ADVERTISEMENT

ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ: ಶಾಸಕ ಪುಟ್ಟರಂಗ ಶೆಟ್ಟಿ

ವಿಶ್ವ ಆದಿವಾಸಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:02 IST
Last Updated 10 ಆಗಸ್ಟ್ 2025, 5:02 IST
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ 31ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ 31ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು   

ಚಾಮರಾಜನಗರ: ‘ಆದಿವಾಸಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ 31ನೇ ವಿಶ್ವ ಆದಿವಾಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ‌ಮಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆದಿವಾಸಿ ಸಮುದಾಯದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದುಕೊಂಡು ಸರ್ಕಾರಿ ನೌಕರಿ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಆದಿವಾಸಿ ಸಮುದಾಯದ ಮಹಿಳೆಯರು ನೇಮಕವಾಗದಿರುವುದು ಬೇಸರದ ಸಂಗತಿ. ಅಂಗನವಾಡಿಗಳಿಗೆ ನೇಮಕವಾಗುವಷ್ಟು ಸಮುದಾಯದಲ್ಲಿ ವಿದ್ಯಾವಂತ ಮಹಿಳೆಯರು ಇಲ್ಲ. ಈ ನಿಟ್ಟಿನಲ್ಲಿ ಆದಿವಾಸಿ ಸಮುದಾಯ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಆಶ್ರಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಹಿಂದೆ ಆದಿವಾಸಿಗಳು ಮದ್ಯಪಾನ ಮಾಡಿಕೊಂಡು ಹಾಡಿಗಳಿಗೆ ಬಂದರೆ ಸೇರಿಸುತ್ತಿರಲಿಲ್ಲ. ಬಹಳ ಕಟ್ಟುನಿಟ್ಟಾಗಿ ಸಾಮಾಜಿಕ ಕಟ್ಟುಪಾಡುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಪ್ರಸ್ತುತ ಬುಡಕಟ್ಟು ಸಮುದಾಯಗಳು ಕುಡಿತದ ದಾಸರಾಗುತ್ತಿರುವುದು ಆತಂಕಕಾರಿ ವಿಚಾರ, ಕುಡಿತದ ಚಟದಿಂದ ಹೊರಬಂದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಆದಿವಾಸಿಗಳು ದುಶ್ಚಟಗಳಿಂದ ಮುಕ್ತರಾದರೆ ಹಾಡಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಆದಿವಾಸಿ ಸಮುದಾಯಗಳಿಗೆ ಮಾರ್ಗದರ್ಶನ ಹಾಗೂ ಅವಕಾಶಗಳು ಸಿಗಬೇಕು. ಸರ್ಕಾರದ ಸವಲತ್ತು ತಲುಪಿಸಬೇಕು ಎಂದರು.

ಆದಿವಾಸಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಬಲಾಢ್ಯ ಜಾತಿಗಳ ನಡುವೆ ಸ್ಪರ್ಧೆ ಮಾಡುವುದು ಕಷ್ಟವಾಗಿದ್ದು, ಸಮುದಾಯ ಶಿಕ್ಷಣ ಹೊಂದಿದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ದೊರೆಯುತ್ತದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ‘ಆದಿವಾಸಿಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದ್ದು, ಪೂರಕವಾಗಿ ಮುಖಂಡರ ಕೋರಿಕೆಯಂತೆ ನಿರಂತರವಾಗಿ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಗಿರಿಜನರ ಸಮಸ್ಯೆ ನು ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ  ಪಡೆಯಲು ಆಸಕ್ತಿ ತೋರಿಸಬೇಕು. ಶಿಕ್ಷಣ ಮೊಟಕುಗೊಳಿಸದೆ ಮುಂದುವರಿಯಬೇಕು’ ಎಂದು ಕಿವಿಮಾತು ಹೇಳಿದರು.

ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಯ.ರಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್‌.ಎಸ್‌.ಬಿಂದ್ಯಾ, ಉಪ ವಿಭಾಗಾಧಿಕಾರಿ ದಿನೇಶ್‌ ಕುಮಾರ್ ಮೀನಾ, ಅರಣ್ಯ ಹಕ್ಕು ಸಮಿತಿ ಸದಸ್ಯ ಡಾ.ಸಿ.ಮಾದೇಗೌಡ, ಪುಟ್ಟಮ್ಮ, ಸೋಲಿಗರ ಅಭಿವೃದ್ದಿ ಸಂಘದ ದೊಡ್ಡ ಸಿದ್ದಯ್ಯ, ಸಮುದಾಯದ ಮುಖಂಡರಾದ ಕೇತಮ್ಮ, ಕೋಣೂರೇಗೌಡ, ಡಾ.ತನ್ಮಯಾ ಇದ್ದರು.

‘ಮುಖ್ಯವಾಹಿನಿಗೆ ಬನ್ನಿ’

ಆದಿವಾಸಿ ಸಮುದಾಯಗಳ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದ್ದು ಸಮಾಜದ ಮುಖ್ಯವಾಹಿನಿ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಸತತ ಹೋರಾಟದ ಫಲವಾಗಿ ಹಾಡಿಗಳಿಗೆ ವಿದ್ಯುತ್ ಸಂಪರ್ಕ ದೊರೆಯುತ್ತಿದೆ. ಸರ್ಕಾರ 5 ಲಕ್ಷ ಆಂದಾಜು ವೆಚ್ಚದಲ್ಲಿ ಗಿರಿಜನರು ಹಾಗೂ ಸೋಲಿಗರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ಆದಿವಾಸಿಗಳಿಗೆ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು. ಆಶ್ರಮ ಶಾಲೆಗಳಲ್ಲಿ 12ನೇ ತರಗತಿಯವರೆಗೆ ಶಿಕ್ಷಣ ದೊರೆಯುತ್ತಿದ್ದು ಸಮುದಾಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಮಂಜುನಾಥ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.