ADVERTISEMENT

ಚಾಮರಾಜನಗರ: ಹೊಸ ವರ್ಷದಲ್ಲಿ ಕೆರೆಗಳು ತುಂಬಲಿ, ಕೈಗಾರಿಕೆಗಳೂ ಬರಲಿ

ಅಭಿವೃದ್ಧಿ ಪಥದತ್ತ ಹೊರಳುತ್ತಿದೆ ಗಡಿ ಜಿಲ್ಲೆ: ಹೊಸ ವರ್ಷದಲ್ಲಿ ಜಿಲ್ಲೆಯ ನಿರೀಕ್ಷೆಗಳೇನು?

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 19:30 IST
Last Updated 1 ಜನವರಿ 2021, 19:30 IST
ಚಾಮರಾಜನಗರದಲ್ಲಿ ಗುಂಡ್ಲುಪೇಟೆ ರಸ್ತೆ ಹಾಗೂ ಕೊಳ್ಳೇಗಾಲ ರಸ್ತೆಯ ನಡುವಿನ ಬೈಪಾಸ್‌ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಚಾಮರಾಜನಗರದಲ್ಲಿ ಗುಂಡ್ಲುಪೇಟೆ ರಸ್ತೆ ಹಾಗೂ ಕೊಳ್ಳೇಗಾಲ ರಸ್ತೆಯ ನಡುವಿನ ಬೈಪಾಸ್‌ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಚಾಮರಾಜನಗರ: ಕೋವಿಡ್‌ ಕಾಡಿದ 2020 ಕಳೆದು ಹೊಸ ವರ್ಷ 2021ಕ್ಕೆ ಗಡಿ ಜಿಲ್ಲೆ ಕಾಲಿಟ್ಟಿದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಉತ್ಸಾಹದಲ್ಲಿರುವ ಚಾಮರಾಜನಗರ, ಮೂರ್ನಾಲ್ಕು ವರ್ಷಗಳಿಂದ ಅಭಿವೃದ್ಧಿಯ ಶಕೆಗೆ ನಿಧಾನವಾಗಿ ಹೊರಳಿಕೊಳ್ಳುತ್ತಿದೆ.

ಕಳೆದ ವರ್ಷ ಕೋವಿಡ್‌ ನೀಡಿದ ಹೊಡೆದ ಜಿಲ್ಲೆಯ ಅಭಿವೃದ್ಧಿಯ ವೇಗದ ಮೇಲೆ ತೀವ್ರವಾದ ಪರಿಣಾಮ ಬೀರಿರುವುದು ಸುಳ್ಳಲ್ಲ. ಕೋವಿಡ್‌ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿದ್ದರೂ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದು, ಜಿಲ್ಲೆ ಈ ವರ್ಷವಾದರೂ ಕೊಂಚ ಅಭಿವೃದ್ಧಿ ಕಾಣಬಹುದು ಎಂಬ ಆಶಾಭಾವನೆ ಮೂಡಿಸಿದೆ.

ಕೆರೆ ತುಂಬಲಿ:ರೈತರಿಗೆ ವರದಾನವಾಗಿರುವ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ, ಜಿಲ್ಲಾಡಳಿತ ಆದ್ಯತೆ ನೀಡಬೇಕು ಎನ್ನುವುದು ಜಿಲ್ಲೆಯ ಬಹುತೇಕ ಜನರ ಒತ್ತಾಯ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೂರನೇ ಮತ್ತು ನಾಲ್ಕನೇ ಹಂತದ ಕೆರೆ ತುಂಬಿಸುವ ಯೋಜನೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆರೆ ತುಂಬಿಸುವ ಯೋಜನೆಗಳ ಲಾಭ ಏನು ಎಂಬುದು ಮೊದಲ ಎರಡು ಹಂತದ ಯೋಜನೆಗಳಿಂದ ಮನದಟ್ಟಾಗಿದೆ. ಹಾಗಾಗಿ, ಗ್ರಾಮೀಣ ಭಾಗದ ಜನರು ಯೋಜನೆ ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದಾರೆ.

