ADVERTISEMENT

‘ಕಮಲ’ ಪಡೆಯಲ್ಲಿ ನಿಲ್ಲದ ಬೇಗುದಿ

ಜೈಪಾಲ್ ರೆಡ್ಡಿ ಅಭ್ಯರ್ಥಿ ಸಂದೇಶ; ಮುಖಂಡರ ಅಪಸ್ವರ, ಹೆಚ್ಚಿದ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 12:46 IST
Last Updated 30 ಮಾರ್ಚ್ 2018, 12:46 IST

ಗೌರಿಬಿದನೂರು: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿಯೂ ಗೌರಿಬಿದನೂರು ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿರುವ ಆಂತರಿಕ ಕಲಹ ಇನ್ನೂ ಶಮನವಾಗಿಲ್ಲ. ಸ್ಥಳೀಯ ಮುಖಂಡರು ಸಮಾಧಾನಪಡಿಸಲು ವರಿಷ್ಠರು ನಡೆದ ಸಂಧಾನ ಸಭೆಗಳೂ ಫಲಪ್ರದವಾಗಿಲ್ಲ ಎನ್ನುವ ವಾತಾವರಣ ಮನೆ ಮಾಡಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಣತಿಯಂತೆ ಮುಖಂಡೆ ಎನ್.ಜ್ಯೋತಿ ರೆಡ್ಡಿ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೆ.ಜೈಪಾಲ್ ರೆಡ್ಡಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂಬ ಸಂದೇಶ ಬಹಿರಂಗವಾಗಿ ರವಾನಿಸಿದ್ದರು. ಅದರ ಬೆನ್ನಲ್ಲೇ ಮತ್ತೆ ಟಿಕೆಟ್ ಆಕಾಂಕ್ಷಿಗಳಿಂದ ಅಪಸ್ವರ ಕೇಳಿಬಂದಿದೆ. ಜ್ಯೋತಿ ರೆಡ್ಡಿ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ಮುಖಂಡ ಎನ್.ಎಂ. ರವಿನಾರಾಯಣರೆಡ್ಡಿ, ‘ತಾಲ್ಲೂಕಿ ನಲ್ಲಿ ಬಿಜೆಪಿ ಅಭ್ಯರ್ಥಿಯ ವರಿಷ್ಠರು ಯಾವುದೇ ತೀರ್ಮಾನ ತೆಗೆದು ಕೊಂಡಿಲ್ಲ. ಈವರೆಗೆ ಘೋಷಣೆ ಮಾಡಿರುವ ಅಭ್ಯರ್ಥಿಯ ಹೆಸರು ಕೇವಲ ತಾತ್ಕಾಲಿಕ’ ಎಂದು ಹೇಳಿದ್ದು ಭಿನ್ನಮತ ಇನ್ನು ಶಮನಗೊಂಡಿಲ್ಲ ಎನ್ನುವ ಸುಳಿವು ನೀಡಿತು.

ಬಿಜೆಪಿ ಟಿಕೆಟ್‌ಗಾಗಿ ಮುಖಂಡರಾದ ಜೈಪಾಲ್ ರೆಡ್ಡಿ, ರವಿನಾರಾಯಣರೆಡ್ಡಿ, ಸಿ.ಆರ್.ನರಸಿಂಹಮೂರ್ತಿ ಮತ್ತು ಎಚ್‌.ವಿ.ಶಿವಶಂಕರ್ ಅವರು ನಡುವೆ ಪೈಪೋಟಿ ನಡೆದಿತ್ತು. ಈ ಪೈಕಿ ಟಿಕೆಟ್ ಕೈತಪ್ಪುವ ಸುಳಿವು ದೊರೆಯುತ್ತಿದ್ದಂತೆ ನರಸಿಂಹಮೂರ್ತಿ ಅವರು ಇತ್ತೀಚೆಗೆ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು. ಹೀಗಾಗಿ ಇದೀಗ ಟಿಕೆಟ್‌ಗೆ ತ್ರೀಕೋನ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ADVERTISEMENT

