ADVERTISEMENT

ಚಾಮರಾಜನಗರ | 2 ತಿಂಗಳಿಂದ ಲಭಿಸಿಲ್ಲ ಪೌಷ್ಟಿಕ ಆಹಾರ; ಬುಡಕಟ್ಟು ನಿವಾಸಿಗಳ ಅಳಲು

ಆಹಾರ ಪದಾರ್ಥಗಳ ವಿತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:52 IST
Last Updated 1 ಆಗಸ್ಟ್ 2025, 5:52 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗ ಮಹಿಳೆಯರು ಸೋಮವಾರ ಪೌಷ್ಟಿಕ ಆಹಾರ ವಿತರಿಸಬೇಕು ಎಂದು ಆಗ್ರಹಿಸಿದರು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗ ಮಹಿಳೆಯರು ಸೋಮವಾರ ಪೌಷ್ಟಿಕ ಆಹಾರ ವಿತರಿಸಬೇಕು ಎಂದು ಆಗ್ರಹಿಸಿದರು   

ಚಾಮರಾಜನಗರ/ಯಳಂದೂರು: ಬುಡಕಟ್ಟು ಸಮುದಾಯಗಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದಿಂದ ಪೂರೈಕೆಯಾಗುವ ಪೌಷ್ಟಿಕ ಆಹಾರ ಪದಾರ್ಥಗಳು ಜಿಲ್ಲೆಯಲ್ಲಿ ಎರಡು ತಿಂಗಳಿನಿಂದಲೂ ಪೂರೈಕೆಯಾಗುತ್ತಿಲ್ಲ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ತಿಂಗಳು ಪೌಷ್ಟಿಕ ಆಹಾರ ವಿತರಿಸಬೇಕು ಎಂಬ ನಿಯಮವಿದ್ದರೂ ಎರಡು ತಿಂಗಳು ಕಳೆದರೂ ಹಂಚಿಕೆ ಮಾಡಿಲ್ಲ. ಮಳೆಗಾಲದಲ್ಲಿ ದುಡಿಮೆಯ ಇಲ್ಲದೆ, ಸರ್ಕಾರದ ಪೌಷ್ಟಿಕ ಆಹಾರವೂ ತಲುಪದೆ ಉಪವಾಸ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆದಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಆಹಾರ ಪದಾರ್ಥ ವಿತರಣೆಗಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಅಲೆದು, ಮನವಿ ಸಲ್ಲಿಸಿ ಸಾಕಾಗಿದೆ. ಆಹಾರ ಪೂರೈಸಲು ಟೆಂಡರ್ ಪಡೆದಿರುವ ಗುತ್ತಿಗೆದಾರನೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ADVERTISEMENT

ಕಾಲಕಾಲಕ್ಕೆ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದು ಸರ್ಕಾರದ ನಿರ್ದೇಶನವಿದ್ದರೂ ಗುತ್ತಿಗೆದಾರ ಪಾಲಿಸುತ್ತಿಲ್ಲ. ಎರಡು ತಿಂಗಳು ಆಹಾರ ದೊರೆಯದೆ ಕಷ್ಟದಲ್ಲಿದ್ದೇವೆ. ಜಿಲ್ಲೆಯ ಕಾಡಂಚಿನ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು ಆಹಾರ ಧಾನ್ಯ ಖರೀದಿಸಲು ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹಾಡಿ ಜನರು ದೂರಿದ್ದಾರೆ.

ಜಿಲ್ಲಾ ಗಿರಿಜನ ಬುಡಕಟ್ಟು ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿ, ‘ಸರ್ಕಾರ ಸೋಲಿಗ ಕುಟುಂಬಗಳಿಗೆ 6 ತಿಂಗಳಿಗೆ ಒಮ್ಮೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವುದು ನೋವಿನ ಸಂಗತಿ. ತಡವಾಗಿ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿರುವ ಪರಿಣಾಮ ಆದಿವಾಸಿಗಳ ಅಪೌಷ್ಟಿಕತೆ ನೀಗಬೇಕು ಎಂಬ ಯೋಜನೆಯ ಮೂಲ ಉದ್ದೇಶವೇ ಸಾಕಾರಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಿಲ್ಲೆಯಲ್ಲಿ 8000ಕ್ಕೂ ಹೆಚ್ಚು ಆದಿವಾಸಿಗಳಿದ್ದು ಪೌಷ್ಟಿಕ ಆಹಾರ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದಾರೆ. ಬುಡಕಟ್ಟು ನಿವಾಸಿಗಳು ಬಹುತೇಕರು ತೀರಾ ಬಡವರಾಗಿದ್ದು ಅಂದು ದುಡಿದು ಅಂದು ತಿನ್ನಬೇಕಾದ ಪರಿಸ್ಥಿತಿ ಇದೆ. ಹೀಗಿದ್ದರೂ 2 ತಿಂಗಳಿಂದ ಪೌಷ್ಟಿಕ ಆಹಾರ ಪೂರೈಸಿದಿರುವುದು ಬೇಸರದ ಸಂಗತಿ. ಕೂಡಲೇ ಆಹಾರ ಪದಾರ್ಧ ಪೂರೈಸಲು ಕ್ರಮ ಕೈಗೊಳ್ಳಬೇಕು ವಹಿಸಬೇಕು’ ಎಂದು ಒತ್ತಾಯಿಸಿದರು.

‘ಬೆಟ್ಟದಲ್ಲಿ ಚಳಿ, ಮಳೆಗೆ ಮಕ್ಕಳು ಮತ್ತು ಮಹಿಳೆಯರು ಹೊರಗೆ ತೆರಳುವುದೇ ದುಸ್ತರವಾಗಿದೆ. ಕೂಲಿ ದೊರೆಯದೆ ಆಹಾರಧಾನ್ಯ ಖರೀದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಂಗಲೇಪೋಡಿನ ಮಹದೇವಮ್ಮ ಆರೋಪಿಸಿದರು.

ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳಿಗೆ ಎರಡು ತಿಂಗಳಿಂದ ಪೌಷ್ಟಿಕ ಆಹಾರ ಪೂರೈಕೆಯಾಗದಿರುವ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಪರಿಶೀಲಿಸಿ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
–ಯೋಗೇಶ್‌ ಪರಿಶಿಷ್ಟ ವರ್ಗಗಳ ಇಲಾಖೆಯ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.