತ್ರಕ ಸೇರಿದಂತೆ ಪರಿಸರದಲ್ಲಿ ಮರ–ಗಿಡಗಳು ವಹಿಸುವ ಪರಿಣಾಮಕಾರಿ ಪಾತ್ರವನ್ನು ಪ್ರದರ್ಶನದಲ್ಲಿ ಬಿಂಬಿಸಲಾಗಿದೆ.

ಮರಗಳ ವಯಸ್ಸಿನ ಬಗ್ಗೆ ತಿರುಳುಗಳ ಉಂಗುರಗಳು ಹೇಳುವ ಪರಿಸರ ಚರಿತ್ರೆಯ ‌ಕಥೆಯನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಬಹುದು. ಮರಗಳ ತೊಗಟೆ, ಎಲೆ, ತಿರುಳುಗಳಿಂದ ತಯಾರಿಸಬಹುದಾದ ಆಯುರ್ವೇದ ಔಷಧಗಳ ಮಾಹಿತಿಯನ್ನೂ ತಿಳಿಯಬಹುದು. ನೂರಾರು ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದ್ದು ಅವುಗಳ ಉಪಯೋಗಗಳನ್ನು ನೋಡಬಹುದು.

ಇದಲ್ಲದೆ ಮರಗಿಡಗಳನ್ನು ಉಳಿಸುವ ನಿಟ್ಟನಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಬಿಷ್ಣೋಯ್ ಚಳವಳಿ, ಚಿಪ್ಕೋ ಚಳವಳಿ, ಕರ್ನಾಟಕದ ಅಪ್ಪಿಕೋ ಚಳವಳಿಗಳಂತ ಚಾರಿತ್ರಿಕ ಹೋರಾಟಗಳನ್ನು ಸ್ಮರಿಸಬಹುದು. ಪ್ರಕೃತಿ ಉಳಿಸಲು ಬದುಕನ್ನೇ ಮೀಸಲಿಟ್ಟ ವೃಕ್ಷಮಾತೆ ತುಳಸಿಗೌಡ, ಸಾಲುಮರದ ತಿಮ್ಮಕ್ಕ, ಡಾ.ಆ.ನ.ಯಲ್ಲಪ್ಪರೆಡ್ಡಿ, ಉಮಾಶಂಕರ್ ಮಂಡಲ್‌, ಜಾದವ್ ಪಯಾಂಗ್, ಬಿಳಿಗಿರಿ ರಂಗನಬೆಟ್ಟದ ಮಾದೇಗೌಡ, ಸಾಲುಮರದ ವೆಂಕಟೇಶ್ ಅವರ ಪರಿಸರ ಕಾಳಜಿಯನ್ನು ಅರಿಯಬಹುದು. 

ಅಪಾಯದಂಚಿನಲ್ಲಿರುವ ಧೂಮಾ, ಕರಗೊಂಗು, ಜಾಯಿಕಾಯಿ, ರಕ್ತಚಂದನ, ಎಣ್ಣೆಮರಗಳನ್ನು ಉಳಿಸಲೇಬೇಕಾದ ಅಗತ್ಯತೆಯನ್ನು ಪ್ರದರ್ಶನದಲ್ಲಿ ತಿಳಿಹೇಳಲಾಗಿದೆ. ಸಾವಿರಾರು ವರ್ಷಗಳ ಕಾಲ ಬದುಕುಳಿಯುವ ಸಾಮರ್ಥ್ಯ ಹೊಂದಿರುವ ಮರಗಳ ಬಗ್ಗೆ ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಾಗಿದೆ. 

ವೃಕ್ಷಗಳ ಮಾಹಿತಿಯ ಜೊತೆಗೆ ವಿಜ್ಞಾನ ಲೋಕದ ಆವರಣದೊಳಗಿರುವ ವಿಜ್ಞಾನ ಕೌತುಕಗಳ ಕಥೆ ಹೇಳುವ ಮಾದರಿಗಳನ್ನು ವೀಕ್ಷಿಸಬಹುದು. ಪಠ್ಯದಲ್ಲಿ ಕಲಿತ ವಿಚಾರಗಳನ್ನು ಪ್ರಾಯೋಗಿಕವಾಗಿ ಮನದಟ್ಟು ಮಾಡಿಕೊಳ್ಳಬಹುದು. 

ಧೀನಬಂಧು ಶಿಕ್ಷಕರ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕದಲ್ಲಿ ಪರಿಸರದಲ್ಲಿ ವೃಕ್ಷಗಳ ಬಹುಮಖ ಪಾತ್ರದ ಬಗ್ಗೆ ಮಾಹಿತಿ ಪ್ರದರ್ಶನ 

‘ಎಲ್ಲದಕ್ಕೂ ವಿರೋಧ ಸಲ್ಲದು’

ಸರ್ಕಾರಿ ಶಾಲೆಯ ಮಕ್ಕಳು ಬಾಹ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸರ್ಕಾರ ನಿರ್ಬಂಧ ಹಾಕಿದೆ. ಆದರೆ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವ ಸರ್ವಾಂಗೀಣ ಕಲಿಕೆಗೆ ಪೂರಕವಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ವೃಕ್ಷಗಳ ಕುರಿತು ಅಗಾಧ ಮಾಹಿತಿಯ ನ್ನೊಳಗೊಂಡ ಪ್ರದರ್ಶನವನ್ನು ಸಂಸ್ಥೆಯ ವಿಜ್ಞಾನ ಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವೀಕ್ಷಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವಕಾಶ ನೀಡಬೇಕು ಎನ್ನುತ್ತಾರೆ ಧೀನಬಂಧು ಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.