ADVERTISEMENT

ಅರಿಸಿನ ಖರೀದಿ ಕೇಂದ್ರ ಇಂದಿನಿಂದ ಆರಂಭ

ಎಕರೆಗೆ 20 ಕ್ವಿಂಟಲ್‌, ಒಬ್ಬ ರೈತನಿಗೆ ಗರಿಷ್ಠ 40 ಕ್ವಿಂಟಲ್‌ ಮಾರಾಟಕ್ಕೆ ಅವಕಾಶ, 20ರಂದು ಯೋಜನೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 6:09 IST
Last Updated 11 ಏಪ್ರಿಲ್ 2023, 6:09 IST
ಅರಿಸಿನ
ಅರಿಸಿನ   

ಚಾಮರಾಜನಗರ: ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಜಿಲ್ಲೆಯ ರೈತರಿಂದ ಅರಿಸಿನ ಖರೀದಿಸಲು ಮಂಗಳವಾರದಿಂದ (ಏ.11) ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರ ಪ್ರಾರಂಭವಾಗಲಿದೆ.

ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಆಯಾ ತಾಲ್ಲೂಕುಗಳ ರೈತರ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭವಾಗುತ್ತಿದೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ರೈತರು ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿಯ ಆಕ್ಸಿಸ್ ಬ್ಯಾಂಕ್ ಹಿಂಭಾಗದ ಆಂಜನೇಯ ಸ್ವಾಮಿ ಫ್ಲೋರ್ ಹತ್ತಿರವಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಖರೀದಿ ಕೇಂದ್ರವನ್ನು ಚಾಮರಾಜನಗರದ ಎಪಿಎಂಸಿ ಆವರಣದಲ್ಲಿ ತೆರೆಯಲಾಗುತ್ತದೆ.

ರೈತರಿಂದ ಅರಿಸಿನ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.

ADVERTISEMENT

ನೋಂದಣಿಗಾಗಿ ರೈತರು ಆರ್.ಟಿಸಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ (ಆಧಾರ್ ಜೋಡಣೆ ಕಡ್ಡಾಯ) ಭಾವಚಿತ್ರ ಹಾಗೂ ಫ್ರೂಟ್ಸ್ ತಂತ್ರಾಂಶದ ರೈತರ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು. ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ತೋಟಗಾರಿಕೆ/ಕೃಷಿ ಇಲಾಖೆಯಿಂದ ಫ್ರೂಟ್ಸ್ ತಂತ್ರಾಂಶದ ರೈತರ ನೋಂದಣಿ ಸಂಖ್ಯೆ ಪಡೆಯಬೇಕು. ಕಳೆದ ಸಾಲಿನಲ್ಲಿ ಅರಿಸಿನ ಬೆಳೆದು ಬೆಳೆ ಸಮೀಕ್ಷೆಯಲ್ಲಿ ಅರಿಸಿನ ಬೆಳೆ ಎಂದು ಆರ್‌ಟಿಸಿ ವಾರು ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರು.

ನೋಂದಣಿ ಹಾಗೂ ಖರೀದಿ ಕೇಂದ್ರಗಳು ಸರ್ಕಾರಿ ರಜಾ ದಿನಗಳಂದು ಕಾರ್ಯನಿರ್ವಹಿಸುವುದಿಲ್ಲ. ಇದೇ 20ಕ್ಕೆ ಖರೀದಿ ಕೇಂದ್ರವು ಮುಕ್ತಾಯವಾಗಲಿದೆ. ಜಿಲ್ಲೆಯ ರೈತರು ಯೋಜನೆಯ ಸದುಪಯೋಪಡೆಯಬೇಕು. ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ/ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು (ಎಪಿಎಂಸಿ), ಸಹಕಾರ ಇಲಾಖೆಯ ಉಪನಿಬಂಧಕರು, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ವಿಂಟಲ್‌ಗೆ ₹6,694 ನಿಗದಿ

ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸಂಸ್ಕರಿಸಿ ಶುದ್ದೀಕರಿಸಿದ ಪಾಲಿಶ್ ಮಾಡಿದ ಅರಿಸಿನವನ್ನು ಕ್ವಿಂಟಲ್‌ಗೆ ₹6694ರಂತೆ ಖರೀದಿಸಲಾಗುವುದು. ಎಫ್.ಎ.ಕ್ಯೂ ಗುಣಮಟ್ಟವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ನಿಗದಿಪಡಿಸಿದ ಮಾರ್ಗಸೂಚಿಯನ್ವಯ ದೃಢೀಕರಿಸಲಾಗುವುದು. ಶುದ್ದೀಕರಿಸಿ ಪಾಲಿಶ್ ಮಾಡಿದ ಅರಿಸಿನ ಮಾತ್ರ ಖರೀದಿ ಕೇಂದ್ರಕ್ಕೆ ತರಬೇಕು.

ಪ್ರತಿ ಎಕರೆಗೆ 20 ಕ್ವಿಂಟಲ್ ಹಾಗೂ ಒಬ್ಬರ ರೈತರಿಂದ ಗರಿಷ್ಠ 40 ಕ್ವಿಂಟಲ್ ಮಾತ್ರ ಖರೀದಿಸಲಾಗುವುದು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ಹಣ ಪಾವತಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.