ADVERTISEMENT

ವಿವಿಧ ತಾಲ್ಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದ್ದು, ಅವುಗಳನ್ನು ಶೀಘ್ರವಾಗಿ ಕೊನೆಮುಟ್ಟಿಸಬೇಕಾಗಿದೆ ಎಂದು ಹೇಳುತ್ತಾರೆ ಜಿಲ್ಲೆಯ ಜನರು.

ಕೈಗಾರಿಕೆಗಳು ಬರಲಿ: ಜಿಲ್ಲಾ ಕೇಂದ್ರದ ಸಮೀಪ ಕೆಲ್ಲಂಬಳ್ಳಿ, ಬದನಗುಪ್ಪೆ ಗ್ರಾಮದಲ್ಲಿ 1,400 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಿದ್ದರೂ, ಜಿಲ್ಲೆಗೆ ಹೇಳಿಕೊಳ್ಳುವಂತಹ ಕೈಗಾರಿಕೆಗಳು ಬರುತ್ತಿಲ್ಲ. ಹೆಚ್ಚೆಚ್ಚು ಉದ್ದಿಮೆಗಳು ಬಂದರೆ, ಸ್ಥಳೀಯರಿಗೆ ಉದ್ಯೋಗ ದೊರೆತು ಜಿಲ್ಲೆಯ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂಬುದು ಜನರ ನಿರೀಕ್ಷೆ.

ಹೆದ್ದಾರಿ ಪೂರ್ಣಗೊಳ್ಳಲಿ: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಇನ್ನೂ ಪೂರ್ಣವಾಗದೇ ಇರುವುದರಿಂದ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಗುಂಡ್ಲುಪೇಟೆ ರಸ್ತೆಯಿಂದ ಕೊಳ್ಳೇಗಾಲ ರಸ್ತೆಯವರೆಗಿನ ಬೈಪಾಸ್‌ ರಸ್ತೆ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ. ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‌ವರೆಗಿನ ಎಂಟು ಕಿ.ಮೀ ಉದ್ದದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರ ನಡೆಸಲು ಆಗದ ಪರಿಸ್ಥಿತಿ ಇದೆ. ಯಳಂದೂರು, ಕೊಳ್ಳೇಗಾಲ ಬೈಪಾಸ್‌ ಕಾಮಗಾರಿಗಳೂ ಪೂರ್ಣಗೊಳ್ಳಬೇಕಿದೆ. ಕೊಳ್ಳೇಗಾಲದಿಂದ ಹನೂರುವರೆಗಿನ ರಸ್ತೆ ಅಭಿವೃದ್ಧಿ ಕಾರ್ಯ ಕೂಡ ನಿಧಾನಗತಿಯಲ್ಲಿದ್ದು, ಹೊಸ ವರ್ಷದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿ ಎಂಬ ಆಶಯ ಜಿಲ್ಲೆಯ ಜನರದ್ದು.

ಜಿಲ್ಲಾ ಕೇಂದ್ರದಲ್ಲೇ ಜಿಲ್ಲಾ ಕ್ರೀಡಾಂಗಣ, ನ್ಯಾಯಾಲಯ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯವಾಗಬೇಕಿದೆ.

ಯೋಜನೆಗಳು ಅನುಷ್ಠಾನವಾಗಲಿ: ಚಾಮರಾಜನಗರಕ್ಕೆ ಮಾಲಂಗಿಯಿಂದ ನೇರವಾಗಿ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಸ್ತಾವದ ಹಂತದಲ್ಲಿದ್ದು, ಕಾರ್ಯರೂಪಕ್ಕೆ ಬರಬೇಕಿದೆ. ಮೂರು ವರ್ಷಗಳ ಹಿಂದೆ ಮಂಜೂರಾಗಿದ್ದ ಕಾನೂನು ಕಾಲೇಜು ಈ ವರ್ಷವಾದರೂ ಆರಂಭವಾಗಬೇಕು, ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡ ಕಾಮಗಾರಿ ಪೂರ್ಣವಾಗಬೇಕು, ಕೃಷಿ ಕಾಲೇಜಿಗೆ ಸ್ವಂತ ಕಟ್ಟಡದ ಕೆಲಸ ಆರಂಭವಾಗಬೇಕು ಎಂಬ ಆಶಯ ಜನರದ್ದು.

ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿ: ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಾಕಷ್ಟು ಅವಕಾಶ ಇದೆ. ಜಿಲ್ಲಾಡಳಿತ ಕೂಡ ಚೆಲುವ ಚಾಮರಾಜನರ ಎಂಬ ಅಭಿಯಾನವನ್ನೇ ಆರಂಭಿಸಿದೆ. ಇದರ ಅಡಿಯಲ್ಲಿ ಪ್ರವಾಸಿ ತಾಣಗಳಿಗೆ ಇನ್ನಷ್ಟು ಮೂಲಸೌಕರ್ಯಗಳು ದೊರೆತು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೆಲಸ ನಡೆಯಬೇಕು. ಭರಚುಕ್ಕಿ ಜಲಪಾತ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ರೂಪಿಸಿರುವ ಯೋಜನೆ ಕಾರ್ಯಕ್ರಮ ರೂಪಕ್ಕೆ ಬರಬೇಕು.

ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಿಸಲಿ: ಶೇ 50ರಷ್ಟು ಅರಣ್ಯವನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರತಿ ವರ್ಷ ಮಾನವ ವನ್ಯಜೀವಿ ಸಂಘರ್ಷದಲ್ಲಿ ಪ್ರಾಣ, ಆಸ್ತಿ ಹಾನಿ ಸಂಭವಿಸುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾರೆ ಕಾಡಂಚಿನ ಗ್ರಾಮಸ್ಥರು.

ತಾಲ್ಲೂಕಿನ ನಿರೀಕ್ಷೆಗಳು

ಜಿಲ್ಲೆಯ ತಾಲ್ಲೂಕುಗಳು ಕೂಡ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಅಲ್ಲಿನ ಜನರು ಕೂಡ ಮೂಲಸೌಕರ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಿರುವ ಕೊಳ್ಳೇಗಾಲ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲೂ ಹಲವು ಕೆಲಸಗಳು ಆಗಬೇಕಿವೆ. ಹೈಟೆಕ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಗರ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಯೋಜನೆ ಅನುಷ್ಠಾನಗೊಂಡಿಲ್ಲ. ಕೆರೆಗಳ ಹೂಳು ತೆಗೆಯುವ ಕೆಲಸ ಆಗಬೇಕಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯೂ ನಡೆಯಬೇಕಿದೆ.

ಗುಂಡ್ಲುಪೇಟೆ ತಾಲ್ಲೂಕು: ತೀವ್ರ ಅಂತರ್ಜಲ ಕೊರತೆ ಎದುರಿಸುತ್ತಿರುವ ತಾಲ್ಲೂಕು ಆಗಿರುವ ಗುಂಡ್ಲುಪೇಟೆಯಲ್ಲಿ ಅಂತರ್ಜಲ ಮಟ್ಟದ ಸುಧಾರಣೆಗೆ ವಿಶೇಷ ಕಾಳಜಿ ನಿರ್ವಹಿಸಬೇಕಿದೆ. ಕೆರೆ ತುಂಬಿಸುವ ಯೋಜನೆ ಪೂರ್ಣಗೊಳ್ಳಬೇಕಿದೆ. ಗುಂಡ್ಲುಪೇಟೆ ಪಟ್ಟಣ ಹಾಗೂ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಇದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಯಳಂದೂರು ತಾಲ್ಲೂಕು: ಜಿಲ್ಲೆಯ ಪುಟ್ಟ ತಾಲ್ಲೂಕಾಗಿರುವ ಯಳಂದೂರಿನಲ್ಲಿ ಆಗಬೇಕಾಗಿರುವ ಕೆಲಸ ಸಾಕಷ್ಟಿದೆ. ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಿದೆ. ಸರ್ಕಾರಿ ಪದವಿ ಕಾಲೇಜು ಗ್ರಂಥಾಲಯ ಕಟ್ಟಡಕ್ಕೆ ಜಾಗ ಗುರುತಿಸಬೇಕು.ಕ್ರೀಡಾಂಗಣ ಆಗಬೇಕು. ವಿಳಂಬವಾಗುತ್ತಿರುವ ಬಿಗಿಗಿರಿ ರಂ‌ಗನಾಥಸ್ವಾಮಿ ದೇವಾಲಯ ಉದ್ಘಾಟನೆಗೊಳ್ಳಬೇಕಿದೆ.ಗ್ರಾಮೀಣ ರಸ್ತೆ ಮೇಲ್ದರ್ಜೆಗೇರಿಸಬೇಕಿದೆ. ಕೆರೆಗಳ ಹೂಳು ತೆಗೆಯಬೇಕಿದೆ.ಮಾಂಬಳ್ಳಿ ಹೊಳೆಗೆ ಸೇತುವೆ ಕಾಮಗಾರಿ ಮುಗಿಸಬೇಕಿದೆ.

