ಸಂತೇಮರಹಳ್ಳಿ: ರಾಜ್ಯವನ್ನು ಮಾದಕ ವ್ಯಸನ ಮುಕ್ತವಾಗಿಸಲು ಯುವ ಜನತೆ ಪಾತ್ರ ಬಹಳ ಮುಖ್ಯವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಸಮೀಪದ ಕುದೇರು ಗ್ರಾಮದ ಸರ್ಕಾರಿ ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಹಾಗೂ ಕಾಲೇಜು ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮಾದಕ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆ ಮಾದಕ ವ್ಯಸನಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿವೆ. ರಾಜ್ಯವನ್ನು ಮಾದಕ ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಯುವ ಜನತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ವಿದ್ಯಾರ್ಥಿಗಳು ಓದುವ ವೇಳೆಯಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಉನ್ನತ ವ್ಯಾಸಂಗದ ಕಡೆ ಹೆಚ್ಚು ಒತ್ತು ನೀಡಿ ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಉದ್ಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಇಂದು ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 18 ವರ್ಷ ಒಳಪಟ್ಟ ಯುವಕರು ಮಾದಕ ಹಾಗೂ ಮದ್ಯಪಾನ ಸೇವನೆ ಮಾಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಮಾದಕ ಸೇವನೆಯಿಂದ ಗಂಟಲು, ಶ್ವಾಸಕೋಶ ಕ್ಯಾನ್ಸರ್ ಸೇರಿದಂತೆ ನಾನಾ ತೊಂದರೆಗಳು ಉಂಟಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಕಾಲೇಜು ಸಮಿತಿ ಉಪಾಧ್ಯಕ್ಷ ಸುರೇಶ್, ಪ್ರಾಂಶುಪಾಲ ಶಿವಪ್ರಕಾಶ್, ಮುಖ್ಯ ಶಿಕ್ಷಕ ತಮ್ಮಯ್ಯ, ಪಿಎಸ್‌ಐ ಕುಮುದಾ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ವಸುಪಾಲ್, ಉಪಾಧ್ಯಕ್ಷ ಮಹದೇವಯ್ಯ, ನಿರ್ದೇಶಕ ಕೆ.ಎಂ.ರಾಜೇಂದ್ರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಅಶೋಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ಉಪಾಧ್ಯಕ್ಷ ಚಂದನ್‌ಪುಟ್ಟಬುದ್ದಿ, ಬ್ಲಾಕ್ ಅಧ್ಯಕ್ಷರಾದ ವಿಜಯ್, ಅಜಯ್, ದರ್ಶನ್, ವಿಶ್ವ, ಸಚಿನ್, ನಂಜುಂಡಶೆಟ್ಟಿ, ಕರೀಂ, ಪುರುಷೋತ್ತಮ, ಎಸ್.ಮಹದೇವ, ಸಂತೇಮರಹಳ್ಳಿ ಪಶಿ, ಗಣಿಗನೂರು ನಾಗಯ್ಯ, ರುದ್ರಮೂರ್ತಿ, ಬಸವಟ್ಟಿ ಗಿರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.