ADVERTISEMENT

ಮಳೆಯ ನಡುವೆ ಅಣಬೆಗಳ ಮಾಯಾಲೋಕ

ನಗು ಮುಖದ ಸುಂದರಿಯರ ಹಿಂದೆ ಸಾವಿನ ವಾಸನೆ, ಎಲ್ಲವೂ ಆಹಾರ ಯೋಗ್ಯವಲ್ಲ

ನಾ.ಮಂಜುನಾಥ ಸ್ವಾಮಿ
Published 12 ಸೆಪ್ಟೆಂಬರ್ 2020, 16:53 IST
Last Updated 12 ಸೆಪ್ಟೆಂಬರ್ 2020, 16:53 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬನದ ಮಳೆ ಕಾಡುಗಳಲ್ಲಿ ಕಂಡುಬರುವ ವಿವಿಧ ರೀತಿಯ ಅಣಬೆಗಳು
ಯಳಂದೂರು ತಾಲ್ಲೂಕಿನ ಬಿಳಿಗಿರಿಬನದ ಮಳೆ ಕಾಡುಗಳಲ್ಲಿ ಕಂಡುಬರುವ ವಿವಿಧ ರೀತಿಯ ಅಣಬೆಗಳು   

ಯಳಂದೂರು: ಮುಂಗಾರು ಮಳೆ ಮತ್ತೆ ಸುರಿಯಲು ಆರಂಭಿಸಿದೆ. ಸುತ್ತಲೂ ಪಸರಿಸಿದ ಹಸಿರಿನ ಸಿರಿಯ ನಡುವೆ ನಾನಾ ನಮೂನೆಯ ಅಣಬೆಗಳು ಅರಳಿವೆ. ಅದರಲ್ಲೂಅಗಾರಿಕಸ್‌ ಪ್ರಭೇದಕ್ಕೆ ಸೇರಿದ ಅಣಬೆಗಳು ತಮ್ಮ ಬಣ್ಣಗಳಿಂದ ಗಮನಸೆಳೆಯುತ್ತವೆ. ಇವುಗಳ ಬಣ್ಣ ನಮ್ಮ ಕಣ್ಣನ್ನು ಸೆಳೆದರೆ, ಇವುಗಳ ಸೇವನೆ ಸಾವನ್ನೇ ಆಹ್ವಾನಿಸುತ್ತವೆ. ಅಷ್ಟು ವಿಷಕಾರಿ ಇವು.

ಪೂರ್ವ ಮುಂಗಾರಿನಲ್ಲಿ ಅಪರೂಪದ ಅಣಬೆಗಳು ಮೈದಾಳಿದರೆ, ಮಳೆಕಾಡುಗಳಲ್ಲಿಸಂಚರಿಸುವವರಿಗೆ ಮತ್ತಷ್ಟು ಚಿತ್ರ, ವಿಚಿತ್ರ ಅಣಬೆ ಕಾಣಸಿಗುತ್ತದೆ. ಬಿಆರ್‌ಟಿ ಅಡವಿಯ ಕಾಫಿಯ ತೋಟಗಳ ಕಿರುದಾರಿಗಳಲ್ಲಿ ಕಾಣಸಿಗುವ ಅಣಬೆಗಳಚಿತ್ತಾರ ಲೋಕ ಕಣ್ಮನ ಸೆಳೆಯುತ್ತದೆ. ಆನೆ ಲದ್ದಿ, ದಟ್ಟ ಪೊದೆ, ಒಣಗಿಜಳ್ಳಾದ ಕಾಂಡಗಳ ಸಮೀಪ, ಒಣಗಿದ ವೃಕ್ಷಗಳ ಮೇಲೆ ತೇವಾಂಶ ಏರಿದಾಗ ಕೇಸರಿ, ಮಾಸಲುಬಿಳಿ, ಹಳದಿ, ಕಂದು, ಮಾಸಲು ವರ್ಣದ ಅಣಬೆಗಳು ಜನ್ಮ ತಾಳಿ ಬೆಡಗು, ಬಿನ್ನಾಣಪ್ರದರ್ಶಿಸುತ್ತವೆ.

ಬಣ್ಣದ ಅಣಬೆ ವಿಶೇಷ:‘ಅಣಬೆಗಳನ್ನು ಮಳೆ ಸುರಿದ ಮುಂಜಾವಿನಲ್ಲಿ ಎಲ್ಲ ಊರು, ಕೇರಿಗಳ ಬಳಿ, ಹುತ್ತಗಳ ಮೇಲೆಹಲವು ಬಣ್ಣ, ಆಕಾರ, ರೂಪಗಳಲ್ಲಿ ಕಾಣಬಹುದು. ಹುಚ್ಚಣಬೆ, ಮರ ಅಣಬೆ, ಬಣ್ಣದ ಅಣಬೆಗಳುನೋಡಲಷ್ಟೇ ಚಂದ ಇರುತ್ತವೆ. ಇವುಗಳು ಬಳಕೆಗೆ ಅರ್ಹವಲ್ಲ. ಆದರೆ, ಛತ್ರಿಯಂತೆಹರಡಿಕೊಳ್ಳುವ, ಶ್ವೇತಧಾರಿಯಾದ ಕೆಲವಷ್ಟೇ ಪ್ರಭೇದಗಳನ್ನು ತರಕಾರಿಯಂತೆ ಬಳಸುತ್ತಾರೆ’ಎಂದು ಬಿಆರ್‌ಟಿಯ ಸಸ್ಯತಜ್ಞ ರಾಮಾಚಾರಿ ಹೇಳಿದರು.

