ಚಾಮರಾಜನಗರ/ಯಳಂದೂರು: ಶ್ರಾವಣ ಮಾಸದ ಹಬ್ಬಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿರುವ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಗುರುವಾರ ಸಿದ್ಧತೆಗಳು ಜೋರಾಗಿತ್ತು.
ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಪೂಜಾ ಪರಿಕರಗಳನ್ನು ಸಾರ್ವಜನಿಕರು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಹೂ, ಹಣ್ಣು, ಅರಿಶಿನ, ಕುಂಕುಮ, ಬಳೆ, ಸೀರೆ, ರವಿಕೆ ಸೇರಿದಂತೆ ಹಲವು ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂತು. ಲಕ್ಷ್ಮೀಯನ್ನು ಸರ್ವಾಲಂಕೃತಗೊಳಿಸಿ ಆರಾಧಿಸುವ ಪದ್ಧತಿ ರೂಢಿಯಲ್ಲಿರುವುದರಿಂದ ದೇವಿಯ ಮುಖವಾಡಗಳನ್ನು ಖರೀದಿಸಿದರು.
ಖರೀದಿ ಭರಾಟೆ ಜೋರು:
ಹಬ್ಬಕ್ಕೆ ಹೊಸ ಬಟ್ಟೆಯ ಖರೀದಿ ಭರಾಟೆ ಜೋರಾಗಿತ್ತು. ನಗರದ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ದಟ್ಟಣೆ ಜೋರಾಗಿತ್ತು. ದೇವರ ಅಲಂಕಾರಕ್ಕೆ ಚಿನ್ನ ಹಾಗೂ ಬೆಳ್ಳಿ ಬಳಸುವ ಸಂಪ್ರದಾಯ ಇರುವುದರಿಂದ ಚಿನ್ನಾಭರಣ ಖರೀದಿಯೂ ಹೆಚ್ಚಾಗಿತ್ತು.
ಬೆಲೆ ಗಗನಕ್ಕೆ:
ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆ.ಜಿಗೆ ₹100 ದಾಟಿದೆ. ಸೇಬು, ಮೋಸಂಬಿ, ದ್ರಾಕ್ಷಿ, ಸಪೋಟ ಸೇರಿದಂತೆ ಎಲ್ಲ ಹಣ್ಣುಗಳ ದರ ಶೇ 25ರಷ್ಟು ಹೆಚ್ಚಾಗಿದೆ ಎಂದು ಹಣ್ಣಿನ ವ್ಯಾಪಾರಿ ಮಂಜುನಾಥ್ ತಿಳಿಸಿದರು.
ಲಕ್ಷ್ಮೀ ಪೂಜೆಗೆ ಹೆಚ್ಚು ಹೂವು ಬಳಕೆ ಮಾಡುವ ಹಿನ್ನೆಲೆಯಲ್ಲಿ ಎಲ್ಲ ಹೂಗಳ ದರ ಗಗನಕ್ಕೇರಿದೆ. ಸೇವಂತಿಗೆ ಮಾರಿಗೆ ₹200 ಮುಟ್ಟಿದೆ. ಮಲ್ಲಿಗೆ ಕೆಜಿಗೆ ₹800 ರಿಂದ ₹1000, ಗುಲಾಬಿ ₹300 ರಿಂದ ₹400, ಕನಕಾಂಬರ ₹1,200ರಿಂದ ₹1600 ಮುಟ್ಟಿದೆ.
