ADVERTISEMENT

ಸ್ಥಗಿತಗೊಂಡ ಕಾಮಗಾರಿ; ಸವಾರರು ಹೈರಾಣ

15 ವರ್ಷಗಳಿಂದ ಅಭಿವೃದ್ಧಿ ಕಾರದ ಹಳೇಪುರ–ಕಲ್ಪುರ ರಸ್ತೆ

ಸೂರ್ಯನಾರಾಯಣ ವಿ
Published 15 ನವೆಂಬರ್ 2020, 12:58 IST
Last Updated 15 ನವೆಂಬರ್ 2020, 12:58 IST
ಊರನ್ನು ಸಂಪರ್ಕಿಸುವ ಕಚ್ಚಾ ರಸ್ತೆ
ಊರನ್ನು ಸಂಪರ್ಕಿಸುವ ಕಚ್ಚಾ ರಸ್ತೆ   

ಚಾಮರಾಜನಗರ: ತಾಲ್ಲೂಕಿನ ಹರವೆ ಹೋಬಳಿಯ ಹಳೇಪುರ- ಕಲ್ಪುರ ರಸ್ತೆಯ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಟಾರು ಕಿತ್ತು ಬಂದಿರುವ, ಹಳ್ಳದಿಂದ ಕೂಡಿರುವ ರಸ್ತೆಯಲ್ಲಿ ಪ್ರಯಾಸದಿಂದ ಸಂಚರಿಸಬೇಕಾಗಿದೆ.

ಗೋವಿಂದವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮೂರು ಕಿ.ಮೀ ಉದ್ದದ ರಸ್ತೆಗೆ 15 ವರ್ಷಗಳ ಹಿಂದೆ ಡಾಂಬರು ಹಾಕಲಾಗಿತ್ತು. ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆಯ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣಕ್ಕೆ ₹2.27 ಕೋಟಿ ಅನುದಾನ ಬಿಡುಗಡೆಯಾಗಿತ್ತು. 2019ರಲ್ಲಿ ಟೆಂಡರ್‌ ಕರೆಯಲಾಗಿತ್ತು.

ಈ ವರ್ಷಾರಂಭದಲ್ಲಿ ಕಾಮಗಾರಿ ಆರಂಭವಾಗಿತ್ತು. ಗುತ್ತಿಗೆ ಪಡೆದಿರುವವರು 500 ಮೀಟರ್‌ಗಳಷ್ಟು ಚರಂಡಿ ನಿರ್ಮಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಐದಾರು ತಿಂಗಳುಗಳಿಂದ ಕೆಲಸ ನಡೆಯುತ್ತಿಲ್ಲ. ಕೊನೆಗೂ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ನಿರಾಸೆಯಾಗಿದೆ.

ADVERTISEMENT

ಹದಗೆಟ್ಟಿರುವ ರಸ್ತೆಯಲ್ಲಿ ಸಂಚಾರ ಕಷ್ಟವಾಗಿದ್ದು ಸವಾರರು ಹೈರಾಣರಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ, ಗುತ್ತಿಗೆದಾರಾಗಲಿ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

‘15 ವರ್ಷಗಳಿಂದ ನಮ್ಮೂರಿನ ರಸ್ತೆ ಸಂಪೂರ್ಣವಾಗಿ ಹಾಳಾಗಿವೆ. ಪ್ರತಿ ದಿನ ಕನಿಷ್ಠ ಎಂದರೂ 200 ವಾಹನಗಳು ಇಲ್ಲಿ ಸಂಚರಿಸುತ್ತವೆ.ಕೊನೆಗೂ ಅಭಿವೃದ್ಧಿ ಕಾಣುತ್ತಿದೆಯಲ್ಲ ಎಂದು ನಿಟ್ಟುಸಿರು ಬಿಟ್ಟರೆ, ಈಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಯಾರೂ ಈ ಕಡೆಗೆ ಗಮನ ಹರಿಸುತ್ತಿಲ್ಲ. ಗರ್ಭಿಣಿಯರನ್ನು, ಅನಾರೋಗ್ಯ ಪೀಡಿತರನ್ನು ವಾಹನದಲ್ಲಿ ಕರೆದುಕೊಂಡು ಹೋಗುವುದಕ್ಕೆ ಆಗದ ಸ್ಥಿತಿ ಇದೆ’ ಎಂದು ಕಲ್ಪುರ ಗ್ರಾಮದ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘500 ಮೀಟರ್‌ ಚರಂಡಿ ಕೆಲಸ ಮಾತ್ರ ಆಗಿದೆ. ಕೆಲಸ ಯಾಕೆ ಮಾಡುತ್ತಿಲ್ಲ ಎಂದು ಗುತ್ತಿಗೆದಾರರನ್ನು ಕೇಳಿದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕೇಳಿ ಎಂದು ಉಡಾಫೆಯಿಂದ ಉತ್ತರ ಕೊಡುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

ನ್ಯಾಯಾಲಯದಲ್ಲಿ ಪ್ರಕರಣ: ಈ ಬಗ್ಗೆ, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ ಅವರು, ‘ಹಳೇಪುರ–ಕಲ್ಪುರ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ವಿಚಾರ ಗಮನಕ್ಕೆ ಬಂದಿದೆ. ಗ್ರಾಮದ ನಿವಾಸಿಯೊಬ್ಬರು, ತಮ್ಮ ಮನೆಯನ್ನು ಕಾಮಗಾರಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಕೆಲಸ ಸ್ಥಗಿತವಾಗಿದೆ’ ಎಂದು ಹೇಳಿದರು.

‘ಎಂಟು ಮೀಟರ್‌ ಅಗಲದ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಊರ ಬಳಿ ಇರುವ ಮನೆಯೊಂದು ರಸ್ತೆ ನಿರ್ಮಾಣ ವಾಗುತ್ತಿರುವ ಸಮೀಪದಲ್ಲೇ ಇದೆ. ಮನೆ ಇರುವ ಜಾಗದಲ್ಲಿ 10 ಮೀಟರ್‌ ಜಾಗ ಇದೆ. ಆದರೆ, ಊರಿನವರು ಆ ಮನೆಯನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು ಎಂದು ಪ‍ಟ್ಟು ಹಿಡಿದಿದ್ದಾರೆ. ಮನೆಯ ಕಾಂಪೌಂಡ್‌ ಬೇಕಾದರೆ ಒಡೆಯಿರಿ ಎಂದು ಮನೆ ಮಾಲೀಕ ಹೇಳುತ್ತಿದ್ದಾರೆ. ಗ್ರಾಮಸ್ಥರು ಇದಕ್ಕೆ ಒಪ್ಪುತ್ತಿಲ್ಲ’ ಎಂದರು.

‘ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ’ ಎಂದು ಸುರೇಂದ್ರ ಅವರು ಹೇಳಿದರು.

‘ಆ ಮನೆ ರಸ್ತೆಯ ಇನ್ನೊಂದು ತುದಿಯಲ್ಲಿದೆ. ಎರಡು ಮುಕ್ಕಾಲು ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ವಿವಾದ ಇರುವ ಜಾಗವನ್ನು ಬಿಟ್ಟು ಉಳಿದ ಕಡೆಯಲ್ಲಿ ರಸ್ತೆ ನಿರ್ಮಿಸಬಹುದಲ್ಲವೇ’ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.