ADVERTISEMENT

2021ರ ಅಂತ್ಯಕ್ಕೆ ಸ್ಥಳಾಂತರದ ಆಶಯ

ಚಂಗಡಿ ಗ್ರಾಮಸ್ಥರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಾತುಕತೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:03 IST
Last Updated 21 ಮೇ 2020, 16:03 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಚಂಗಡಿ ಗ್ರಾಮದಲ್ಲಿ ಬಾಲಕಿಯೊಂದಿಗೆ ಮಾತನಾಡಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಚಂಗಡಿ ಗ್ರಾಮದಲ್ಲಿ ಬಾಲಕಿಯೊಂದಿಗೆ ಮಾತನಾಡಿದರು   

ಚಾಮರಾಜನಗರ: ‘ಸುಳ್ಳು ಆಶ್ವಾಸನೆ ನೀಡಿ ಗ್ರಾಮಸ್ಥರನ್ನು ಊರಿನಿಂದ ಒಕ್ಕಲೆಬ್ಬಿಸುವುದು ನಮ್ಮ ಉದ್ದೇಶ ಅಲ್ಲ. ಇಲ್ಲಿನ ನಿವಾಸಿಗಳು ಅದರಲ್ಲೂ ಹೆಣ್ಣುಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮ ಸ್ಥಳಾಂತರದಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸ್ಥಳಾಂತರ ಪ್ರಕ್ರಿಯೆಯ ಬಗ್ಗೆ ಯಾರಿಗೂ ಸಂಶಯ ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಚಂಗಡಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಕುಗ್ರಾಮ ಚಂಗಡಿಯನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗುರುವಾರ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು.

‘ನಾವು ಯಾರಿಗೂ ಬಲವಂತ ಮಾಡುವುದಿಲ್ಲ. ಎಲ್ಲರ ಮನವೊಲಿ ಸುತ್ತೇವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಗ್ರಾಮ ಸ್ಥಳಾಂತರ ಯೋಜನೆ ಇದು. ಅತ್ಯುತ್ತಮವಾಗಿ ನಡೆಯಬೇಕು. ಇದೇ ತಾಲ್ಲೂಕಿನಲ್ಲಿ ಇನ್ನೂ 4 ಗ್ರಾಮಗಳು ಕಾಡಿನಲ್ಲಿವೆ. ಅವುಗಳನ್ನೂ ಸ್ಥಳಾಂತರ ಗೊಳಿಸಬೇಕಾಗಿದೆ. ಈ ಯೋಜನೆ ಯಶಸ್ವಿಯಾದರೆ, ‌ಇದನ್ನು ಕಂಡು ಅಲ್ಲಿನ ನಿವಾಸಿಗಳು ಕೂಡ ಬೇರೆ ಕಡೆಗೆ ಹೋಗಲು ಒಪ್ಪಬಹುದು. 2021ರ ಒಳಗೆ ಗ್ರಾಮವು ಸಂಪೂರ್ಣವಾಗಿ ಸ್ಥಳಾಂತರಗೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಸ್ಥಳಾಂತರಗೊಳ್ಳುವವರಿಗೆ ಅರಣ್ಯ ಇಲಾಖೆ ಎರಡು ಪ್ಯಾಕೇಜ್‌ ಘೋಷಿಸಿದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳ ಬಹುದು. ಒಂದು, ಕುಟುಂಬವೊಂದಕ್ಕೆ ₹15 ಲಕ್ಷ ನಗದು ಕೊಡುವುದು ಮತ್ತು ಇನ್ನೊಂದು, ನಿಗದಿತ ಸ್ಥಳದಲ್ಲಿ ಮೂರು ಎಕರೆ ಜಮೀನು, ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದು. ಗ್ರಾಮದಲ್ಲಿ 195 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿವೆ. ಉಳಿದವರು ಭಾವನಾತ್ಮಕ ವಿಚಾರಗಳಿಗೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ಜೊತೆಯಾಗಿ ಕುಳಿತು ಒಂದು ತೀರ್ಮಾನಕ್ಕೆ ಬನ್ನಿ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಬಂದು ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಪ್ರತಿ ಕುಟುಂಬದೊಂದಿಗೂ ಮಾತುಕತೆ ನಡೆಸಲಿದ್ದಾರೆ’ ಎಂದು ಸಚಿವರು ಹೇಳಿದರು.

