ADVERTISEMENT

ಕೋವಿಡ್: ಶಾಲೆ ಆರಂಭಕ್ಕೆ ವಾಟಾಳ್‌ ನಾಗರಾಜ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:32 IST
Last Updated 24 ಜೂನ್ 2021, 5:32 IST
ವಾಟಾಳ್‌ ನಾಗರಾಜ್‌ ಅವರು ಖಾಲಿ ಬಿಂದಿಗೆ ಹೊತ್ತುಕೊಂಡು ಏಕಾಂಗಿ ಪ್ರತಿಭಟನೆ ನಡೆಸಿದರು
ವಾಟಾಳ್‌ ನಾಗರಾಜ್‌ ಅವರು ಖಾಲಿ ಬಿಂದಿಗೆ ಹೊತ್ತುಕೊಂಡು ಏಕಾಂಗಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಜ್ಯದಲ್ಲಿ ಕೋವಿಡ್‌ ಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಸರ್ಕಾರ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬಾರದು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್ ಅವರು ಬುಧವಾರ ಆಗ್ರಹಿಸಿದರು.

ನಗರದ ಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಲೆ ಮೇಲೆ ಖಾಲಿ ಬಿಂದಿಗೆ ಹೊತ್ತು ಪ್ರತಿಭಟನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮಕ್ಕಳ ಪ್ರಾಣ ಮುಖ್ಯ, ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ಚೆಲ್ಲಾಟ ಆಡಬಾರದು. ಶಾಲಾ ಆರಂಭಿಸುವುದಾದರೆ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಸಿಬ್ಬಂಬಿ ಹೆಸರಲ್ಲಿ ಒಂದು ಕೋಟಿ ಠೇವಣಿ ಇಡಬೇಕು’ ಎಂದರು.

‘ಪಿಯುಸಿ ಮಕ್ಕಳನ್ನು ಪಾಸ್ ಮಾಡಿದ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಸೇರಿದಂತೆ ಪದವಿವರೆಗೆ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡದೆ ಉತ್ತೀರ್ಣ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಸರ್ಕಾರದ ಕಡೆಗಣನೆ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಚಾಮರಾಜನಗರವನ್ನು ಕಡೆಗಣಿಸಿದೆ. ಅನುದಾನ ಕೊಟ್ಟಿಲ್ಲ. ಭೇಟಿ ನೀಡಿಲ್ಲ. ನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಅವರ ಸುತ್ತ ಇರುವವರು ಭಯ ಹುಟ್ಟಿಸಿದ್ದಾರೆ. ಒಬ್ಬ ಮುಖ್ಯಮಂತ್ರಿ ನಗರಕ್ಕೆ ಬಾರದಿರುವುದು, ಗಡಿನಾಡನ್ನು ಕಡೆಗಣಿಸಿರುವುದು ಅಕ್ಷಮ್ಯ ಅಪರಾಧ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನವಾರ ಪ್ರತಿಭಟನೆ: ‘ತಮಿಳುನಾಡಿನಲ್ಲಿ ನದಿ ಜೋಡಣೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಅದನ್ನು ವಿರೋಧಿಸಬೇಕು. ಯಾವುದೇ ಕಾರಣಕ್ಕೂ ಕಾವೇರಿ ನದಿಗೆ ಜೋಡಣೆಗೆ ಅವಕಾಶ ಕೊಡಬಾರದು. ಮೇಕೆದಾಟು ಯೋಜನೆ ಆರಂಭಿಸುವಂತೆ ಮುಂದಿನ ವಾರ ರಾಮನಗರ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ವಾಟಾಳ್ ನಾಗರಾಜ್ ಅವರು ತಿಳಿಸಿದರು.

ಶಿವಲಿಂಗಮೂರ್ತಿ, ಸಚಿನ್, ರಾಮ್, ಪ್ರಾರ್ಥಸಾರಥಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.