ಚಾಮರಾಜನಗರ: ಖಾಸಗಿ ವ್ಯಕ್ತಿಯೊಬ್ಬರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಭಾನುವಾರ ರಾತ್ರಿ (ಫೆ.24) ತಾಲ್ಲೂಕಿನ ಕಾಗಲವಾಡಿ ಶಾಖೆಗೆ ಬರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಇಬ್ಬರು ಪವರ್ ಮ್ಯಾನ್‌ಗಳು ಉದ್ದೇಶಪೂರ್ವಕವಾಗಿ 18 ಹಳ್ಳಿಗಳಿಗೆ ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಆರೋಪಿಸಿರುವ ಹುರುಳಿನಂಜನಪುರ ಗ್ರಾಮಸ್ಥರು, ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಗ್ರಾಮದ ಯಜಮಾನರು ಹಾಗೂ ಹಲವು ಗ್ರಾಮಸ್ಥರು ಸೆಸ್ಕ್ ಚಾಮರಾಜನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ದೂರು ನೀಡಿದ್ದಾರೆ.
‘ಪವರ್ ಮ್ಯಾನ್‌ಗಳಾದ ನಂದಕುಮಾರ್ ಮತ್ತು ಸಿದ್ದರಾಜು ಅವರು 18 ಹಳ್ಳಿಗಳಿಗೆ ತೊಂದರೆ ಕೊಟ್ಟಿದ್ದು ಮಾತ್ರವಲ್ಲದೆ, ಇದನ್ನು ಪ್ರಶ್ನಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಇಬ್ಬರೂ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದೂ ದೂರಿದ್ದಾರೆ.
‘24ರ ರಾತ್ರಿ ಹುರುಳಿನಂಜನಪುರದಲ್ಲಿ ನಾಟಕ ಹಮ್ಮಿಕೊಳ್ಳಲಾಗಿತ್ತು. ಕಾಗಲವಾಡಿಯ ಗುರುಮಲ್ಲೇಶ್ಗವರ ಶಾಲೆಯ ವಾರ್ಷಿಕೋತ್ಸವ ಮತ್ತು ಸರಗೂರು ಶಾಲೆಯಲ್ಲೂ ವಾರ್ಷಿಕೋತ್ಸವ ನಡೆಯುತ್ತಿತ್ತು. ರಾತ್ರಿ 10ರ ಸುಮಾರಿಗೆ ವಿದ್ಯುತ್ ಕಡಿತವಾಗಿತ್ತು. ಸೆಸ್ಕ್ ಕಿರಿಯ ಎಂಜಿನಿಯರ್‌ಗೆ ಕರೆ ಮಾಡಿದಾಗ, ಕಾಗಲವಾಡಿಯಲ್ಲಿ ಜಂಪ್ ಕೆಟ್ಟಿರುವುದರಿಂದ ಪವರ್ ಮ್ಯಾನ್ ನಂದಕುಮಾರ್ ಎಲ್.ಸಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಕಾಗಲವಾಡಿ ಶಾಲೆಯ ವಾರ್ಷಕೋತ್ಸವದಲ್ಲಿದ್ದವರು ಹೋಗಿ ನೋಡಿದಾಗ ನಂದಕುಮಾರ್ ಮತ್ತು ಸಿದ್ದರಾಜು ಅವರು ರಾತ್ರಿ 11 ಗಂಟೆಯಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದರು. ಹುರುಳಿನಂಜನಪುರ ಗ್ರಾಮದವರು ವಿಚಾರಿಸಿದಾಗ ಸಿದ್ದರಾಜು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಖಾಸಗಿ ವ್ಯಕ್ತಿಗೆ ಅನುಕೂಲಮಾಡಿಕೊಡುವುದಕ್ಕಾಗಿ ಸುಮಾರು 18 ಹಳ್ಳಿಗೆ ತೊಂದರೆ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದಾಗ ‘ನೀವು ಹೇಗೆ ನಾಟಕ ನೋಡುತ್ತೀರಾ? ನಾನು ನೋಡುತ್ತೇನೆ’ ಎಂದು ಧಮಕಿ ಹಾಕಿ, ಬಳಿಕ 10 ನಿಮಿಷ ವಿದ್ಯುತ್ ನೀಡಿ ನಂತರ 18 ಹಳ್ಳಿಗಳಿಗೆ ವಿದ್ಯುತ್ ಕಡಿತ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕರ್ತವ್ಯ ಲೋಪ ಎಸಗಿರುವ ನಂದಕುಮಾರ್ ಮತ್ತು ಸಿದ್ದರಾಜು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಕ್ಕ ಪಕ್ಕದ ಗ್ರಾಮದವರನ್ನೂ ಸೇರಿಸಿಕೊಂಡು ಚಾಮರಾಜನಗರದ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮಸ್ಥರು ದೂರಿನಲ್ಲಿ ಎಚ್ಚರಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸೆಸ್ಕ್‌ನ ಚಾಮರಾಜನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಸಂತಕುಮಾರ್, ‘ದೂರು ಇನ್ನೂ ನನ್ನ ಕೈಸೇರಿಲ್ಲ. ಕಚೇರಿಯಲ್ಲಿ ಕೊಟ್ಟಿದ್ದರೆ, ಅದನ್ನು ಪರಿಶೀಲಿಸುತ್ತೇನೆ. ಘಟನೆ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಂದ ವರದಿ ತರಿಸಿಕೊಂಡು ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.