ADVERTISEMENT

ಅಹಿಂಸೆ, ಶಾಂತಿ ಇಂದಿನ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 7:21 IST
Last Updated 18 ಡಿಸೆಂಬರ್ 2017, 7:21 IST

ಗೌರಿಬಿದನೂರು: ‘ಹಿಂಸೆ ಮತ್ತು ಸ್ವಾರ್ಥ ಮನೋಭಾವ ಹೆಚ್ಚುತ್ತಿರುವ ಈ ಆಧುನಿಕ ಸಂದರ್ಭದಲ್ಲಿ ಅಹಿಂಸೆ ಮತ್ತು ಶಾಂತಿ ಸಂದೇಶ ಸಾರುವ ಜೈನ ಧರ್ಮ ಅನುಕರಣೀಯವಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಬ್ರಹ್ಮಗಿರಿಯಲ್ಲಿ ಭಾನುವಾರ ಆಯೋಜಿಸಿದ್ದ 108 ಶೀತಲನಾಥಸ್ವಾಮಿ, ಮತ್ತು ಗುಟ್ಟೇ ಬ್ರಹ್ಮದೇವರ 31ನೇ ವಾರ್ಷಿಕ ಮಹಾಭಿಷೇಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಇವತ್ತು ಜೈನರ ಪಾತ್ರ ಮುಖ್ಯವಾಗಿದೆ. ಅನೇಕ ಜೈನ ಮಹನೀಯರು ಹಳಗನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜೈನ ಸಾಹಿತ್ಯವಿಲ್ಲದೆ ಎಂದಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸದ ಪರಂಪರೆಯಲ್ಲಿ ಅವತ್ತಿನ ಪಾಳೇಗಾರರಿಗೆ, ರಾಜರ ಬೌದ್ಧಿಕ ಬೆಳೆವಣಿಗೆಗೆ ಜೈನ ಸಮುದಾಯ ಬೆಂಬಲವಾಗಿ ನಿಂತಿತ್ತು’ ಎಂದು ತಿಳಿಸಿದರು.

ADVERTISEMENT

ಬೇಗೂರು ವೀರೇಂದ್ರ ಕುಮಾರ್ ಮಾತನಾಡಿ, ‘ಜೈನ ಧರ್ಮ ಸಮಾಜದ ಒಳಿತಿಗೆ ಹೆಚ್ಚು ದುಡಿದಿದೆ. ಗುಟ್ಟೇ ಬ್ರಹ್ಮ ದೇವರ ಬಸದಿ ಅಭಿವೃದ್ಧಿಯಲ್ಲಿ ಅ.ನಾ. ಚಂದ್ರಕೀರ್ತಿ ಪ್ರಮುಖ ಪಾತ್ರವಹಿಸುತ್ತಾರೆ. ಭರತ ಖಂಡ ಎಂದು ಹೆಸರು ಬರಬೇಕಾದರೆ ಆದಿನಾಥ ತೀರ್ಥಂಕರರೇ ಕಾರಣ’ ಎಂದು ಹೇಳಿದರು.

‘ಮನುಷ್ಯನನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯವುದೇ ನಿಜವಾದ ಧರ್ಮ. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಬಹುತೇಕ ಮಂದಿ ಧರ್ಮದಿಂದ ವಿಮುಖರಾಗುತ್ತಿದ್ದಾರೆ. ಇಂದು ಹುಟ್ಟುವ ಮಗುವಿನಿಂದ ಮುಪ್ಪಿನ ವ್ಯಕ್ತಿಯವರೆಗೂ ಸಂಸ್ಕಾರ ಬೇಕಾಗಿದೆ’ ಎಂದರು.

ಗುಟ್ಟೇ ಬ್ರಹ್ಮದೇವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರಸನ್ನಯ್ಯ,ಕೆ.ಆರ್. ನಿರಂಜನ್, ತಹಶೀಲ್ದಾರ್ ಎಂ.ನಾಗರಾಜು, ದೇಗುಲದ ಅಭಿವೃದ್ಧಿ ಸಮಿತಿ ಸದಸ್ಯ ಕಾಂತರಾಜ್, ರಾಜೇಂದ್ರ ಪ್ರಸಾದ್, ಡಿ.ಎಸ್. ಭಾನು ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.