ಸ್ಥಳೀಯ ಶಾಸಕ ಆರ್.ನರೇಂದ್ರ ಮಾತನಾಡಿ, ‘ಯಾವುದೇ ಗ್ರಾಮ ಅಭಿವೃದ್ಧಿಯಾಗಬೇಕಾದರೆ ಸುಸಜ್ಜಿತ ರಸ್ತೆ ಸಂಪರ್ಕ ಇರಬೇಕು. ಆದರೆ, ಇಲ್ಲಿಗೆ ರಸ್ತೆ ಮಾಡಿಸಲು ಆಗುತ್ತಿಲ್ಲ. ಎಂಟು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಪ್ರತಿ ಬಾರಿಯೂ ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ. ಮುಂದೆಯೂ ಅದು ಕೊಡುವುದಿಲ್ಲ. ಹಾಗಾಗಿ, ರಸ್ತೆ ನಿರ್ಮಾಣ ಇಲ್ಲಿಗೆ ಸಾಧ್ಯವಿಲ್ಲ. ಬಹುತೇಕ ಗ್ರಾಮಸ್ಥರು ಬೇರೆ ಕಡೆಗೆ ಹೋಗಲು ಸಮ್ಮತಿಸಿದ್ದೀರಿ. ಸರ್ಕಾರವೂ ಸೂಕ್ತ ಪರಿಹಾರ ಕೊಡಲಿದೆ’ ಎಂದು ಹೇಳಿದರು.

‘ನಗದು ಪ್ಯಾಕೇಜ್‌ ಸದ್ಯ ₹15 ಲಕ್ಷ ಇದೆ. ಇದನ್ನು ಇನ್ನೂ ಹೆಚ್ಚು ಮಾಡುವುದಕ್ಕೆ ಅವಕಾಶ ಇದೆ. ಇದರ ಜೊತೆಗೆ ಇಲ್ಲಿನ ಜಮೀನು, ಮನೆ ಮತ್ತು ನಿವೇಶನದ ಮೌಲ್ಯವನ್ನೂ ಸರ್ಕಾರ ನೀಡಲಿದೆ. ನನ್ನ ಕ್ಷೇತ್ರದಲ್ಲಿ ಇನ್ನೂ ನಾಲ್ಕು ಗ್ರಾಮಗಳು ಇದೇ ರೀತಿ ಮೂಲ ಸೌಕರ್ಯ ವಂಚಿತವಾಗಿದ್ದು, ಅವುಗಳನ್ನೂ ಸ್ಥಳಾಂತರ ಮಾಡುವ ಅಗತ್ಯವಿದೆ’ ಎಂದರು.

ಇದಕ್ಕೂ ಮೊದಲು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಗ್ರಾಮ ಸ್ಥಳಾಂತರ ಯೋಜನೆಯ ಪ್ರಸ್ತಾವ ಹಾಗೂ ಪ್ಯಾಕೇಜ್‌ ಬಗ್ಗೆ ವಿವರಿಸಿದರು. ಒಂದೇ ಮನೆಯಲ್ಲಿ ಎರಡು ಕುಟುಂಬಗಳಿದ್ದರೆ (ತಂದೆ, ತಾಯಿ, ಮಗ ಸೊಸೆ ಮೊಮ್ಮಕ್ಕಳು ಇದ್ದರೆ) ಎರಡು ಕುಟುಂಬ ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದರು.

ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನ ಬಳಿ ಯೋಜನೆಗಾಗಿ ಸ್ಥಳ ಗುರುತಿಸಿರುವುದನ್ನೂ ಅವರು ಪ್ರಸ್ತಾಪಿಸಿದರು.

ಶಾಸಕ ಎನ್‌.ಮಹೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್‌.ಬಾಲರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್‌ ನಾರಾಯಣ ರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌, ಉಪ ವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ರಾದ ಬಸವರಾಜು, ಕುನಾಲ್‌, ಬಿಜೆಪಿ ಮುಖಂಡರಾದ ಜಿ.ಎನ್‌.ನಂಜುಂಡ ಸ್ವಾಮಿ, ಮಾದೇವ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.

ಪರ–ವಿರೋಧ ಅಭಿಪ್ರಾಯ ಸಂಗ್ರಹ
ಇದಕ್ಕೂ ಮೊದಲು ಸುರೇಶ್‌ಕುಮಾರ್‌ ಅವರು ಗ್ರಾಮದ ಯಜಮಾನರು, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳಾಂತರಗೊಳ್ಳಲು ಒಪ್ಪಿದವರು, ಇನ್ನೂ ಒಪ್ಪದೇ ಇರುವವರ ಜೊತೆ ಸಂವಾದ ನಡೆಸಿ ಅವರ ಅಭಿಪ್ರಾಯ ಪಡೆದರು.

ಗ್ರಾಮದ ಮುಖಂಡ ಚ‌ಂಗಡಿ ಕರಿಯಪ್ಪ ಅವರು ಗ್ರಾಮದ ಜನರು ಎದುರಿಸುತ್ತಿರುವ ಕಷ್ಟಗಳನ್ನು ಸಚಿವರ ಮುಂದೆ ಬಿಚ್ಚಿಟ್ಟರು. ಸ್ಥಳಾಂತರಕ್ಕಾಗಿ ಮೂರು ವರ್ಷಗಳಿಂದ ಮಾಡಿರುವ ಹೋರಾಟದ ವಿವರಗಳನ್ನೂ ನೀಡಿದರು.