ಐಶ್ವರ್ಯದ ಅಧಿದೇವತೆ:
ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಲಕ್ಷ್ಮಿಯ ಅವತಾರಗಳಲ್ಲಿ ಲಕ್ಷ್ಮಿ ಭಕ್ತರನ್ನು ಪೊರೆಯುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಲಕ್ಷ್ಮಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಹಬ್ಬಕ್ಕೆ ಮುನ್ನವೇ ಸುಮಂಗಲೆಯರು ಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಯಳಂದೂರು ತಾಲ್ಲೂಕಿನ ಮದ್ದೂರು ಬಳಿಯ ವರಮಹಾಲಕ್ಷ್ಮಿ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ. ಮುಂಜಾನೆಯಿಂದ ಉಪವಾಸವಿದ್ದು ವ್ರತಧಾರಿಗಳಾಗಿ ಸುಮಂಗಲೆಯರು ಪೂಜೆ ಸಲ್ಲಿಸಲಿದ್ದಾರೆ. ದೇವತೆಯ ಮುಂದೆ ನೈವೇದ್ಯ ಮಾಡಿದ ಹೊಸ ಬಳೆ ಧರಿಸಿ, ಅರಿಶಿನ, ಕುಂಕುಮಾರ್ಚನೆ ನೆರೆವೇರಿಸಿ ಸಡಗರ ಸಂಭ್ರಮಗಳಿಂದ ಪಾಲ್ಗೊಳ್ಳಲಿದ್ದಾರೆ.
ಹಬ್ಬದ ದಿನ ನಸುಕಿನಲ್ಲಿ ಎದ್ದು ಮನೆ ಶುಚಿಯಾಗಿಸಿ ದೇವರ ಕೋಣೆಯ ಮುಂಭಾಗ ಹೂ, ಬಾಳೆ ಮತ್ತು ಮಾವಿನ ಚಿಗುರುಗಳನ್ನು ಕಟ್ಟಲಾಗುತ್ತದೆ. ಪೂಜಾ ಸ್ಥಳದಲ್ಲಿ ಲಕ್ಷ್ಮಿಯ ಪ್ರತೀಕವಾದ ಕಳಸ ಇಟ್ಟು ಅಕ್ಕಿ ತುಂಬಿ ಲಕ್ಷ್ಮಿ ಮುಖವಾಡಕ್ಕೆ ವೀಳ್ಯದೆಲೆ ಸಿಂಗಾರ ಮಾಡಿ, ಹಣ್ಣು-ಸಿಹಿ ಇಟ್ಟು ಸಿಂಗರಿಸಲಾಗುತ್ತದೆ. 12 ಎಳೆಯ ದಾರಗಳಿಗೆ ಅರಿಶಿನ ಹಚ್ಚಿ ಆರಾಧನೆ ಮಾಡಿದ ನಂತರ ಹೆಣ್ಣುಮಕ್ಕಳು ಕಂಕಣದಂತೆ ಕಟ್ಟಿಕೊಳ್ಳುವ ಸಂಪ್ರದಾಯ ಇದೆ ಎನ್ನುತ್ತಾರೆ ಪಟ್ಟಣದ ಶೋಭಾ ಸುರೇಶ್.
ಮದ್ದೂರು ವರ ಮಹಾಲಕ್ಷಿ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಸುವರ್ಣಾವತಿ ನದಿಯ ಎಡ ದಂಡೆಯಲ್ಲಿ ಹೊಯ್ಸಳರು ಶಿವ ಹಾಗೂ ಲಕ್ಷ್ಮಿ ದೇಗುಲ ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ. ಪುರಾಣದ ಸ್ತ್ರೋತ್ರಗಳಲ್ಲಿ ಶಿವ ಮತ್ತು ಲಕ್ಷ್ಮಿ ಅಣ್ಣ-ತಂಗಿಯರ ಬಾಂಧವ್ಯದ ಪ್ರತಿರೂಪವಾಗಿ ಸ್ತುತಿಸಲಾಗಿದೆ. ಹಾಗಾಗಿ, ಸಹೋದರರು ದೇಗುಲಕ್ಕೆ ಕುಟುಂಬಸ್ಥರಾಗಿ ಬಂದು ಹರಕೆ ಸಲ್ಲಿಸಿ, ಸಹೋದರಿಯರಿಗೆ ಶುಭ ಕೋರುವ ವಾಡಿಕೆ ಇಲ್ಲಿದೆ.
