ADVERTISEMENT

ಅಭಿವೃದ್ಧಿಗೆ ಗಮನಹರಿಸಿ: ಸದಸ್ಯರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 11:00 IST
Last Updated 24 ಜನವರಿ 2011, 11:00 IST

ಶಿಡ್ಲಘಟ್ಟ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸುವ ಜತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಮುಖಂಡ ಕೊತ್ತನೂರು ಪಂಚಾಕ್ಷರಿರೆಡ್ಡಿ ಸಲಹೆ ನೀಡಿದರು.

‘ನಾನು ಮೊದಲು ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೆ. ಆದರೆ ಪಕ್ಷದಲ್ಲಿನ ಕೆಲ ಮುಖಂಡರ ನಡವಳಿಕೆಯಿಂದ ಬೇಸತ್ತು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದೆ’ ಎಂದು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯಾವುದೇ ಪಕ್ಷದಿಂದ ಅನುಕೂಲ ಪಡೆದಿಲ್ಲ.  ಕೊತ್ತನೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 10 ಮಂದಿ ಸದಸ್ಯರನ್ನು ಬೆಂಬಲಿಸಿ ಗೆಲ್ಲಿಸಿದ್ದೇನೆ. ಆದರೆ ಜೆಡಿಎಸ್‌ನ ಕೆಲ ಮುಖಂಡರು ಈಗ ಸದಸ್ಯರಿಗೆ ಆಮಿಷಗಳನ್ನು ಒಡ್ಡಿ ಉಪ ವಿಭಾಗಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸದ ಪತ್ರ ನೀಡಿದ್ದಾರೆ.  ಜನರಿಂದ ಆಯ್ಕೆಯಾದ ಸದಸ್ಯರು ಮುಖಂಡರ ಅಡಿಯಾಳಾಗದೆ ಜನರಿಗಾಗಿ ಕೆಲಸ ಮಾಡಬೇಕು. ಅವಿಶ್ವಾಸವಿದ್ದರೆ ರಾಜೀನಾಮೆ ನೀಡಿ. ಪುನಃ ಚುನಾವಣೆಯನ್ನು ಎದುರಿಸಲಿ’ ಎಂದು ಅವರು ತಿಳಿಸಿದರು.

ಕೊತ್ತನೂರು ದೇವರಾಜ್, ಮರಿಸ್ವಾಮಪ್ಪ, ಚಂದ್ರಾಯಪ್ಪ, ವೆಂಕಟೇಶ್, ಪ್ರಸಾದ್, ನಾಗಣ್ಣ, ಕದಿರಿನಾಯಕನಹಳ್ಳಿ ಸಿ.ಕೃಷ್ಣಪ್ಪ, ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ನಿರ್ದೇಶಕ ಜಗದೀಶ್ ರೆಡ್ಡಿ, ಗೋವಿಂದಪ್ಪ, ಪಿಂಡಿಪಾಪನಹಳ್ಳಿ ನಟರಾಜ, ಮಂಜುನಾಥ, ಆಂಧ್ರ ಮುನಿರಾಜು, ಶಿವಕುಮಾರ್, ಆರುವಳ್ಳಿ ನಾರಾಯಣಸ್ವಾಮಿ, ಆಂಜನೇಯ, ಚನ್ನಕೃಷ್ಣ, ವೆಂಕಟರೋಣಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.