ADVERTISEMENT

ತುತ್ತಿನ ಚೀಲ ತುಂಬಿಸಲು ಹೆಚ್ಚಿದ ಸೋಲಿಗರ ವಲಸೆ

ಕೊಡಗು, ಹಾಸನ, ಕೇರಳಕ್ಕೆ ಗುಳೆ, ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿರುವ ಪೋಷಕರು

ಬಿ.ಬಸವರಾಜು
Published 18 ಫೆಬ್ರುವರಿ 2021, 2:50 IST
Last Updated 18 ಫೆಬ್ರುವರಿ 2021, 2:50 IST
ಕೊಡಗಿಗೆ ಕೆಲಸಕ್ಕೆ ಹೋಗಿದ್ದ ತಾಲ್ಲೂಕಿನ ಸೋಲಿಗರು ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ್ದರು (ಸಂಗ್ರಹ ಚಿತ್ರ)
ಕೊಡಗಿಗೆ ಕೆಲಸಕ್ಕೆ ಹೋಗಿದ್ದ ತಾಲ್ಲೂಕಿನ ಸೋಲಿಗರು ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ್ದರು (ಸಂಗ್ರಹ ಚಿತ್ರ)   

ಹನೂರು: ಅರಣ್ಯ ಉತ್ಪನ್ನ ಹಾಗೂ ಕೃಷಿಯನ್ನೇ ನಂಬಿ ಬದುಕುತ್ತಿದ್ದ ತಾಲ್ಲೂಕಿನ ಗಿರಿಜನ ಹಾಡಿಗಳ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಸೋಲಿಗ ಮುಖಂಡರು ನೀಡುವ ಅಂಕಿ ಅಂಶಗಳ ಪ್ರಕಾರ, ತಾಲ್ಲೂಕಿನಲ್ಲಿ 82 ಹಾಡಿಗಳಿದ್ದು,3,500 ಕುಟುಂಬಗಳಿವೆ. 18 ಸಾವಿರ ಜನರಿದ್ದಾರೆ.

‘ಸ್ಥಳೀಯವಾಗಿ ಕೆಲಸ ಲಭ್ಯವಿಲ್ಲದ ಕಾರಣ ಕೂಲಿ ಹುಡುಕಿಕೊಂಡು ಹಾಸನ, ಕೊಡಗು ಹಾಗೂ ಕೇರಳಕ್ಕೆ ವಲಸೆ ತೆರಳುತ್ತಿದ್ದಾರೆ. ಕೆಲಸಕ್ಕೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ವರ್ಷ ಕೂಲಿ ಕೆಲಸಕ್ಕಾಗಿ 500 ಗಿರಿಜನ ಕುಟುಂಬಗಳ 1,500 ಮಂದಿ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ಬಾರಿ 1,500 ಕುಟುಂಬಗಳ 2,500 ಕ್ಕೂ ಹೆಚ್ಚು ಜನರು ಕೇರಳ, ಕೊಡಗು ಮತ್ತು ಹಾಸನ ಮುಂತಾದ ಕಡೆಗಳಿಗೆ ತೆರಳಿದ್ದಾರೆ’ ಎಂದು ಹೇಳುತ್ತಾರೆ ಗಿರಿಜನ ಮುಖಂಡರು.

ADVERTISEMENT

‘ಕೆಲವರು ಹೆಚ್ಚಿನ ಆದಾಯ ಸಿಗುತ್ತದೆ ಎಂಬ ಕಾರಣಕ್ಕೆ ವಲಸೆ ಹೋದರೆ, ಇನ್ನು ಕೆಲವರು ಅನಿವಾರ್ಯವಾಗಿ ಹೋಗುತ್ತಾರೆ. ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಾರೆ. ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಗ್ರಾಮಕ್ಕೆ ಬರುತ್ತಾರೆ. ಕೃಷಿ ಕೆಲಸ ಮುಗಿದಿದೆ. ಮುಂದಿನ ಕೃಷಿ ಕೆಲಸಕ್ಕೆ ಹಣ ಹೊಂದಿಸಿಕೊಳ್ಳುವ ಸಲುವಾಗಿಯೂ ಜನರು ವಲಸೆ ಹೋಗುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

