ADVERTISEMENT

ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 7:15 IST
Last Updated 14 ಜನವರಿ 2011, 7:15 IST

ಚಿಂತಾಮಣಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಬರುತ್ತಿದ್ದು ಈ ಬಗ್ಗೆ ಅಗತ್ಯ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರಪ್ಪ ಎಚ್ಚರಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದರು.

ಯೋಜನೆಯಲ್ಲಿ ಕೆಲವು ಕಡೆ ಕೂಲಿಗಿಂತ ಸಾಮಗ್ರಿಗಳ ಖರೀದಿಗೆ ಹೆಚ್ಚಿನ ಹಣ ಖರ್ಚು ಮಾಡಿರುವ ಪ್ರಕರಣಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಲವು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಸೂಕ್ತ ಮಾಹಿತಿ ಇಲ್ಲದೆ ಪ್ರಶ್ನೆಗಳಿಗೆ ತಡವರಿಸುತ್ತಿದ್ದಾಗ ತೀವ್ರ ಕೋಪೋದ್ರಿಕ್ತರಾದ ಕಾರ್ಯದರ್ಶಿಗಳು ಕಾಟಾಚಾರಕ್ಕೆ ಸಭೆಗೆ ಬಂದು ಹೋಗುವುದಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸ್ವಲ್ಪವಾದರೂ ಬದ್ಧತೆಯಿಂದ ಕೆಲಸ ಮಾಡಿ ಎಂದರು. 

ತಾ.ಪಂ. ಇ.ಒ ಎಚ್.ಎಸ್.ರಂಗನಾಥಸ್ವಾಮಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.ತಾಲ್ಲೂಕಿನ ನೋಡಲ್ ಅಧಿಕಾರಿ ವಾಲ್ಕೆ, ಜಿಲ್ಲಾ ಯೋಜನಾ ನಿರ್ದೇಶಕ ಅಣ್ಣಯ್ಯಪ್ಪ, ಜಿ.ಪಂ.ಉಪಕಾರ್ಯದರ್ಶಿ ರಾಮಕೃಷ್ಣಾರೆಡ್ಡಿ, ಜಿ.ಪಂ. ಎ.ಇ.ಇ ಸೋಮಣ್ಣ ಭಾಗವಹಿಸಿದ್ದರು.

ಸಾಮಾನ್ಯ ಸಭೆ
ನಗರಸಭೆ ಸಾಮಾನ್ಯ ಕೌನ್ಸಿಲ್ ಸಭೆಯು ಜ.18 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರಸಭೆಯ ಅಧ್ಯಕ್ಷೆ ಎನ್.ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.