ADVERTISEMENT

ಆಲಿಕಲ್ಲು ಮಳೆಗೆ ದ್ರಾಕ್ಷಿ ತೋಟಗಳಿಗೆ ಹಾನಿ

ಎರಡು ತಾಲ್ಲೂಕಿನ ಕೆಲವೆಡೆ ಸುರಿದ ಮಳೆ; ಹಿಪ್ಪು ನೇರಳೆ ಸೊಪ್ಪಿಗೂ ಧಕ್ಕೆ, ಬೆಳೆಗಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:16 IST
Last Updated 31 ಮಾರ್ಚ್ 2018, 7:16 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯಲ್ಲಿ ಆಲಿಕಲ್ಲು ಮಳೆಗೆ ಹಾನಿಗೊಂಡ ದ್ರಾಕ್ಷಿ ಗೊಂಚಲು ತೋರಿಸುತ್ತಿರುವ ರೈತ ನಾರಾಯಣಸ್ವಾಮಿ
ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯಲ್ಲಿ ಆಲಿಕಲ್ಲು ಮಳೆಗೆ ಹಾನಿಗೊಂಡ ದ್ರಾಕ್ಷಿ ಗೊಂಚಲು ತೋರಿಸುತ್ತಿರುವ ರೈತ ನಾರಾಯಣಸ್ವಾಮಿ   

ಚಿಕ್ಕಬಳ್ಳಾಪುರ: ತಾಲ್ಲೂಕು ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಜೋರಾಗಿ ಸುರಿದ ಆಲಿಕಲ್ಲು ಸಹಿತ ಮಳೆಗೆ ನೂರಾರು ದ್ರಾಕ್ಷಿ ತೋಟಗಳು ಮತ್ತು ಹಿಪ್ಪು ನೆರಳೆ ಸೊಪ್ಪಿನ ತೋಟಗಳಿಗೆ ಹಾನಿಯಾಗಿದೆ.ತಾಲ್ಲೂಕಿನ ಹೊಸಹೂಡ್ಯ, ಗಿಡ್ನಳ್ಳಿ, ಯಲ್ಲಹಳ್ಳಿ, ರಾಮಚಂದ್ರ ಹೊಸೂರು, ತೌಡನಹಳ್ಳಿ, ಕೊಂಡೇನಹಳ್ಳಿ, ಕಡಶಿಗೇನಹಳ್ಳಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು, ಅಪ್ಪೆಗೌಡನಹಳ್ಳಿ, ಮೇಲೂರು, ಮಳ್ಳೂರು, ಗುಡಿಹಳ್ಳಿ, ಹಂದಿಗನಾಳ, ಮುತ್ತೂಕದ ಹಳ್ಳಿ ಸೇರಿದಂತೆ ಸುತ್ತಮುತ್ತ ಈ ಮಳೆ ಸುರಿದಿದೆ. ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಮಳೆ ಮಧ್ಯಾಹ್ನ 3ರ ವರೆಗೆ ಸುರಿದಿದೆ. ಈ ಪೈಕಿ ಶೇ 75 ರಷ್ಟು ಆಲಿಕಲ್ಲು ಸಹಿತ ಸುರಿದಿದೆ. ಕೆಲವೆಡೆ ಸುಮಾರು 100 ಗ್ರಾಂ ವರೆಗೆ ಆಲಿಕಲ್ಲು ಬಿದ್ದಿವೆ.