‘ಮಳೆಗಾಲದ ಸಂದರ್ಭದಲ್ಲಿ ಕೃಷಿ ಕೆಲಸ ಮಾಡುತ್ತೇವೆ. ಕೃಷಿ ಕೆಲಸ ಮುಗಿದು ಬೇಸಿಗೆ ಆರಂಭವಾಗುತ್ತಿದ್ದಂತೆ ನಮಗೆ ಜೀವನ ಸಾಗಿಸುವುದೇ ಕಷ್ಟವಾಗುತ್ತದೆ. ಕೃಷಿ ಕೆಲಸಕ್ಕಾಗಿ ಸಂಘದಲ್ಲಿ ಹಣ ಪಡೆದಿರುತ್ತೇವೆ. ಪ್ರತಿ ತಿಂಗಳು ನಾವು ಹಣ ಕಟ್ಟಬೇಕು. ಈ ವರ್ಷ ಜಮೀನಿನಲ್ಲಿ ಜೋಳ ಹಾಕಿದ್ದೆವು. ಮಳೆಯಿಲ್ಲದೇ ಎಲ್ಲವೂ ಒಣಗಿ ಹೋಯಿತು. ಸಾಲ ಮಾಡಿ ಕೃಷಿ ಮಾಡಿದ್ದೆ. ಈಗ ಅದರ ಸಾಲ ತೀರಿಸಲು ಕೊಡಗಿಗೆ ಬಂದಿದ್ದೇನೆ’ ಎಂದು ರಾಮೇಗೌಡನಹಳ್ಳಿಯ ಮಹಾದೇವಿ ಅವರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಕಳೆದ ವರ್ಷ ಸೇಬಿನಕೋಬೆ, ಹೊಸಪೋಡು, ಕತ್ತೆಕಾಲುಪೋಡು ಮುಂತಾದ ಹಾಡಿಗಳಿಂದ 90ಕ್ಕೂ ಹೆಚ್ಚು ಜನರು ಕೂಲಿ ಕೆಲಸಕ್ಕೆ ಕೊಡಗಿಗೆ ತೆರಳಿದ್ದರು. ಕೋವಿಡ್ ಕಾರಣದಿಂದಾಗಿ ದೇಶವೇ ಲಾಕ್ ಡೌನ್ ಆದಾಗ ಇತ್ತ ಗ್ರಾಮಗಳಿಗೂ ಬರದೇ ಆಹಾರವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾರಕ

‘ಸೋಲಿಗರು ಪ್ರತಿ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ವಲಸೆ ಹೋಗುವ ವಾಡಿಕೆ ಇದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಮುಗಿದು ಸ್ಥಳೀಯವಾಗಿ ಯಾವುದೇ ಕೆಲಸ ಲಭ್ಯವಿಲ್ಲದಿರುವುದು ಇದಕ್ಕೆ ಕಾರಣ. ಸ್ಥಳೀಯ ವೃತ್ತಿ– ಕಸುಬುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯೋಜನೆ ತಯಾರಿಸಿ ಉದ್ಯೋಗ ಒದಗಿಸುವುದರ ಮೂಲಕ ವಲಸೆ ಹೋಗುವುದನ್ನು ನಿಲ್ಲಿಸಬೇಕು’ ಎಂದುಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮುತ್ತಯ್ಯ ಅವರು ಒತ್ತಾಯಿಸಿದರು.

‘ಪ್ರತಿ ಕುಟುಂಬದಲ್ಲೂ ಪೋಷಕರೇ ಮಕ್ಕಳನ್ನು ನೋಡಿಕೊಳ್ಳಬೇಕಾಗಿರುವುದರಿಂದ ವಲಸೆ ಹೋಗುವಾಗ ಅನಿವಾರ್ಯವಾಗಿ ಮಕ್ಕಳನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.ಮನೆಯಲ್ಲಿ ವೃದ್ಧರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಇದು ನಿರಂತರವಾಗಿ ನಡೆಯುತ್ತಲೇ ಇದೆ. ಲಾಕ್‌ಡೌನ್‌ನಿಂದಾಗಿ ಈ ವರ್ಷ ಅದು ಜಾಸ್ತಿಯಾಗಿದೆ' ಎಂದು ಅವರು ಮಾಹಿತಿ ನೀಡಿದರು.

‘ನರೇಗಾ ಅಡಿ ಉದ್ಯೋಗ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ ಅವರು, ಜಿಲ್ಲಾ ಪಂಚಾಯಿತಿ ವತಿಯಿಂದ ಗಿರಿಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದ್ದಾರೆ. ಕೂಡಲೇ ಸ್ಥಳೀಯ ಅಧಿಕಾರಿಗಳನ್ನು ಗ್ರಾಮಗಳಿಗೆ ಕಳುಹಿಸಿ ಜಾಬ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಜಾಬ್ ಕಾರ್ಡ್ ಕೊಡುವುದರ ಜೊತೆಗೆ ನರೇಗಾದಲ್ಲಿ ಕೂಲಿ ಕೆಲಸ ಕೊಡಿಸಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.