ಟಿಕೆಟ್ ಮೇಲೆ ಕಣ್ಣಿಟ್ಟಿರುವ ಎಲ್ಲ ಮುಖಂಡರು ಇದೀಗ ಪ್ರತ್ಯೇಕವಾಗಿ ತಮ್ಮ ಬೆಂಬಲಿಗರೊಂದಿಗೆ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಶುರುವಿಟ್ಟು ಕೊಂಡಿದ್ದಾರೆ. ಮೇಲ್ನೋಟಕ್ಕೆ ಭಿನ್ನಮತ, ಅಸಮಾಧಾ ನವಿಲ್ಲ ಎಂದು ಈ ಮುಖಂಡರು ತೋರಿಸಿಕೊಳ್ಳಲು ಪ್ರಯತ್ನಪಟ್ಟರೂ ಬೂದಿ ಮುಚ್ಚಿದ ಕೆಂಡದಂತಿರುವ ಒಳ ಬೇಗುದಿಗೆ ಆಗಾಗ ಬಹಿರಂಗಕ್ಕೆ ಬರುತ್ತಿದೆ.

ಪರಿಶಿಷ್ಟ ವರ್ಗಗಳ ಮುಖಂಡರಾದ ಎಚ್.ವಿ.ಶಿವಶಂಕರ್ ಅವರು ಈ ಬಾರಿ ಬಿಜೆಪಿ ಟಿಕೆಟ್ ಪಡೆಯಲೇಬೇಕು ಎಂದು ಟೊಂಕಕಟ್ಟಿ ನಿಂತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಅವರು ತಮ್ಮ ಜನಾಂಗದ ಪ್ರಭಾವಿ ಸ್ವಾಮೀಜಿಯೊಬ್ಬರ ಮೂಲಕ ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಟಿಕೆಟ್‌ಗಾಗಿ ಪ್ರಬಲ ‘ಲಾಬಿ’ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿಯೇ ಶಿವಶಂಕರ್ ಅವರು, ‘ತಾಲ್ಲೂಕಿನಲ್ಲಿ ಈವರೆಗೆ ಬಿಜೆಪಿ ಟಿಕೆಟ್ ಯಾರಿಗೆ ನೀಡಬೇಕು ಎಂದು ಅಮಿತ್ ಶಾ ಅವರ ತಂಡ ನಿರ್ಧರಿಸಿಯೇ ಇಲ್ಲ. ಕೆಲ ಮುಖಂಡರು ವಿವಿಧ ಆಮಿಷಗಳಿಗೆ ಒಳಗಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಅಲ್ಲಿಯವರೆಗೆ ಕಾಯ್ದು ನೋಡೋಣ’ ಎಂದು ತಿಳಿಸಿದರು.

ಇಂದು ಚೋಳಶೆಟ್ಟಿಹಳ್ಳಿಯಲ್ಲಿ ಪ್ರಚಾರ

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಮಲ ಪಾಳೆಯದ ನಾಯಕರು ಶುಕ್ರವಾರ ತಾಲ್ಲೂಕಿನ ಚೋಳಶೆಟ್ಟಿಹಳ್ಳಿಯಲ್ಲಿ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಅಬ್ಬರದ ಪ್ರಚಾರಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಆ ಸಭೆಯಲ್ಲಿ ಮಂಡಲ ಅಧ್ಯಕ್ಷ ಆರ್.ಪಿ.ಗೋಪಾಲಗೌಡ, ಮುಖಂಡರಾದ ಎನ್.ಎಂ. ರವಿನಾರಾಯಣರೆಡ್ಡಿ, ಎನ್. ಜ್ಯೋತಿರೆಡ್ಡಿ, ಎಚ್.ವಿ.ಶಿವಶಂಕರ್, ಎಂ. ವರಪ್ರಸಾದ್ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

**

ಕೆಲವರು ಪಕ್ಷದ ತತ್ವ, ಸಿದ್ಧಾಂತ ಅರಿಯದೇ ಏಕಾಏಕಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಗೊಂದಲ ಉಂಟು ಮಾಡಿದ್ದಾರೆ – ಎಚ್.ವಿ.ಶಿವಶಂಕರ್, ಬಿಜೆಪಿ ಟಿಕೆಟ್ ಆಕಾಂಕ್ಷಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.