ADVERTISEMENT

ಅಂಗನವಾಡಿ ಕೇಂದ್ರಗಳಲ್ಲಿ ಅವ್ಯವಸ್ಥೆ ದರ್ಶನ

ಕಾರ್ಯಕರ್ತೆಯರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:34 IST
Last Updated 13 ಡಿಸೆಂಬರ್ 2012, 10:34 IST

ಶಿಡ್ಲಘಟ್ಟ: ಅಂಗನವಾಡಿ ಕೇಂದ್ರಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡದೆ ಕರ್ತವ್ಯಲೋಪ ಎಸಗಿದ ಮೇಲ್ವಿಚಾರಕಿ ಶಾಂತಮ್ಮ ಅವರನ್ನು ಸೇವೆಯಿಂದ ಅಮಾನತುಗೊಳಿಸುವುದಲ್ಲದೆ, ಸರಿಯಾಗಿ ಕಾರ್ಯನಿರ್ವಹಿಸದ ಪಿಲ್ಲಗುಂಡ್ಲಹಳ್ಳಿ ಹಾಗೂ ಆನೆಮಡಗು ಗ್ರಾಮಗಳ ಅಂಗನವಾಡಿ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎನ್. ಮಂಜುಳಾ ಆದೇಶಿಸಿದರು.

ತಾಲೂಕಿನ ಪಿಲ್ಲಗುಂಡ್ಲಹಳ್ಳಿ ಹಾಗೂ ಆನೆಮಡಗು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಸಮಸ್ಯೆಗಳ ಸಾಕ್ಷಾತ್ ದರ್ಶನವಾಯಿತು. ಮಕ್ಕಳಿಗೆ ವಿತರಿಸಬೇಕಿದ್ದ ಆಹಾರ ಪದಾರ್ಥಗಳು ಇಲಿ, ಹೆಗ್ಗಣಗಳ ಪಾಲಾಗಿತ್ತು. ಮಕ್ಕಳು ಕುಳಿತುಕೊಳ್ಳುವ ಚಾಪೆ ಮೂಲೆಯಲ್ಲಿ ಬಿದ್ದಿತ್ತು. ಪಾತ್ರೆ, ಪಗಡೆಗಳ ಮೇಲೆ ದೂಳು ಕುಳಿತು ಬಳಸಲು ಯೋಗ್ಯವಲ್ಲದಷ್ಟು ಹಾಳಾಗಿತ್ತು. ಒಂದು ದಾಖಲೆಯನ್ನು ಕೂಡ ಸಮರ್ಪಕವಾಗಿ ನಿರ್ವಹಿಸಿರಲಿಲ್ಲ.

ಇದರಿಂದ ಕುಪಿತಗೊಂಡ ಜಿಲ್ಲಾಧಿಕಾರಿ, ಈ ಭಾಗದ ಮೇಲ್ವಿಚಾರಕಿ ಶಾಂತಮ್ಮಳನ್ನ ಕೂಡಲೆ ಅಮಾನತು ಪಡಿಸುವಂತೆ ಸೂಚಿಸಿದರಲ್ಲದೆ ಆನೆಮಡಗು ಗ್ರಾಮದ ಒಂದು ಮತ್ತು 2ನೇ ಕೇಂದ್ರಗಳ ಕಾರ್ಯಕರ್ತೆಯರಿಗೆ ಒಂದು ತಿಂಗಳ ಸಂಬಳ ಸ್ಥಗಿತಗೊಳಿಸುವಂತೆ ಹಾಗೂ ಪಿಲ್ಲಗುಂಡ್ಲಹಳ್ಳಿ ಕೇಂದ್ರದ ಕಾರ್ಯಕರ್ತೆಗೆ ಶೋಕಾಸ್ ನೊಟೀಸ್ ವಿತರಿಸಿ, ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುರೇಖಾ ಅವರಿಗೆ ಆದೇಶಿಸಿದರು.

ಇದಲ್ಲದೆ ಕೇಂದ್ರಗಳಲ್ಲಿ ಇಷ್ಟು ಮಾತ್ರದ ಅವ್ಯವಸ್ಥೆಗಳು ತಲೆದೋರಿದ್ದರೂ ನೀವು ಏನು ಮಾಡುತ್ತಿದ್ದೀರಿ, ನಿಮಗೆ ಓಡಾಡಲು ಇಲಾಖೆ ಜೀಪಿಲ್ಲವೇ? ಅನುದಾನದ ಕೊರತೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದರಲ್ಲದೆ ಕಚೇರಿಯಲ್ಲಿ ಕುಳಿತುಕೊಂಡು ಸಂಬಳ ಎಣಿಸಿಕೊಂಡರೆ ಎಲ್ಲವೂ ಸರಿಹೋಗಲ್ಲ ಎಂದು ಉಪನಿರ್ದೇಶಕರು ಹಾಗೂ ಸಿಡಿಪಿಒ ಅವರನ್ನು ತರಾಟೆಗೆ ತಗೆದುಕೊಂಡರು. ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕೂಡಲೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸಿಡಿಪಿಒ ಪ್ರಕಾಶ್‌ಕುಮಾರ್‌ಗೆ ಸೂಚಿಸಿದರು.

ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಗೋಧಿ ಮಿಶ್ರಿತ ನ್ಯೂಟ್ರಿಮಿಕ್ಸ್‌ನ್ನು ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಆಹಾರ ಪದಾರ್ಥಗಳ ಗುತ್ತಿಗೆ ವಹಿಸಿರುವ ಎಂಎಸ್‌ಪಿಟಿಸಿಎಲ್  ವಿರುದ್ಧ ಏಕೆ ದೂರು ನೀಡಿಲ್ಲ. ನಾನೇ ಈ ಬಗ್ಗೆ ಸರಕಾರಕ್ಕೆ ವರದಿ ನೀಡುತ್ತೇನೆ ಎಂದು ಹೇಳಿದರು.
ಆನೆಮಡಗು ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯಗಳಿಲ್ಲ. ಮಕ್ಕಳು ಕಲಿಯುವ ಸ್ಥಳ ಇದಲ್ಲ.

ಕೂಡಲೇ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವಂತೆ ತಹಶೀಲ್ದಾರ್ ಎಲ್.ಭೀಮಾನಾಯಕ್ ಅವರಿಗೆ ಸೂಚಿಸಿದರು.

ಪಿಲ್ಲಗುಂಡ್ಲಹಳ್ಳಿ ಗ್ರಾಮದಲ್ಲಿ ಹೃದಯದ ತೊಂದರೆ ಅನುಭವಿಸುತ್ತಿರುವ ಮೂರು ವರ್ಷದ ಬಾಲಕಿ ರಮ್ಯಳಿಗೆ ಬಾಲಸಂಜೀವಿನಿ ಯೋಜನೆಯಲ್ಲಿ ಸಂಪೂರ್ಣವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ತಹಶೀಲ್ದಾರ್‌ಗೆ ಸೂಚಿಸಿದರು. ಆನಂತರ ಪಿಂಡಿಪಾಪನಹಳ್ಳಿ, ಸೊಣ್ಣೇನಹಳ್ಳಿ, ವೀರಾಪುರ, ಹಂಡಿಗನಾಳದ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.