ADVERTISEMENT

ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮರಳು ಫಿಲ್ಟರ್‌ಗೆ ಚಿಕ್ಕಲಮಡಗು ನೀರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 5:02 IST
Last Updated 2 ಏಪ್ರಿಲ್ 2013, 5:02 IST

ದೊಡ್ಡಬಳ್ಳಾಪುರ:  ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಎರಡು ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಕ್ಕಲಮಡಗು  ಅಣೆಕಟ್ಟಿನ ಹೂಳು ತೆಗೆಯುವ ಕೆಲಸ ಇತ್ತೀಚೆಗೆ ಮುಕ್ತಾಯವಾಗಿದೆ. ಆದರೆ  ಅಣೆಕಟ್ಟಿನ ಹಿಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮರಳು ಫಿಲ್ಟರ್‌ನಿಂದ ಜಕ್ಕಲಮಡಗು ಅಣೆಕಟ್ಟಿನಿಂದ ಮತ್ತೆ ಹೂಳಿನಿಂದ ತುಂಬಿ ಹೋಗುತ್ತಿದೆ. 

ಜಕ್ಕಲಮಡಗು ಡ್ಯಾಂ ಇರುವ ಪ್ರದೇಶ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಗೂ ಡ್ಯಾಂ ಹಿಂಭಾಗದ ಪ್ರದೇಶವಾದ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿದೆ. ಹೀಗಾಗಿ ಯಾವ ತಾಲ್ಲೂಕಿನ ಅಧಿಕಾರಿಗಳು ಮರಳು ಫಿಲ್ಟರ್ ಕೇಂದ್ರಗಳ ವಿರುದ್ಧ ಕ್ರಮ ಕೈಗೊಂಡು ದೂರು ದಾಖಲಿಸಬೇಕು ಎನ್ನುವ ಜಿಜ್ಞಾಸೆ ನಿರ್ಮಾಣವಾಗಿದೆ.

  ಇದನ್ನು    ಬಂಡವಾಳ    ಮಾಡಿಕೊಂಡಿರುವ ಈ ಭಾಗದ ಜನರು ಡ್ಯಾಂನಿಂದ ಡಿಸೇಲ್ ಎಂಜಿನ್‌ಗಳ ಮೂಲಕ ನೀರನ್ನು  ಮೇಲೆತ್ತಿ ಡ್ಯಾಂನ ಸುತ್ತಮುತ್ತ  ಮರಳು ಫಿಲ್ಟರ್ ನಡೆಸುತ್ತಿದ್ದಾರೆ. ಮರಳನ್ನು    ಫಿಲ್ಟರ್ ಮಾಡಲು ಪ್ರತಿದಿನ ಸಾವಿರಾರು ಲೀಟರ್ ನೀರು ಬಳಕೆಯಾಗುತ್ತಿದೆ.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಎರಡು ನಗರಗಳ ಸುಮಾರು ಎರಡು ಲಕ್ಷ  ಜನರು  ಕುಡಿಯುವ ನೀರಿಗೆ ಜಕ್ಕಲಮಡಗು ಅಣೆಕಟ್ಟನ್ನು ಅವಲಂಬಿಸಿದ್ದಾರೆ. ಈ ಎರಡು ನಗರಗಳಲ್ಲೂ ಈಗ ತೀವ್ರ ನೀರಿನ ಕೊರತೆ ಉಂಟಾಗಿದ್ದು, ಒಂದು ಬಿಂದಿಗೆ (10 ಲೀಟರ್) ನೀರಿಗೆ 3 ರೂಪಾಯಿ ನೀಡಿ ಖರೀದಿಸಿ ಕುಡಿಯುತ್ತಿದ್ದಾರೆ. ಆದರೆ ಮರಳು ಫಿಲ್ಟರ್ ದಂಧೆ ಕೋರರು ಮಾತ್ರ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಯಾವುದೇ ಅಡೆತಡೆ ಇಲ್ಲದೆ ಮರಳು ಫಿಲ್ಟರ್ ಮಾಡಲು ಬಳಕೆ ಮಾಡುತ್ತಿದ್ದಾರೆ.

ಪ್ರತಿದಿನ ಕನಿಷ್ಠ 40ಕ್ಕೂ ಹೆಚ್ಚು  ಟ್ರ್ಯಾಕ್ಟರ್‌ಗಳ ಮೂಲಕ ಗುಂಗ್ಲೀರಹಳ್ಳಿ, ನಾರಸಿಂಹನಹಳ್ಳಿ ಗ್ರಾಮಗಳ ಮೂಲಕ ಮರಳು ಸಾಗಾಣಿಕೆನಡೆಯುತ್ತಿದೆ.  ಅಣೆಕಟ್ಟಿನಲ್ಲಿ ಕುಡಿಯುವ ನೀರು ಬಳಸಿ ಮರಳು ಫಿಲ್ಟರ್ ನಡೆಯುತ್ತಿದ್ದರೂ  ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ತಾಲ್ಲೂಕಿನ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಕ್ಕಲಮಡಗು ಅಣೆಕಟ್ಟಿನ ಸುತ್ತಲಿನ ಗ್ರಾಮಸ್ಥರು ತೀವ್ರ ಆಕ್ರೊಶ  ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.