ADVERTISEMENT

ಬೇಕೆಂದಾಗ ಸಿಗದು:‘ಶಿಲೀಂದ್ರ ಸಸ್ಯಗಳಾದ ಅಣಬೆಗಳು ಮಳೆಗಾಲದಲ್ಲಿ ಕೊಳೆತು ನಾರುವ ವಸ್ತು, ಕಳಿತಪೊದೆಸಸ್ಯ, ಮರದ ಕಾಂಡ ಮತ್ತು ಸೆಗಣಿ, ಕೊಳೆತ ಸಸ್ಯರಾಶಿಗಳ ನಡುವೆ ದಿಢೀರನೆಪ್ರತ್ಯಕ್ಷ ಆಗುತ್ತವೆ. ಇವು ಬೇಕಾದಾಗಲೆಲ್ಲ ಸಿಗುವುದಿಲ್ಲ. ಅಪರೂಪದ ಆಹಾರವಾಗಿ ಬಳಕೆ ಆಗುತ್ತದೆ. ಕೆಲವರು ಇವನ್ನು ಮಾಂಸಾಹಾರ ಎಂದು ತಿಳಿಯುತ್ತಾರೆ. ನುರಿತವರುಸೇವನೆಗೆ ಯುಕ್ತವಾದ ಅಣಬೆಗಳನ್ನು ಗುರುತಿಸಿ ಆಹಾರದಲ್ಲಿ ಬಳಸಬಹುದು’ ಎಂದು ಬಿಳಿಗಿರಿಬೆಟ್ಟದ ಮೂಲಿಕೆ ತಜ್ಞ ಬೊಮ್ಮಯ್ಯ ತಿಳಿಸಿದರು.

ನೆಲ ಅಣಬೆಗಳಿಗಿಂತ ಹೆಚ್ಚು ಆಕರ್ಷಕ ಆಗಿರುವುದು ಮರ ಹಾಗೂ ಹುತ್ತದ ಅಣಬೆ. ಮುರಿದ ಮರ,ನೆನೆದ ಕಟ್ಟಿಗೆ ತುಂಡು, ಮರದ ಬೊಡ್ಡೆಗಳ ಮೇಲೆ ಈ ಮರ ಅಣಬೆಗಳ ವಿಸ್ಮಯಲೋಕ ವಿಕಸಿಸುತ್ತದೆ. ಮಳೆ ಸುರಿದ ಸಂದರ್ಭದಲ್ಲಿ ಕಾಡು–ನಾಡು ಎನ್ನದೆ ಪರಿಸರಕ್ಕೆ
ಜೀವಕಳೆ ತುಂಬುವ ಅಣಬೆಗಳು ಮಾತ್ರ ಭುವಿಗೆ ತಂಪು ತುಂಬಿದ ದಿನಗಳನ್ನು ನೆನಪಿಸುತ್ತದೆ.

ಅಗಾರಿಕಸ್ ಅಣಬೆಗಳ ವೈವಿಧ್ಯ:ಇವುಗಳ 300 ಜಾತಿಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಪತ್ರ ಹರಿತ್ತುಇಲ್ಲದ ಕಾರಣ, ಇವು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳವು. ಕೊಂಬೆ, ರೆಂಬೆ, ಬೇರುಇರುವುದಿಲ್ಲ. ಜೀವಿ–ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ತಂತುಗಳು ಅಣಬೆ ಕಿತ್ತಾಗನೆಲದಲ್ಲಿ ಸೇರುತ್ತದೆ. ಬೇರಿನಂತೆ ಕಾಣುವ ಬಿಳಿ ದಂಟುಗಳು ಈ ಸಸ್ಯದ ಮುಖ್ಯ ಅಂಗ.ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗಗಳು ಅಣಬೆಗಳ ಫಲ ಕಾಯಗಳು. ಅಗಾರಿಕಸ್‌ಜಾತಿಯ ಬಟನ್‌ ಮತ್ತು ಪೀಲ್ಡ್‌ ಅಣಬೆಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಹಾರವಾಗಿ ಬಳಸಲಾಗುತ್ತದೆ. ಮೋಹಕವಾಗಿ ಬೆಳೆಯುವ ವಿಷಕಾರಿ ಅಗರಿಕಸ್‌ ಅಣಬೆಗಳಬಳಕೆಯನ್ನು ಭಾತದಲ್ಲಿ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.