ADVERTISEMENT

ಅಂಕಕ್ಕಿಂತ ಮಾನವೀಯ ಮೌಲ್ಯ ಮೇಲು

ಬಿಜಿಎಸ್ ಅಗಲಗುರ್ಕಿ ಕ್ಯಾಂಪಸ್‌ನಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಸುಂದರ್‌ರಾಜ್‌ ಅರಸ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 8:47 IST
Last Updated 29 ಏಪ್ರಿಲ್ 2018, 8:47 IST

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಬರೀ ಪಠ್ಯದಲ್ಲಿರುವುದನ್ನು ಓದಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಪದವಿ ಪಡೆದರೆ ಸಾಲದು. ಸಮಾಜದಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಬೇಕಾದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬೆಂಗಳೂರಿನ ಮೌಲ್ಯಮಾಪನ ಕುಲಪತಿ ಸುಂದರ್‌ರಾಜ್‌ ಅರಸ್‌ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಅಗಲಗುರ್ಕಿಯಲ್ಲಿರುವ ಬಿಜಿಎಸ್‌ ವಿಜ್ಞಾನ ಅಕಾಡೆಮಿ ಮತ್ತು ಸಂಶೋಧನೆ ಕೇಂದ್ರ ಮತ್ತು ಬಿಜಿಎಸ್ ನಿರ್ವಹಣಾ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್ಸಿ, ಬಿ.ಕಾಂ, ಬಿಬಿಎ, ಎಂಕಾಂ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪದವಿ ಪಡೆದರೆ ಜವಾಬ್ದಾರಿ ಮುಗಿಯುವುದಿಲ್ಲ. ಬದಲು ಹೆಚ್ಚುತ್ತದೆ. ಅದು ಸಾರ್ವಜನಿಕ ಜೀವನದಲ್ಲಿ ಇಟ್ಟ ಮೊದಲ ಹೆಜ್ಜೆಯಾಗಿರುತ್ತದೆ. ಮುಂದಿನ ಹಂತದಲ್ಲಿ ಕಲಿಯುವ ವಿದ್ಯಾಭ್ಯಾಸ ಬದುಕಿನ ಭವಿಷ್ಯ ನಿರ್ಧರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಡತೆ, ನಂಬಿಕೆ, ವಿಶ್ವಾಸವನ್ನು ಗಳಿಸಿಕೊಳ್ಳುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಯುವಶಕ್ತಿ ಹೆಚ್ಚಾಗಿರುವ ದೇಶ ಅಭಿವೃದ್ಧಿಯಾಗುತ್ತದೆ. ಸದೃಢ ದೇಶವನ್ನು ಕಟ್ಟಬೇಕಾದ ಯುವ ಜನಾಂಗ ಎಂದಿಗೂ ದಾರಿ ತಪ್ಪಬಾರದು. ಇವತ್ತು ಎಲ್ಲ ಕ್ಷೇತ್ರಗಳಲ್ಲಿ ಯುವತಿಯರು ಯುವಕರಿಗಿಂತ ಹೆಚ್ಚು ಉತ್ಸಕರಾಗಿ ಮುಂದೆ ಬಂದು ಉತ್ತಮ ಹೆಸರು ಗಳಿಸುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ವಿಚಾರ. ವಿದ್ಯಾರ್ಥಿನಿಯರು ಪದವಿ ಪಡೆದು ಮನೆ ಬೆಳಗಿಸುವ ಜತೆಗೆ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಬೇಕು’ ಎಂದು ಹೇಳಿದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ಬರೀ ಮಾಹಿತಿ ನೀಡುವ ಕೇಂದ್ರಗಳಾಗಬಾರದು. ಸಮಾಜ ಒಳಿತಿಗೆ ಉಪಯೋಗವಾದ ಶಿಕ್ಷಣದ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಅನೇಕ ಮಹನೀಯರ ಸಾಧನೆಗಳ ಬಗ್ಗೆ ಅಧ್ಯಯನ ಮಾಡಿ, ಅವರ ಮಾದರಿಯಲ್ಲಿ ಬದುಕಿ ಸಮಾಜದ ಒಳಿತಿಗಾಗಿ ದುಡಿಯಬೇಕು. ವಿದ್ಯಾರ್ಥಿಗಳಲ್ಲಿ ಸದಾ ಜ್ಞಾನದ ಹಸಿವು ಇರಬೇಕು’ ಎಂದು ತಿಳಿಸಿದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ, ‘ಪದವಿಧರರಾಗಿ ಹೊರಹೊಮ್ಮುತ್ತಿರುವ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳನ್ನು ಅರ್ಥಮಾಡಿಕೊಂಡು ಸೃಜನಶೀಲ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಪೊಷಕರ ಬೆವರಿನ ಪರಿಶ್ರಮವನ್ನು ಅರ್ಥಮಾಡಿಕೊಂಡು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಬೇಕು. ತಂದೆ ತಾಯಿಗೆ ಒಳ್ಳೆಯ ಹೆಸರು ತರುವ ಮಕ್ಕಳಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್ಸಿ, ಬಿಕಾಂ, ಬಿಬಿಎ, ಎಂ.ಕಾಂ ವಿಭಾಗಗಳ 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪಿ.ಯು ಕಾಲೇಜಿನ ಪ್ರಾಂಶುಪಾಲ ಎಚ್‌.ಬಿ.ರಮೇಶ್‌, ಡೀನ್‌ ಮಧುಸೂಧನ್‌, ಮುಖಂಡ ವೆಂಕಟೇಶ್‌ ಬಾಬು ಉಪಸ್ಥಿತರಿದ್ದರು.

**
ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಶ್ರದ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಆದರ್ಶ ನಾಗರಿಕರಾಗಿ ಬೆಳೆಯಲು ಸಾಧ್ಯ
ಎನ್‌.ಶಿವರಾಮರೆಡ್ಡಿ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.