ADVERTISEMENT

ವಿಜಯದಶಮಿ: ಮಾದಪ್ಪನಿಗೆ ವಿಶೇಷ ಪೂಜೆ

ಭಕ್ತರಿಗೆ ನಿರ್ಬಂಧದ ಮಾಹಿತಿ ಕೊರತೆ; ಅರ್ಧ ದಾರಿಯಲ್ಲೇ ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 16:52 IST
Last Updated 15 ಅಕ್ಟೋಬರ್ 2021, 16:52 IST
ವಿಜಯ ದಶಮಿ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಿತು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ
ವಿಜಯ ದಶಮಿ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಿತು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ   

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವಿಜಯ ದಶಮಿ ಅಂಗವಾಗಿ ಬೇಡಗಂಪಣ ಸಂಪ್ರದಾಯದೊಂದಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿದವು.

ವಿಜಯದಶಮಿ ಅಂಗವಾಗಿ ಬಿಳಿ ಕುದುರೆ ವಾಹನ ಉತ್ಸವ ಹಾಗೂ ಬನ್ನಿ ಮರದ ಪೂಜೆಯನ್ನು ನೆರವೇರಿಸಲಾಯಿತು.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಭಂದಿಸಲಾಗಿದ್ದರಿಂದ ಉತ್ಸವದಲ್ಲಿ ಸ್ಥಳೀಯರು ಮಾತ್ರ ಪಾಲ್ಗೊಂಡರು.

ADVERTISEMENT

ಭಾರಿ ಜನ: ಪ್ರವೇಶ ನಿರ್ಬಂಧ ಇಲ್ಲದಿರುವ ಬಗ್ಗೆ ಮಾಹಿತಿ ಇಲ್ಲದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟದತ್ತ ಬಂದಿದ್ದರು. ಕೌದಳ್ಳಿ ಹಾಗೂ ತಾಳಬೆಟ್ಟದಲ್ಲಿ ಪೊಲೀಸರು ಅವರನ್ನು ತಡೆದರು. ಆದರೆ, ಇದಕ್ಕೆ ಒಪ್ಪದ ಕೆಲವು ಭಕ್ತರು ಬ್ಯಾರಿಕೇಡ್‌ ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು.

ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಭಕ್ತರನ್ನು ನಿಯಂತ್ರಿಸುವುದು ಕಷ್ಟವಾಯಿತು.

ಪಾಲಾರ್‌ ಕಡೆಯಿಂದ ಬರುವ ತಮಿಳುನಾಡಿನ ಸಾರಿಗೆ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರಿಂದ ಬೆಟ್ಟದಲ್ಲಿ ಕೆಲ ಕಾಲ ದೇವಾಲಯದ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ವಾಗ್ವಾದ ನಡೆಯಿತು.

ಸಂಜೆ ಹೊತ್ತಿಗೆ ತಾಳಬೆಟ್ಟದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸರು ಅವರನ್ನು ಮನವೊಲಿಸಲು ಯತ್ನಿಸುತ್ತಿದ್ದರು.

ಭಕ್ತರ ಆಕ್ರೋಶ: ದೇವಾಲಯಕ್ಕೆ ಪ್ರವೇಶ ನಿರ್ಬಂಧದ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ ಇರುವುದಕ್ಕೆ ಜಿಲ್ಲಾಡಳಿತ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಎಲ್ಲ ಸಮಸ್ಯೆಗೆ ಜಿಲ್ಲಾಡಳಿತವೇ ನೇರ ಹೊಣೆ. ಯಾವುದೇ ಆದೇಶ ಹೊರಡಿಸದೆ ದೇವಾಲಯಕ್ಕೆ ನಿರ್ಬಂಧ ವಿಧಿಸಿರುವುದು ತಪ್ಪು’ ಎಂದು ಸ್ಥಳೀಯರಾದ ಕುಮಾರ್ ಹಾಗೂ ತಮಿಳುನಾಡಿನ ಕೊಮರಪಾಳ್ಯದ ಭಕ್ತರಾದ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಕ್ತರ ಪ್ರವೇಶ ನಿಷೇಧಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ನೀಡಲಾಗಿತ್ತು. ಹಾಗಿದ್ದರೂ ಭಕ್ತರು ಬಂದಿದ್ದಾರೆ. ಅವರನ್ನು ಕೌದಳ್ಳಿ, ತಾಳಬೆಟ್ಟದ ಬಳಿ ತಡೆದು ಮನವೊಲಿಸಲಾಗಿದೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.