ಈ ಬಾರಿ ಪೂಜಾ ಮುಹೂರ್ತ ಬೆಳಿಗ್ಗೆ 6.26 ರಿಂದ 8.29ರವರೆಗೆ ಇದೆ. ಬ್ರಾಹ್ಮಿ ಮೂಹೂರ್ತದಲ್ಲಿ ಅಭಿಷೇಕ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಆಗಮಿಕರಾದ ನಾಗಶಯನ ಭಟ್ ಹೇಳಿದರು.
ವರ ಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಜೋರು | ದರ ಏರಿಕೆ ನಡುವೆಯೂ ಕುಂದದ ಖರೀದಿ ಉತ್ಸಾಹ | ಹೂ, ಹಣ್ಣು, ಬಾಳೆ ಕಂದು, ಕಬ್ಬಿನ ಜೊಲ್ಲೆ ಮಾರಾಟ
ಪೌರಾಣಿಕ ಕಥೆ
ದೂರ್ವಾಸ ಮುನಿಗಳ ಶಾಪದಿಂದ ಇಂದ್ರ ಶಾಪಕ್ಕೆ ಸಿಲುಕಿದಾಗ ಸ್ವರ್ಗಲಕ್ಷ್ಮಿ ಬೇಸರಿಂದ ವೈಕುಂಠ ಸೇರುತ್ತಾಳೆ. ಆಗ ದೇವತೆಗಳು ದುಃಖಿತರಾಗಿ ಬ್ರಹ್ಮನನ್ನು ಮುಂದಿಟ್ಟು ಪ್ರಾರ್ಥಿಸುತ್ತಾರೆ. ನಂತರ ವಿಷ್ಣುವಿನ ಸಲಹೆಯಂತೆ ದೇವತೆಗಳು ದಾನವರ ಜೊತೆ ಕ್ಷೀರ ಸಮುದ್ರ ಮಥಿಸಿದಾಗ ಮಹಾಲಕ್ಷ್ಮಿ ಅವತರಿಸಿ ಆಕೆಯನ್ನು ವಿಷ್ಣು ವರಿಸಿಸುತ್ತಾನೆ. ಈ ದಿನವನ್ನು ವರ ಮಹಾಲಕ್ಷ್ಮಿ ಹಬ್ಬವನ್ನಾಗಿ ಆಚರಿಸಿಕೊಂಡು ಬರಲಾಗುತ್ತದೆ ಎಂಬುದು ಪೌರಾಣಿಕ ಹಿನ್ನಲೆ.
ಗ್ರಾಮಗಳಲ್ಲೂ ಲಕ್ಷ್ಮಿ ಆರಾಧನೆ
ದಶಕಗಳ ಹಿಂದೆ ಹಬ್ಬವನ್ನು ಉಳ್ಳವರು ಹೆಚ್ಚಾಗಿ ಆಚರಿಸುತ್ತಿದ್ದು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನಡೆಯುತ್ತಿದ್ದ ಹಬ್ಬ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ದೇವಾಲಯದಲ್ಲಿ ಲಕ್ಷ್ಮಿ ಸಹಸ್ರನಾಮ ಪಠಣ ಕೀರ್ತನೆ ನಡೆಯಲಿದೆ. ಕಜ್ಜಾಯ ಚಕ್ಕುಲಿ ಕೋಡುಬಳೆ ಸಮರ್ಪಣೆಯ ಜೊತೆಗೆ ಮುತೈದೆಯದರಿಗೆ ಬಾಗಿನ ನೀಡಲಾಗುತ್ತದೆ.
ಮಹಿಳೆಯರಿಗೆ ಅರಿಶಿನ ಕುಂಕುಮ ಹೂ ಬಳೆ ವಿತರಣೆ
ಇಂದುಶ್ರೀವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡೆ ಸೇವಾ ಸಂಸ್ಥೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆ.8ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ಹೂ ಬಳೆ ರವಿಕೆ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ. ಬಂಗಾರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.