ವಿರೋಧ ಮಾಡುತ್ತಿರುವರ ಪರವಾಗಿ ಮಾತನಾಡಿದ ಗ್ರಾಮದ ಮುನಿಗೌಡ, ‘ನಾವು ಹುಟ್ಟಿ ಬೆಳೆದ ಊರು ಇದು. ಹಾಗಾಗಿ ಬಿಟ್ಟು ಹೋಗುವುದಕ್ಕೆ ಬೇಜಾರು. ಸರ್ಕಾರ ನೀಡುವ ಭೂಮಿ ಸರಿಯಾಗಿ ಇಲ್ಲದಿದ್ದರೆ ಎಂಬ ಭಯವೂ ಇದೆ’ ಎಂದರು.

ಗ್ರಾಮದ ನಿವಾಸಿ ಅರುಣ್‌ ಕುಮಾರ್‌ ಮಾತನಾಡಿ, ‘ನಾವು ಬೇರೆ ಕಡೆ ಹೋಗುವುದಕ್ಕೆ ಸಿದ್ಧರಿದ್ದೇವೆ. ಆದರೆ, ಸರ್ಕಾರ ತೋರಿಸಿದ ಜಾಗ ಬೇಡ. ನಮ್ಮದೇ ಪಂಚಾಯಿತಿ ವ್ಯಾಪ್ತಿಯಲ್ಲಿ, ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಜಮೀನು ಕೊಡಿ. ವಡಕೆಹಳ್ಳವಾದರೆ ಅನುಕೂಲ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿ.ಏಡುಕುಂಡಲು, ‘ಆ ಪ್ರದೇಶವೂ ಅರಣ್ಯದ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಈಗ ಗುರುತಿಸಲಾಗಿರುವ ಜಾಗ ಅತ್ಯಂತ ಸೂಕ್ತವಾಗಿದ್ದು, ಜಮೀನು ಕೃಷಿಗೆ ಯೋಗ್ಯವಾಗಿದೆ. ಪಕ್ಕದಲ್ಲೇ ಕಾಲುವೆ ಇದೆ’ ಎಂದರು.

ಆರ್‌.ನರೇಂದ್ರ ಮಾತನಾಡಿ, ‘ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸೂಕ್ತ ಸರ್ಕಾರಿ ಜಾಗ ಇಲ್ಲ. ಈಗ ಗುರುತಿಸಿರುವ ಜಾಗದ ಬಳಿ ಕಾಲುವೆ ಹರಿಯುತ್ತದೆ. ಗುಂಡಾಲ್‌ ಜಲಾಶಯಕ್ಕೆ ನೀರು ತುಂಬಿಸುವ ಯೋಜ‌ನೆ ಅನುಷ್ಠಾನಗೊಂಡರೆ ಸುಲಭವಾಗಿ ನೀರು ಹರಿಸಬಹುದು. ಕೊಳವೆ ಬಾವಿ ಕೊರೆದು ಕೃಷಿ ಮಾಡುವುದಕ್ಕೆ ತೊಂದರೆ ಇಲ್ಲ. ಕೊಳ್ಳೇಗಾಲವೂ 12 ಕಿ.ಮೀ. ಹತ್ತಿರದಲ್ಲಿದೆ’ ಎಂದು ತಿಳಿಸಿದರು.

ಗ್ರಾಮಸ್ಥರ ಭಾವನಾತ್ಮಕ ಕಾರಣಗಳು
ಸ್ಥಳೀಯ ಮುಖಂಡ ಮಾದೇವು ಮಾತನಾಡಿ, ‘ಭಾವನಾತ್ಮಕ ಕಾರಣಗಳಿಂದಾಗಿ ಕೆಲವರು ಬೇರೆ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜಮೀನು ಬಿಟ್ಟು ಬರುವುದಕ್ಕೆ ಅವರಿಗೆ ಮನಸ್ಸಿಲ್ಲ. ದೇವಸ್ಥಾನ ಇದೆ. ಹಿರಿಯರ ಸಮಾಧಿಯೂ ಇಲ್ಲಿದೆ. ಅದನ್ನೆಲ್ಲ ಬಿಟ್ಟು ಬರಬೇಕು ಎಂಬುದು ಕೆಲವರ ಭಾವನೆ. ಸರ್ಕಾರ ಅವರೊಂದಿಗೆ ಮಾತನಾಡಿ, ಮನವೊಲಿಸಿದರೆ ಅವರು ಖಂಡಿತ ಬರುತ್ತಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹೊಸ ಜಾಗದಲ್ಲಿ ದೇವಸ್ಥಾನ ನಿರ್ಮಿಸಲು ಕ್ರಮ ತೆಗೆದುಕೊಳ್ಳಬಹುದಾಗಿದೆ. ಸ್ಥಳಾಂತರಗೊಳ್ಳುವ ಪ್ರದೇಶಕ್ಕೂ ಚಂಗಡಿ ಎಂದೇ ಹೆಸರು ಇಡುವುದಕ್ಕೂ ಅವಕಾಶ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.