ADVERTISEMENT

ಚಾಮರಾಜನಗರದಲ್ಲಿ 98 ಮಂದಿ ಸೋಂಕುಮುಕ್ತ, 31 ಪ್ರಕರಣ ದೃಢ

ಒಂದೇ ದಿನ 903 ಪರೀಕ್ಷೆ, ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:26 IST
Last Updated 15 ಸೆಪ್ಟೆಂಬರ್ 2020, 16:26 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 98 ಮಂದಿ ಕೋವಿಡ್‌–19 ಮುಕ್ತರಾಗಿದ್ದಾರೆ. ಹೊಸದಾಗಿ 31 ಮಂದಿಗೆ ಸೋಂಕು ತಗುಲಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಹಂಪಾಪುರದ 65 ವರ್ಷದ ವೃದ್ಧ ಸೆ. 5ರಿಂದ ಹೋಂ ಐಸೊಲೇಷನ್‌ನಲ್ಲಿದ್ದರು. ಸೆ.13ರ ರಾತ್ರಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಭುಜಗನಪುರ ನಿವಾಸಿ 62 ವರ್ಷದ ವ್ಯಕ್ತಿ ಸೆ.14ರಂದು ಹೃದ್ರೋಗ ಹಾಗೂ ಲಿವರ್ ಸಮಸ್ಯೆ ಕಾರಣದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರು ಮೃತಪಟ್ಟಿದ್ದರು. ನಂತರ ಪರೀಕ್ಷಿಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಇದರೊಂದಿಗೆ, ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 68ಕ್ಕೆ ಏರಿದೆ. 48 ಮಂದಿ ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದರೆ, 20 ಮಂದಿ ಇತರೆ ಅನಾರೋಗ್ಯದಿಂದ ಪ್ರಾಣಕಳೆದುಕೊಂಡಿದ್ದಾರೆ.

ADVERTISEMENT

ಹೊಸ 31 ಪ್ರಕರಣಗಳೊಂದಿಗೆ ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 3,107ಕ್ಕೆ ಏರಿದೆ. ಮಂಗಳವಾರದ 98 ಮಂದಿಯೂ ಸೇರಿದಂತೆ 2,501 ಮಂದಿ ಗುಣಮುಖರಾಗಿದ್ದಾರೆ. 539 ಸಕ್ರಿಯ ಪ್ರಕರಣಗಳಿವೆ. 243 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರೆ, 24 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ 933 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಆರ್‌ಟಿಪಿಸಿಆರ್‌ 412, ರ‍್ಯಾಪಿಡ್‌ ಆ್ಯಂಟಿಜೆನ್‌ 449 ಮತ್ತು ಟ್ರು ನಾಟ್‌ ವಿಧಾನದಲ್ಲಿ 72 ಪರೀಕ್ಷೆಗಳನ್ನು ನಡೆಸಲಾಗಿದೆ. 903 ಮಂದಿಯ ವರದಿ ನೆಗೆಟಿವ್‌ ಬಂದಿದೆ. 30 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.