ಹನೂರು ತಾಲ್ಲೂಕು: ಪ್ರತ್ಯೇಕ ತಾಲ್ಲೂಕು ಘೋಷಣೆಯಾಗಿದ್ದರೂ ಹನೂರಿಗೆ ಎಲ್ಲ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಈ ವರ್ಷವಾದರೂ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಅಭಿವೃದ್ಧಿಪಡಿಸಬೇಕಿದೆ. ನ್ಯಾಯಾಲಯ ಸ್ಥಾಪನೆಯಾಗಬೇಕಿದೆ.ಹನೂರು ಪಟ್ಟಣದಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಿದೆ.ಗ್ರಾಮೀಣ ಭಾಗದಲ್ಲಿ ಬೇಸಿಗೆ ಸಮಯದಲ್ಲಿ ಎದುರಾಗುವ ನೀರಿನ‌ ಸಮಸ್ಯೆಯನ್ನು ನೀಗಿಸಲು ಪರ್ಯಾಯ ಯೋಜನೆ ರೂಪಿಸಬೇಕಿದೆ. ಅರಣ್ಯದಂಚಿನ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಿದೆ.

ಶಾಸಕರು ಏನಂತಾರೆ?

ಹೊಸ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಡಿರುವ ಸಂಕಲ್ಪಗಳೇನು ಎಂಬ ಪ್ರಶ್ನೆಗೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌‌ ಅವರು ಪ್ರತಿಕ್ರಿಯಿಸಿದ್ದಾರೆ. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮತ್ತು ಹನೂರು ಶಾಸಕ ಆರ್‌.ನರೇಂದ್ರ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ಸಿ.ಪುಟ್ಟರಂಗಶೆಟ್ಟಿ:2021ರಲ್ಲಿ ನನ್ನ ಮೊಟ್ಟ ಮೊದಲ ಗುರಿ ಚಾಮರಾಜನಗರಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ತರುವುದು. ಉಳಿದಂತೆ ಕಾನೂನು ಕಾಲೇಜನ್ನು ಆರಂಭಿಸಲು ಪ್ರಯತ್ನ ಮಾಡುತ್ತೇನೆ. ಕೃಷಿ ಕಾಲೇಜಿಗೆ ಮಂಜೂರಾಗಿರುವ 75 ಎಕರೆ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿಸಲು ಆದ್ಯತೆ ನೀಡುತ್ತೇನೆ.

ಎನ್‌.ಮಹೇಶ್‌: ಕೋವಿಡ್‌ನಿಂದಾಗಿಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿದೆ. ಶಾಸಕರ ಅನುದಾನದ ಕೊರತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಹೈಟೆಕ್ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ಭವನ, ನಾಯಕರ ಸಮುದಾಯದ ಭವನ, ಶಾದಿಮಹಲ್ ನಿರ್ಮಾಣ, ಸರ್ಕಟನ್ ಕಾಲುವೆ, ನಗೋತ್ಥಾನದ ಕಾಮಗಾರಿಗಳು, ಚಿಕ್ಕರಂಗನಾಥ ಕೆರೆ ಮತ್ತು ಕೊಂಗಳಕೆರೆಗಳು ಆಧುನೀಕರಣ ಹಾಗೂ ಈಶ್ವರನ ದೇವಸ್ಥಾನ ಅಭಿವೃದ್ಧಿಯ ಗುರಿ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.