ADVERTISEMENT

ಎತ್ತಿನಹೊಳೆ ಯೋಜನೆ ಬಗ್ಗೆ ದಿನಕ್ಕೊಂದು ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:42 IST
Last Updated 9 ಜನವರಿ 2014, 6:42 IST

ಚಿಕ್ಕಬಳ್ಳಾಪುರ: ಈ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುವ ಮುನ್ನ ಮತ್ತು ನಂತರದ ದಿನಗಳಲ್ಲಿ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ­ಯವರು ಇಲ್ಲಸಲ್ಲದ ಆಶ್ವಾಸನೆಗಳನ್ನು ನೀಡುವ ಬದಲು ಬರಪೀಡಿತ ಬಯಲು­ಸೀಮೆ ಜನರ ಜೀವನ್ಮರಣದ ಪ್ರಶ್ನೆ­ಯಾದ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.­ಕುಮಾರಸ್ವಾಮಿ ಆಗ್ರಹಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತರೂ ಅಥವಾ ಗೆದ್ದರೂ ಖಂಡಿತವಾಗಿಯೂ ಜಿಲ್ಲೆಗೆ ನೀರಾವರಿ ಯೋಜನೆ ತರುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಒಂದೇ ಒಂದು ಹನಿ ನೀರನ್ನು ಅವರು ಚಿಕ್ಕ­ಬಳ್ಳಾಪುರಕ್ಕೆ ಹರಿಸಿಲ್ಲ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮಂಗಳೂರಿನಲ್ಲಿ ಸೋತು ಇಲ್ಲಿ ಗೆಲ್ಲುವ ಆಶಾಭಾವನೆಯಿಂದ  ವೀರಪ್ಪ ಮೊಯಿಲಿಯವರು ಬಂದರು. ಚುನಾವಣೆಗೆ ಸಮೀಪಿಸುತ್ತಿ­ದ್ದಂತೆಯೇ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನ­ಹಳ್ಳಿ, ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ ಎಲ್ಲವೂ ನೆನಪಿಗೆ ಬರತೊಡಗಿದೆ. ಐದು ವರ್ಷ­ದಿಂದ ಅವರು ಏನು ಮಾಡುತ್ತಿದ್ದರು? ಕ್ಷೇತ್ರ, ದೇವಾಲಯದ ಬಗ್ಗೆ ಇಷ್ಟೆಲ್ಲ ಅಭಿಮಾನ ವ್ಯಕ್ತಪಡಿಸುತ್ತಿರುವ ಅವರು ಯಾಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳ­ಲಿಲ್ಲ? ನೀರು ಹರಿಸಲು ಯಾಕೆ ತುರ್ತು ಕ್ರಮ ಜರುಗಿಸಲಿಲ್ಲ ಎಂದರು.

2011ರ ಜನವರಿ 31ರಂದು ಮೊದಲ ಬಾರಿಗೆ ಹಿಂದಿನ ಬಿಜೆಪಿ ಸರ್ಕಾರದ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಎತ್ತಿನಹೊಳೆ ನೀರಿನ ಯೋಜನೆಯನ್ನು ಪ್ರಸ್ತಾಪಿಸಿ 9 ಟಿಎಂಸಿ ನೀರು ಲಭ್ಯವಿದೆ ಎಂದು ಹೇಳಿದ್ದರು. ಆದರೆ ಅವರೇ ಮತ್ತೊಂದು ಕಾರ್ಯಕ್ರಮದಲ್ಲಿ 2012ರ ಜುಲೈ ತಿಂಗಳಲ್ಲಿ ಎತ್ತಿನಹೊಳೆ ಯೋಜನೆ­ಯಿಂದ 24 ಟಿಎಂಸಿ ನೀರು ಲಭ್ಯ ಎಂಬ ಮಾತನ್ನು ಹೇಳಿದ್ದರು. ವೀರಪ್ಪ ಮೊಯಿಲಿಯವರು ಕೂಡ ಒಮ್ಮೆ 9 ಟಿಎಂಸಿ, ಮಗದೊಮ್ಮೆ 24 ಟಿಎಂಸಿ ನೀರು ಎಂದು ಹೇಳುತ್ತ ಐದು ವರ್ಷ ಪೂರೈಸಿದರೆ ಹೊರತು ಪ್ರಾಮಾಣಿಕ­ವಾದ ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯ ಪ್ರಗತಿಗೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸಿದಾಗ, ವಿಸ್ತೃತಾ ಯೋಜನಾ ವರದಿಗೆ (ಡಿಪಿಆರ್‌) 8.10 ಕೋಟಿ ರೂಪಾಯಿ ಮೀಸಲಿಟ್ಟಿರುವ ವಿಷಯ ತಿಳಿದು ಬಂತು. ವರದಿಯು ಇನ್ನೂ ತಯಾರಿಕಾ ಹಂತದಲ್ಲಿದ್ದು, ಇದಕ್ಕಾಗಿ 88 ಲಕ್ಷ ರೂಪಾಯಿ ನೀಡಲಾಗಿದೆ ಎಂಬ ಮಾಹಿತಿ ಗೊತ್ತಾಯಿತು.

ಪರಮಶಿವಯ್ಯ ಅವರ ನೀರಾವರಿ ವರದಿಗೂ ಎತ್ತಿನಹೊಳೆ ಯೋಜನೆಗೂ ಸಂಬಂಧವಿಲ್ಲ ಎಂಬ ವಿಷಯವೂ ಇದರಿಂದ ಬೆಳಕಿಗೆ ಬಂತು. ಎತ್ತಿನಹೊಳೆ ಯೋಜನೆ ಬಗ್ಗೆ ಇಷ್ಟೆಲ್ಲ ಅವ್ಯವಸ್ಥೆ ಇರುವಾಗ ಯೋಜನೆಗೆ ಶಂಕುಸ್ಥಾಪನೆ ಹೇಗೆ ಮಾಡಲು ಸಾಧ್ಯ ಎಂದರು.

ಮಾಜಿ ಶಾಸಕರಾದ ಕೆ.ಪಿ.ಬಚ್ಚೇ­ಗೌಡ, ಶ್ರೀನಿವಾಸಗೌಡ, ವೆಂಕಟ­ಶಿವಾರೆಡ್ಡಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌ ಪತ್ರಿಕಾ­ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.