ADVERTISEMENT

ವನ್ಯಜೀವಿ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ: ಡಿಸಿಎಫ್‌

ಬಿಆರ್‌ಟಿಯ ಕೆ.ಗುಡಿಯಲ್ಲಿ ವಿಶ್ವ ಹುಲಿ ದಿನಾಚರಣೆ, ಮಕ್ಕಳಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 7:09 IST
Last Updated 30 ಜುಲೈ 2023, 7:09 IST
ಬಿಆರ್‌ಟಿಯ ಕೆ.ಗುಡಿಯಲ್ಲಿ ಶನಿವಾರ ನಡೆದ ವಿಶ್ವ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌, ಅಧಿಕಾರಿಗಳು, ಸಿಬ್ಬಂದಿ ಇದ್ದರು 
ಬಿಆರ್‌ಟಿಯ ಕೆ.ಗುಡಿಯಲ್ಲಿ ಶನಿವಾರ ನಡೆದ ವಿಶ್ವ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌, ಅಧಿಕಾರಿಗಳು, ಸಿಬ್ಬಂದಿ ಇದ್ದರು    

ಚಾಮರಾಜನಗರ: ‘ಬಿಆರ್‌ಟಿಯಲ್ಲಿ ಅರಣ್ಯ, ಹುಲಿಗಳ ಸಂರಕ್ಷಣೆ ಚೆನ್ನಾಗಿ ಆಗುತ್ತಿದೆ. ಬೇರೆ ಅರಣ್ಯ ಪ್ರದೇಶಗಳಿಗೆ ಹೋಲಿಸಿದರೆ, ಇಲ್ಲಿನ ಕಾಡಂಚಿನ ಜನರು, ರೈತರು ಉತ್ತಮ ಸಹಕಾರ ನೀಡುತ್ತಿದ್ದಾರೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಮತ್ತು ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಶನಿವಾರ ಹೇಳಿದರು. 

ಸಂರಕ್ಷಿತ ಪ್ರದೇಶದ ವತಿಯಿಂದ ತಾಲ್ಲೂಕಿನ ಕೆ.ಗುಡಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಅರಣ್ಯ, ವನ್ಯಜೀವಿಗಳ ರಕ್ಷಣೆಗೆ ಎಲ್ಲರ ಸಹಕಾರವೂ ಅಗತ್ಯ. ಹಿಂದಿನ ಹುಲಿಗಣತಿಗೆ ಹೋಲಿಸಿದರೆ ಈ ಬಾರಿಯ ಗಣತಿಯಲ್ಲಿ ನಮ್ಮಲ್ಲಿ ಹುಲಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಅದರ ಅರ್ಥ ಹುಲಿಗಳು ಸತ್ತು ಹೋಗಿವೆ ಎಂದಲ್ಲ. ಹುಲಿಗಳು ಒಂದು ಕಾಡಿನಿಂದ ಒನ್ನೊಂದು ಕಾಡಿಗೆ ವಲಸೆ ಹೋಗುತ್ತವೆ’ ಎಂದರು.

ADVERTISEMENT

‘ಕಾಡಂಚಿನ ಶಾಲಾ ಮಕ್ಕಳಲ್ಲಿ ಅರಣ್ಯ, ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದೆವು. ಕಾಡಂಚಿನ ಮಕ್ಕಳಿಗೆ ಅರಣ್ಯದ ಬಗ್ಗೆ ತಿಳಿವಳಿಕೆ ಇದೆ. ಆದರೆ, ಸಫಾರಿ, ಕಾಡಿನಲ್ಲಿ ವಾಹನದ ಸುತ್ತಾಟದ ಬಗ್ಗೆ ಗೊತ್ತಿರುವುದಿಲ್ಲ. ಆ ಕಾರಣಕ್ಕಾಗಿ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲ ಮಕ್ಕಳನ್ನು ಕರೆದು, ಅವರಿಗೆ ಸಫಾರಿ ವ್ಯವಸ್ಥೆ ಮಾಡಲಾಗಿದೆ’ ಎಂದರು. 

ಬಹುಮಾನ ವಿತರಣೆ: ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ, ಪುಣಜನೂರು, ಬೈಲೂರು ಮತ್ತು ಕೊಳ್ಳೇಗಾಲ ವಲಯಗಳ ಕಾಡಂಚಿನ ಶಾಲಾ ಮಕ್ಕಳಿಗೆ ಆಯೀಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. 

ವಲಯ ಅರಣ್ಯಾಧಿಕಾರಿಗಳಾದ ವಿನೋದ್‌ ಗೌಡ, ನಿಸಾರ್‌ ಅಹಮದ್‌, ಉಮೇಶ್‌, ಪ್ರಮೋದ್‌, ವಾಸು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.