ADVERTISEMENT

ಅತ್ಯಾಧುನಿಕ ಕಾರು, ಕೆ.ಜಿ.ಗಟ್ಟಲೆ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 13:19 IST
Last Updated 19 ಏಪ್ರಿಲ್ 2013, 13:19 IST

ಚಿಕ್ಕಬಳ್ಳಾಪುರ: ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳ ಆಸ್ತಿ ವಿವರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅದರಲ್ಲಿನ ಮಾಹಿತಿ ಅಚ್ಚರಿ ಮೂಡಿಸುತ್ತವೆ. ಒಬ್ಬರು 80 ಕೋಟಿ ರೂಪಾಯಿಗೂ ಮೀರಿ ಆಸ್ತಿ ಹೊಂದಿದ್ದರೆ, ಇನ್ನೊಬ್ಬರು 2 ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿ ಹೊಂದಿದ್ದಾರೆ.

ಎಸ್.ಎನ್.ಸುಬ್ಬಾರೆಡ್ಡಿ (47) ಟಿಸಿಎಚ್ ಪೂರ್ಣಗೊಳಿಸಿದ್ದು, ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿಯ ಮೌಲ್ಯವು 80 ಕೋಟಿ ರೂಪಾಯಿ ಸಮೀಪಿಸುತ್ತದೆ. ಅವರು 24.15 ಕೋಟಿ ರೂಪಾಯಿ ಮೌಲ್ಯದಷ್ಟು ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ 99 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರು 53 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ 8.27 ಕೋಟಿ ರೂಪಾಯಿ ಮೌಲ್ಯ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಮೇಲೆ 19.01 ಕೋಟಿ ರೂಪಾಯಿ ಸಾಲದ ಹೊಣೆಯಿದ್ದರೆ, ಅವರ ಪತ್ನಿಯ ಮೇಲೆ 7.20 ಲಕ್ಷ ರೂಪಾಯಿ ಸಾಲದ ಹೊಣೆಯಿದೆ. ಅವರ ಬಳಿ 7 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ಬಳಿ 2.50 ಲಕ್ಷ ರೂಪಾಯಿ ನಗದು ಇದೆ.

ಎಲ್ಲ ಮಾದರಿ ಅತ್ಯಾಧುನಿಕ ಕಾರುಗಳನ್ನು ಹೊಂದಿರುವ ಸುಬ್ಬಾರೆಡ್ಡಿ ಅವರ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಕಾರು ಮತ್ತು ವಾಹನಗಳಿವೆ. 3 ಲಕ್ಷ ರೂಪಾಯಿ ಮೌಲ್ಯದ ಮಿಟ್ಸುಬಿಷಿ ಲ್ಯಾನ್ಸರ್ ಕಾರು, 10 ಲಕ್ಷ ರೂಪಾಯಿ ಮೌಲ್ಯ ಮಿಟ್ಸುಬುಷಿ ಪಜೇರೋ ಕಾರು, 18 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು, 4.50 ಲಕ್ಷ ರೂಪಾಯಿ ಹುಂಡೈ ಕಾರು, ಒಟ್ಟು 80 ಸಾವಿರ ರೂಪಾಯಿ ಎರಡು ಮಾರುತಿ ಒಮ್ನಿ ಕಾರು, ಒಟ್ಟು 8.50 ಲಕ್ಷ ರೂಪಾಯಿ ಮೌಲ್ಯದ ಎರಡು ಸರಕು ಸಾಗಣೆ ವಾಹನಗಳಿವೆ. ಒಟ್ಟು 6.37 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ ಮತ್ತು 51 ಸಾವಿರ ರೂಪಾಯಿ ಮೌಲ್ಯದ 1 ಕೆಜಿ ಬೆಳ್ಳಿ ಸುಬ್ಬಾರೆಡ್ಡಿಯವರ ಬಳಿಯಿದ್ದರೆ, ಅವರ ಪತ್ನಿ ಶೀಲಾ ಅವರ ಬಳಿ 20.40 ಲಕ್ಷ ರೂಪಾಯಿ ಮೌಲ್ಯದ 800 ಚಿನ್ನ ಇದೆ.

ಕೆ.ಪಿ.ಬಚ್ಚೇಗೌಡ (58) ಬಿ.ಎಸ್ಸಿ ಪದವೀಧರರಾಗಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಮತ್ತು ಕುಟುಂಬ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಲೆಕ್ಕ ಹಾಕಿದ್ದಲ್ಲಿ, ಮೂರು ಕೋಟಿ ರೂಪಾಯಿ ಮೌಲ್ಯ ಸಮೀಪಿಸುತ್ತದೆ. ಅವರು 17.57 ಲಕ್ಷ ರೂಪಾಯಿ ಮೌಲ್ಯದಷ್ಟು ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ಪಾರ್ವತಮ್ಮ 6.50 ಲಕ್ಷ ಮೌಲ್ಯದಷ್ಟು ಚರಾಸ್ತಿ ಹೊಂದಿದ್ದಾರೆ. ಅವರ ಒಬ್ಬ ಪುತ್ರ ಸಂದೀಪ್ 9.01 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದರೆ, ಅವರ ಇನ್ನೊಬ್ಬ ಪುತ್ರ 37 ಸಾವಿರ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಕೆ.ಪಿ.ಬಚ್ಚೇಗೌಡ 2.66 ಕೋಟಿ ರೂಪಾಯಿ ಮ್ಯಲದ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ ಪಾರ್ವತಿ 20 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು ಸ್ಥಿರಾಸ್ತಿಯಲ್ಲಿ ಸ್ವಯಾರ್ಜಿತ 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯಾಗಿದ್ದರೆ, 2.16 ಕೋಟಿ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿ. ಒಟ್ಟು 6.30 ಲಕ್ಷ ರೂಪಾಯಿಗಳಷ್ಟು ಸಾಲ ಹೊಂದಿದ್ದಾರೆ.

ಕೆ.ಪಿ.ಬಚ್ಚೇಗೌಡರ 5 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ಬಳಿ 90 ಸಾವಿರ ರೂಪಾಯಿ ಮತ್ತು ಇಬ್ಬರ ಪುತ್ರರ ಬಳಿ 85 ಸಾವಿರ ರೂಪಾಯಿ ನಗದು ಇದೆ. 4 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೊ ವಾಹನ ಹೊಂದಿರುವ ಅವರು, 55 ಸಾವಿರ ರೂಪಾಯಿ ಮೌಲ್ಯದ ಪವರ್ ಟಿಲ್ಲರ್ ಕೂಡ ಹೊಂದಿದ್ದಾರೆ. ಅವರ ಬಳಿ 60 ಸಾವಿರ ರೂಪಾಯಿ ಮೌಲ್ಯದ ಎರಡು ಚಿನ್ನದ ಉಂಗುರಗಳು ಇದ್ದರೆ, ಅವರ ಪತ್ನಿ 5 ಲಕ್ಷ ರೂಪಾಯಿ ಮೌಲ್ಯದ 500 ಗ್ರಾಂ ಚಿನ್ನ ಮತ್ತು 60 ಸಾವಿರ ರೂಪಾಯಿ ಮೌಲ್ಯದ 1 ಕೆ.ಜಿ. ಬೆಳ್ಳಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.