ADVERTISEMENT

ಆಸ್ಪತ್ರೆ ನಿರ್ಮಾಣಕ್ಕೆ ದಿಢೀರ್ ಗುದ್ದಲಿಪೂಜೆ!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:25 IST
Last Updated 1 ಅಕ್ಟೋಬರ್ 2012, 7:25 IST

ಚಿಕ್ಕಬಳ್ಳಾಪುರ: ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ವಿರೋಧದ ನಡುವೆಯೇ ನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ದಿಢೀರ್ ಚಾಲನೆ ನೀಡಲಾಗಿದೆ.

ಅಡ್ಡಿ-ಆಕ್ಷೇಪಣೆ ವ್ಯಕ್ತವಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆ ನಿರ್ಮಾಣ ಸಂಸ್ಥೆಯವರು ತರಾತುರಿಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ತಾಲ್ಲೂಕಿನಲ್ಲಿ ಬೇರೆಯಲ್ಲೂ ನಿವೇಶನ ಸಿಗದ ಕಾರಣ ನೂತನ ಜಿಲ್ಲಾ ಆಸ್ಪತ್ರೆಯನ್ನು ಹೊಸ ಬಸ್ ನಿಲ್ದಾಣದ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದಾಗ, ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.

ಮುಂದಿನ 20 ವರ್ಷದ ದೂರದೃಷ್ಟಿಯನ್ನು ಇರಿಸಿಕೊಂಡು ಆಸ್ಪತ್ರೆ ನಿರ್ಮಿಸಬೇಕೆ ಹೊರತು 4.28 ಎಕರೆ ನಿವೇಶನದಲ್ಲಿ ಆಸ್ಪತ್ರೆ ನಿರ್ಮಿಸಬಾರದು ಎಂದು ಸಮಾನ ಮನಸ್ಕರ ಸ್ಪಂದನಾ ವೇದಿಕೆ ಸೇರಿದಂತೆ ಇತರ ಸಂಘಸಂಸ್ಥೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಒಟ್ಟು 4.28 ಎಕರೆ ನಿವೇಶನದಲ್ಲಿ 4 ಅಂತಸ್ತಿನ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಕಟ್ಟಡ ಕಾಮಗಾರಿಗೆ 22.24 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು.

ಆದರೆ ದಿಢೀರನೇ ತನ್ನ ನಿರ್ಣಯವನ್ನು ಬದಲಿಸಿ ಸರ್ಕಾರವು 3 ಅಂತಸ್ತಿನ 165 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಹೇಳಿದಾಗ, ಶಾಸಕ ಕೆ.ಪಿ.ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ತನ್ನ ನಿರ್ಣಯವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಆಗ್ರಹಿಸಿದ್ದರು.

`ಗುದ್ದಲಿಪೂಜೆಯು ಕೇಂದ್ರ ಮತ್ತು ರಾಜ್ಯ ಸಚಿವರು ನೆರವೇರಿಸಲಿದ್ದು, ನಿಗದಿತ ದಿನಾಂಕ ಅಶುಭವಾಗಿದ್ದರೆ ತೊಂದರೆಯಾಗುತ್ತದೆ. ಅದಕ್ಕೆ ಗುದ್ದಲಿಪೂಜೆ ನೆರವೇರಿಸಿದೆವು~ ಎಂದು ಸಂಬಂಧಪಟ್ಟವರು ಬೇರೆಯದೇ ಕಾರಣಗಳನ್ನು ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.