ADVERTISEMENT

ಚಾಮರಾಜನಗರ: ಸುವರ್ಣಾವತಿ ಜಲಾಶಯ ಭರ್ತಿ, ನೀರು ಹೊರಕ್ಕೆ

ಮಳೆಗಾಲ ಆರಂಭಕ್ಕೂ ಮುನ್ನ ಮೈದುಂಬಿದ ಅಣೆಕಟ್ಟೆ, ಕೆರೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 29 ಮೇ 2022, 16:02 IST
Last Updated 29 ಮೇ 2022, 16:02 IST
ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ
ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ   

ಚಾಮರಾಜನಗರ: ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಅವಳಿ ಜಲಾಶಯಗಳಲ್ಲಿ ಒಂದಾದ ಸುವರ್ಣಾವತಿಯು ಬಹುತೇಕ ಭರ್ತಿಯಾಗಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ.

ಸಾಮಾನ್ಯವಾಗಿ ಈ ಜಲಾಶಯವು ಹಿಂಗಾರು ಅವಧಿಯಲ್ಲಿ ಭರ್ತಿಯಾಗುತ್ತದೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

2,455 ಅಡಿ ಸಾಮರ್ಥ್ಯದ ಜಲಾಯಶಯದಲ್ಲಿ ಸದ್ಯ 2,454 ಅಡಿಗಳಷ್ಟು ನೀರಿದೆ. 200 ಕ್ಯುಸೆಕ್‌ಗಳಷ್ಟು ನೀರನ್ನು ಹೊರ ಬಿಡಲಾಗುತ್ತಿದೆ.

ADVERTISEMENT

‘ಭರ್ತಿಯಾಗುವುದಕ್ಕೆ ಇನ್ನೂ ಒಂದಡಿ ನೀರು ಬೇಕು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ‌ ನೀರು ಹರಿಯುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ‘ಪ್ರಜಾವಾಣಿ'ಗೆ ತಿಳಿಸಿದರು.

ತಮಿಳುನಾಡಿನ ತಾಳವಾಡಿ, ಸತ್ಯಮಂಗಲ ಅರಣ್ಯ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿ ಪ್ರದೇಶದಲ್ಲಿ ಮಳೆಯಾದರೆ ಸುವರ್ಣಾವತಿ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಸಾಮಾನ್ಯವಾಗಿ ಹಿಂಗಾರು ಅವಧಿಯಲ್ಲಿ ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ. ಹಾಗಾಗಿ, ಅಕ್ಟೋಬರ್, ನವೆಂಬರ್ ವೇಳೆಗೆ ಜಲಾಶಯ ಮೈದುಂಬಲಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಜಲಾಶಯ ಭರ್ತಿಯಾಗಿತ್ತು. ನವೆಂಬರ್ ಕೊನೆಯವರೆಗೂ ಮಳೆಯಾಗಿದ್ದರಿಂದ ಜಲಾಶಯದಲ್ಲಿ ಬೇಸಿಗೆಯಲ್ಲೂ ಅರ್ಧಕ್ಕಿಂತ ಹೆಚ್ಚು‌ ನೀರು ಇತ್ತು. ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಿದ್ದಿದ್ದರಿಂದ ಮೇ ತಿಂಗಳಲ್ಲೇ ಜಲಾಶಯ ಭರ್ತಿಯಾಗಿದೆ.

ತಾಲ್ಲೂಕಿನಲ್ಲಿರುವ ಇನ್ನೊಂದು ಜಲಾಶಯ ಚಿಕ್ಕಹೊಳೆ ಎರಡು ವಾರದ ಹಿಂದೆಯೇ ಭರ್ತಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.