ADVERTISEMENT

ಅಂಡರ್‌ಪಾಸ್ ಕಾಮಗಾರಿ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:15 IST
Last Updated 9 ಏಪ್ರಿಲ್ 2012, 9:15 IST

ಚಿಕ್ಕಬಳ್ಳಾಪುರ: ರೈಲ್ವೆ ನಿಲ್ದಾಣದ ಬಳಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಪ್ರಪ್ರಥಮ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಈಗ ಮತ್ತೆ ಚಾಲನೆ ದೊರೆತಿದೆ. ನಗರದ ಕೆಳಗಿನತೋಟ ಬಡಾವಣೆಯಿಂದ ಬಿ.ಬಿ.ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ವಿನೂತನ ಮಾದರಿಯ ಅಂಡರ್‌ಪಾಸ್ ಕಾಮಗಾರಿ ಚಾಲ್ತಿಯಲ್ಲಿದೆ.

ಕಳೆದೊಂದು ವಾರದಿಂದ ಮತ್ತೆ ಕಾಮಗಾರಿ ಆರಂಭಗೊಂಡಿದ್ದು, ಕೆಳಗಿನತೋಟ ಬಡಾವಣೆಗೆ ಹೋಗುವ ಮಾರ್ಗದಲ್ಲಿ ಆಳವಾದ ತೆಗ್ಗು ತೆಗೆಯಲಾಗಿದೆ. ಸದ್ಯಕ್ಕೆ ಸಿಮೆಂಟ್ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನಗಳ ಸುಗಮ ಸಂಚಾರಕ್ಕ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿಯಿರುವ ಕಾರಣ ಎಲ್ಲೆಡೆ ದೂಳು ಆವರಿಸಿಕೊಂಡಿದೆ. ದ್ವಿಚಕ್ರವಾಹನ, ಕಾರು ಮತ್ತು ಬೇರೆ ವಾಹನ ಸಂಚರಿಸಿದಾಗಲೆಲ್ಲ ಎದ್ದೇಳುವ ದೂಳಿನಿಂದ ಇಡೀ ಆವರಣ ದೂಳುಮಯವಾಗುತ್ತದೆ.

`ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಕೈಗೊಂಡಿದ್ದೇವೆ. ಒಂದು ಬದಿಯ ರೈಲ್ವೆ ಹಳಿಯಿಂದ ಬೃಹತ್ ಮರದವರೆಗೆ ಬೃಹತ್ ತೆಗ್ಗು ತೆಗೆದಿದ್ದೇವೆ.

ಪಕ್ಕದಲ್ಲೇ ಇರುವ ಶಿರಡಿಸಾಯಿ ಬಾಬಾ ದೇವಾಲಯದ ಪಕ್ಕದಲ್ಲೇ ಇರುವ ಕೆಳಗಿನತೋಟ ಬಡಾವಣೆಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತೇವೆ. ಮತ್ತೊಂದು ಬದಿಯ ರೈಲ್ವೆ ಹಳಿಯಿಂದ ಬಿ.ಬಿ.ರಸ್ತೆಯವರೆಗೆ ಸಂಪರ್ಕ ಕಲ್ಪಿಸುತ್ತೇವೆ~ ಎಂದು ಕಾಮಗಾರಿಯ ಮೇಲ್ವಿಚಾರಕ ಪಿ.ವಿ.ರಮಣ್ ~ಪ್ರಜಾವಾಣಿ~ಗೆ ತಿಳಿಸಿದರು.

`ಬೃಹತ್ ಮರ ಕಡಿಯದೇ ಮತ್ತು ದೇವಾಲಯದ ಆವರಣಗೋಡೆಗೂ ಹಾನಿ ಮಾಡದೇ ಕಾಮಗಾರಿ ಕೈಗೊಳ್ಳಲು ಪ್ರಯತ್ನಿಸುತ್ತೇವೆ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಕೆಲ ತಿಂಗಳು ಬೇಕಾಗಬಹುದು.

ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡಲ್ಲಿ, ಸಾರ್ವಜನಿಕರು ಅಂಡರ್‌ಪಾಸ್ ಮೂಲಕ ಕೆಳಗಿನತೋಟ ಬಡಾವಣೆ ಅಥವಾ ಬಿ.ಬಿ.ರಸ್ತೆಗೆ ಹೋಗಬಹುದು. ರೈಲ್ವೆ ಲೆವಲ್ ಕ್ರಾಸಿಂಗ್‌ನಲ್ಲಿ ತುಂಬ ಹೊತ್ತಿನವರೆಗೆ ಕಾಯುವಂತಹ ಸಂದರ್ಭ ಕೂಡ ಇರುವುದಿಲ್ಲ. ವಾಹನ ದಟ್ಟಣೆಯೂ ಆಗುವುದಿಲ್ಲ~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.