ADVERTISEMENT

ಸೋಮಣ್ಣ ವಜಾಗೆ ಆಗ್ರಹ, ಕಪ್ಪು ಬಾವುಟ ಪ್ರದರ್ಶನದ ಘೋಷಣೆ

ರೈತರ ಕುಂದು ಕೊರತೆ ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವ: ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 16:14 IST
Last Updated 22 ಅಕ್ಟೋಬರ್ 2022, 16:14 IST
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಭೆಗೆ ತಡವಾಗಿ ಬಂದಿದ್ದನ್ನು ಖಂಡಿಸಿ ರೈತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಜಿಲ್ಲಾಡಳಿತ ಭವನದ ಗೇಟ್‌ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಭೆಗೆ ತಡವಾಗಿ ಬಂದಿದ್ದನ್ನು ಖಂಡಿಸಿ ರೈತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಜಿಲ್ಲಾಡಳಿತ ಭವನದ ಗೇಟ್‌ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರೈತರ ಕುಂದುಕೊರತೆಗಳ ಸಭೆಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಒಂದೂವರೆ ಗಂಟೆ ವಿಳಂಬವಾಗಿ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತ ಮುಖಂಡರು ಶನಿವಾರ ಸಭೆ ಬಹಿಷ್ಕರಿಸಿದರು.

ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಶಾಸಕರು, ರೈತಮುಖಂಡರು ಹಾಗೂ ಅಧಿಕಾರಿಗಳ ಸಭೆ ಶನಿವಾರ 12 ಗಂಟೆಗೆ ನಿಗದಿಯಾಗಿತ್ತು.

ಸಚಿವರು ಬೆಂಗಳೂರಿನಿಂದ ಜಿಲ್ಲೆಗೆ ಬರುವಾಗ ತಡವಾಗಿತ್ತು. ಸಭೆಗೆ ಬರುವುದಕ್ಕೂ ಮೊದಲು ಅವರು ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಬಳಿಕ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪೌರಕಾರ್ಮಿಕರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಹೊರಟು ಕುಂದು ಕೊರತೆ ಸಭೆಗೆ ಬಂದರು.

ADVERTISEMENT

ನಿಗದಿಯಂತೆ 12 ಗಂಟೆಗೆ ಬಂದು ಕಾದು ಕುಳಿತಿದ್ದ ರೈತ ಸಂಘದ ಎರಡು ಬಣಗಳು, ಕಬ್ಬುಬೆಳೆಗಾರರ ಸಂಘದ ಮುಖಂಡರು ಇದರಿಂದ ಕೆರಳಿದರು. ಬಿ.ರಾಚಯ್ಯ ಜೋಡಿ ರಸ್ತೆಯ ಜಿಲ್ಲಾಡಳಿತ ಭವನದ ಗೇಟ್‌ ಮುಂಭಾಗ ದಿಢೀರ್‌ ಧರಣಿ ಕುಳಿತು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವ ಸ್ಥಾನದಿಂದ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ‍್ರಭು, ಇನ್ನೊಂದು ಬಣದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್‌ , ಕಬ್ಬು ಬೆಳೆಗಾರರ ಸಂಘದ ಮೈಸೂರು –ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಸಚಿವ ಸೋಮಣ್ಣ ವಿರುದ್ಧ ಹರಿಯಾಯ್ದರು.

‘ನಮ್ಮ ಒತ್ತಡದಿಂದಾಗಿ ರೈತರ ಸಮಸ್ಯೆಗಳನ್ನು ಚರ್ಚಿಸಲು ಸಭೆ ಕರೆಯಲಾಗಿತ್ತು. ನಾವು ಒಂದೂವರೆ ಗಂಟೆ ಕಾದಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿಯಮ ಪಾಲನೆ ಗೊತ್ತಿಲ್ಲ. ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇನ್ನು ಮುಂದೆ ಸೋಮಣ್ಣ ಕರೆಯುವ ಯಾವುದೇ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ. ಮುಖ್ಯಮಂತ್ರಿಯೇ ನಮ್ಮ ಜೊತೆ ಸಭೆ ನಡೆಸಬೇಕು. ಸಚಿವರನ್ನು ಜಿಲ್ಲೆಗೆ ಬರುವುದಕ್ಕೆ ನಾವು ಬಿಡುವುದಿಲ್ಲ. ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ಹೊನ್ನೂರು ಪ್ರಕಾಶ್‌ ಹೇಳಿದರು.

ವಜಾ ಮಾಡಿ: ‘ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಸೋಮಣ್ಣ ಅವರನ್ನು ತಕ್ಷಣವೇ ಉಸ್ತುವಾರಿ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿ ಭೇಟಿ ಸಂಬಂಧ ಸೋಮವಾರ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸುವುದಕ್ಕೂ ನಾವು ಬಿಡುವುದಿಲ್ಲ’ ಎಂದು ಆಗ್ರಹಿಸಿದರು.

ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ‘ಸುರೇಶ್‌ ಕುಮಾರ್‌ ಬಿಟ್ಟರೆ ಬೇರೆ ಯಾರೂ ರೈತರ ಸಭೆ ಕರೆದಿಲ್ಲ. ಒಂದು ವರ್ಷ ಸಭೆ ನಡೆದಿಲ್ಲ. ಮೊನ್ನೆ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಅದರ ಬಗ್ಗೆ ಚರ್ಚೆ ನಡೆಸಲು ತಡವಾಗಿ ಬಂದಿದ್ದಾರೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ವರ್ಗಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಇದೆ’ ಎಂದು ಅವರು ಆರೋಪಿಸಿದರು.

‘ಮುಖ್ಯಮಂತ್ರಿ ಜಿಲ್ಲೆಗೆ ಬಂದು ರೈತರ ಸಭೆ ನಡೆಸಬೇಕು. ರೈತರ ಬಗ್ಗೆ ಕಾಳಜಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯವರನ್ನು ಕರೆದುಕೊಂಡು ಬಂದು ಜಿಲ್ಲೆಯಲ್ಲಿ ಸಭೆ ನಡೆಸಲಿ’ ಎಂದು ಹೇಳಿದರು.

ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ರೈತ ಮುಖಂಡರನ್ನು ಮನವೊಲಿಸಲು ಪ್ರಯತ್ನ ನಡೆಸಿದರು. ಆದರೆ, ಮುಖಂಡರು ಪಟ್ಟು ಸಡಿಸಲಿಲ್ಲ. ರೈತರ ಅನುಪಸ್ಥಿತಿಯಲ್ಲಿ ಸೋಮಣ್ಣ ಅವರು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಡಿ.ಸಿ ವರ್ಗ ಖಂಡಿಸಿ ಪ್ರತಿಭಟನೆ
ಇದಕ್ಕೂ ಮೊದಲು ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ತಕ್ಷಣವೇ ಆದೇಶ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಹೊನ್ನೂರು ಪ್ರಕಾಶ್‌, ಹೆಬ್ಬಸೂರು ಬಸವಣ್ಣ, ಗುರುಪ್ರಸಾದ್‌, ಜ್ಯೋತಿಗೌಡನಪುರ ಸಿದ್ದರಾಜು, ಹೊನ್ನೂರು ಬಸವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.