ADVERTISEMENT

ಕನಿಷ್ಠ ಕೂಲಿ ನೀಡಲು ಸಿಐಟಿಯು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 9:15 IST
Last Updated 10 ಜುಲೈ 2012, 9:15 IST

ಚಿಕ್ಕಬಳ್ಳಾಪುರ: ಅತ್ಯಂತ ಅಭದ್ರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ಕೂಲಿಯಾದರೂ ಸರ್ಕಾರಿ ನೀಡಲಿ ಎಂದು ಸಿಐಟಿಯು ಸಂಘಟನೆ ಮುಖಂಡರು ಸೋಮವಾರ ಆಗ್ರಹಿಸಿದರು.

ನಗರದಲ್ಲಿ ನಡೆದ ಕಾರ್ಮಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ, `ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

 ಕಾರ್ಮಿಕರ ಉದ್ಯೋಗ ಕಾಯಂಗೊಳಿಸಬೇಕು, ಕನಿಷ್ಠ ಕೂಲಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಲಿದ್ದಾರೆ.

`ಹತ್ತು ಸಾವಿರ ರೂಪಾಯಿ ಕನಿಷ್ಠ ವೇತನ ನೀಡಬೇಕು, ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಕೊಡಬೇಕು, ಕಾರ್ಮಿಕ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು, ಗುತ್ತಿಗೆಯಾಧಾರಿತ ಉದ್ಯೋಗ ಪದ್ಧತಿ ನಿಷೇಧಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದುನ್ನು ಜಾರಿಗೊಳಿಸಬೇಕು~ ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಸಿದ್ದಗಂಗಪ್ಪ ಮಾತನಾಡಿ, `ಬೇಡಿಕೆ ಈಡೇರಿಸುವತ್ತ ಸರ್ಕಾರ ನಿರ್ಲಕ್ಷ್ಯ ತೋರುವುದನ್ನು ಮುಂದುವರಿಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಸ್ವರೂಪದ ಹೋರಾಟ ನಡೆಸುತ್ತೇವೆ. ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ~ ಎಂದರು.

ನಗರದ ಪ್ರವಾಸಿ ಮಂದಿರದಿಂದ ಬೆಳಿಗ್ಗೆ 11.30ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಶಿಡ್ಲಘಟ್ಟ ವೃತ್ತದ ಮೂಲಕ ಹಾದು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವ ಕಾರ್ಮಿಕರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.