ಧಾರಾಕಾರ ಸುರಿದ ಮಳೆಗೆ ಕೊಯ್ಲಿಗೆ ಬಂದ ದ್ರಾಕ್ಷಿ ತೋಟಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಅನೇಕ ತೊಟಗಳಲ್ಲಿ ಕಟಾವಿಗೆ ಬಂದ ಹಣ್ಣಿನ ಗೊಂಚಲುಗಳು ಉದರಿ ಬಿದ್ದಿದ್ದು, ಗಿಡದಲ್ಲಿರುವ ಕಾಯಿ ಮತ್ತು ಹಣ್ಣುಗಳು ಆಲ್ಲಿಕಲ್ಲಿನ ಹೊಡೆತಕ್ಕೆ ಒಡೆದು ಹೋಗಿವೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನೊಂದೆಡೆ ಆಲಿಕಲ್ಲಿನಿಂದಾಗಿ ಹಿಪ್ಪು ನೆರಳೆ ಗಿಡಗಳ ಎಲೆಗಳು ಛಿದ್ರಗೊಂಡಿವೆ. ಆಲಿಕಲ್ಲಿನ ಮಳೆಗೆ ಸೊಪ್ಪು ವಿಷಮಯವಾಗಿ ಹುಳುಗಳಿಗೆ ತಿನ್ನಿಸಲು ಬಾರದಂತಾಗಿದ್ದು, ರೇಷ್ಮೆ ಬೆಳೆಗಾರರನ್ನು ಕಂಗಾಲು ಮಾಡಿದೆ. ಹೊಸಹೂಡ್ಯದಲ್ಲಿ ಮಳೆಯ ರಭಸಕ್ಕೆ ರೈತ ಸುರೇಶ್ ಅವರ ಅರ್ಧ ಎಕರೆ ಜಮೀನಿನಲ್ಲಿ ನಿರ್ಮಿಸಿದ್ದ ಪಾಲಿಹೌಸ್ ನೆಲ ಕಚ್ಚಿದೆ.

‘ಮೂರು ಎಕರೆ ತೋಟಕ್ಕೆ ₹ 4 ಲಕ್ಷ ಖರ್ಚು ಮಾಡಿದ್ದೆ. ಸುಮಾರು 60 ಟನ್ ದ್ರಾಕ್ಷಿ ಸದ್ಯ ತೋಟದಲ್ಲಿತ್ತು. 25 ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ ಆಲಿಕಲ್ಲಿನ ರಭಸಕ್ಕೆ ಶೇ 90 ರಷ್ಟು ಬೆಳೆ ಹಾನಿಯಾಗಿದೆ. ಈ ಬಾರಿ ಉತ್ತಮ ಬೆಲೆ ಇತ್ತು ಸುಮಾರು ₹ 20 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆ. ದಿಕ್ಕೆ ತೋಚದಂತಾಗಿದೆ’ ಎಂದು ಗಿಡ್ನಹಳ್ಳಿ ರೈತ ನಾರಾಯಣಸ್ವಾಮಿ ಅವರು ಅಳಲು ತೋಡಿಕೊಂಡರು.

ADVERTISEMENT

‘ಸಾಲ ಮಾಡಿ ಬೆಳೆದ ಬೆಳೆ ನೆಲ ಕಚ್ಚಿರುವುದು ನಮ್ಮನ್ನು ಸಂಕಷ್ಟಕ್ಕೆ ನೂಕಿದೆ. ಈ ಬಗ್ಗೆ ಗಮನ ಹರಿಸಿ ಪರಿಹಾರ ಕೊಡಿಸಬೇಕಾದ ಅಧಿಕಾರಿಗಳು ಫೋನ್ ಮಾಡಿದರು ಯಾರೊಬ್ಬರೂ ಕರೆ ಸ್ವೀಕರಿಸುತ್ತಿಲ್ಲ. ಒಂದೆಡೆ ಮಳೆಯ ಅನಾಹುತ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ ನಮಗಂತೂ ತುಂಬಾ ನೋವು ತಂದಿದೆ’ ಎಂದು ಹೇಳಿದರು.

ಈ ಕುರಿತು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು ಅವರನ್ನು ವಿಚಾರಿಸಿದರೆ, ‘ಸದ್ಯ ನಾನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಲು ಆಗಿಲ್ಲ. ಶನಿವಾರ ಬೆಳಿಗ್ಗೆ ನಮ್ಮ ಅಧಿಕಾರಿಗಳ ತಂಡ ಕಳುಹಿಸಿ ಎಷ್ಟು ತೋಟಗಳಿಗೆ ಹಾನಿಯಾಗಿದೆ, ಹಾನಿ ಪ್ರಮಾಣದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

**

ಇವತ್ತು ರಾಜ್ಯದಲ್ಲಿ ರೈತರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ. ಜಿಲ್ಲಾಡಳಿತವಾದರೂ ತ್ವರಿತಗತಿಯಲ್ಲಿ ದ್ರಾಕ್ಷಿ ಬೆಳೆಗಾರರಿಗೆ ನಷ್ಟ ಪರಿಹಾರ ಒದಗಿಸಲಿ – ಭಕ್ತರಹಳ್ಳಿ ಭೈರೇಗೌಡ,ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.