ADVERTISEMENT

ಕಾರ್ಖಾನೆ ಬೇಡ, ಆರೋಗ್ಯ ಬೇಕು

ರಾಹುಲ ಬೆಳಗಲಿ
Published 15 ಸೆಪ್ಟೆಂಬರ್ 2011, 9:25 IST
Last Updated 15 ಸೆಪ್ಟೆಂಬರ್ 2011, 9:25 IST
ಕಾರ್ಖಾನೆ ಬೇಡ, ಆರೋಗ್ಯ ಬೇಕು
ಕಾರ್ಖಾನೆ ಬೇಡ, ಆರೋಗ್ಯ ಬೇಕು   

ತೊಂಡೇಬಾವಿ (ಗೌರಿಬಿದನೂರು ತಾಲ್ಲೂಕು): `ಸಿಮೆಂಟ್ ದೂಳಿನಿಂದ ಅಸ್ವಸ್ಥಗೊಂಡಿರುವ ನನ್ನ ಮಗಳು ಭಾರ್ಗವಿ ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಮಗನೂ ಆಗಾಗ ಜ್ವರದಿಂದ ಬಳಲುತ್ತಾನೆ. ಮನೆಯಲ್ಲಿ ಎಲ್ಲೇ ಕೂತರು ಸಿಮೆಂಟ್ ಮೆತ್ತಿಕೊಳ್ಳುತ್ತದೆ. ಎಷ್ಟೆಲ್ಲ ತೊಳೆದರೂ ತರಕಾರಿ, ಸೊಪ್ಪುಗಳ ಮೇಲಿನ ಸಿಮೆಂಟ್ ದೂಳು ಹೋಗಲ್ಲ. ಮನೆ ಹೊರಗಡೆ ಕೂರುವಂತಿಲ್ಲ. ಬೇರೆಡೆ ತಿರುಗಾಡುವಂತಿಲ್ಲ. ಎಲ್ಲೆ ಹೋದರೂ ಮೈಪೂರ್ತಿ ಸಿಮೆಂಟ್ ಆವರಿಸಿಕೊಳ್ಳುತ್ತದೆ~.

-ತೊಂಡೇಬಾವಿ ನಿವಾಸಿ ಸರಸ್ವತಿ ಹೀಗೆ ಒಂದೆಡೆ ಸಂಕಷ್ಟ ತೋಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರು ತಮ್ಮ ಕುಟುಂಬ ಸದಸ್ಯರು ಅನಾರೋಗ್ಯಕ್ಕೀಡಾಗಿದ್ದನ್ನು ಹೇಳಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

`ಕಾರ್ಖಾನೆಗಳನ್ನು ಜನವಸತಿ ಪ್ರದೇಶದಿಂದ 10ರಿಂದ 15 ಕಿ.ಮೀ. ದೂರದಲ್ಲಿ ಸ್ಥಾಪಿಸಬೇಕು ಎಂಬ ನಿಯಮವಿದೆ. ಆದರೆ ಎಸಿಸಿ ಸಿಮೆಂಟ್ ತೊಂಡೇಬಾವಿ ರೈಲು ನಿಲ್ದಾಣದ ಪಕ್ಕದಲ್ಲೇ ಮತ್ತು ಜನವಸತಿ ಪ್ರದೇಶದಲ್ಲೇ ಸ್ಥಾಪಿಸಿದೆ. ಅಂಗಡಿಗಳ ಬಾಗಿಲುಗಳನ್ನು ತೆರೆದರೆ ಸಾಕು, ದೂಳೆಲ್ಲವೂ ಒಳಗೆ ಬರುತ್ತದೆ. ಅಂಗಡಿಯಲ್ಲಿನ ವಸ್ತುಗಳನ್ನು ಪದೇ ಪದೇ ಶುಚಿಗೊಳಿಸಬೇಕು.
 
ಸಿಮೆಂಟ್ ದೂಳಿನಿಂದ ಕಂಪ್ಯೂಟರ್ ಪದೇ ಪದೇ ಹಾಳಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡುವುದಾದರೂ ಹೇಗೆ? ಅಂಗಡಿ ಬಾಗಿಲು ತೆರೆಯುವುದಾದರೂ ಹೇಗೆ~ ಎಂದು ನೆಮ್ಮದಿ ಕೇಂದ್ರದ ಸುನಿತಾ ಸಂಕಷ್ಟ ತೋಡಿಕೊಂಡರು.

`ಕಾರ್ಖಾನೆ ಬೇಡ~: ತೊಂಡೇಬಾವಿ ರೈಲು ನಿಲ್ದಾಣದ ಸುತ್ತಮುತ್ತಲ ಬಡಾವಣೆಗಳಿಗೆ ಮಂಗಳವಾರ `ಪ್ರಜಾವಾಣಿ~ ಭೇಟಿ ನೀಡಿದಾಗ, ಅಲ್ಲಿನ ನಿವಾಸಿಗಳಲ್ಲಿ ಒಂದೇ ಭಾವ ವ್ಯಕ್ತವಾಯಿತು. `ನಮಗೆ ಕಾರ್ಖಾನೆ ಬೇಡ, ಆರೋಗ್ಯ ಬೇಕು. ಸಿಮೆಂಟ್ ಕಾರ್ಖಾನೆ ಇರಬೇಕು ಇಲ್ಲವೇ ನಾವು ಇರಬೇಕು. ಇದು ಬೇಗ ನಿಶ್ಚಯವಾಗದಿದ್ದರೆ, ದೂಳಿನಿಂದಲೇ ಸತ್ತು ಹೋಗುತ್ತೇವೆ~ ಎಂದು ಹೇಳುತ್ತಿದ್ದ ಅವರು ಹಸಿರು ಗಿಡಮರಗಳು ಬೆಳ್ಳಗಾಗಿರುವುದು, ಮನೆಯ ಕೆಂಪು ಹೆಂಚುಗಳ ಮೇಲೆ ಸಿಮೆಂಟು ಶೇಖರಣೆಯಾಗಿರುವುದು, ಸಿಮೆಂಟು ದೂಳು ಸಹಿಸಲಾಗದೆ ರೈಲು ನಿಲ್ದಾಣದ ಕ್ಯಾಂಟೀನ್ ಮುಚ್ಚಿರುವುದನ್ನು ತೋರಿಸಿದರು.

`ಕೆಲ ಮಕ್ಕಳಿಗೆ ಕಿವಿ ಕೇಳಿಸುತ್ತಿಲ್ಲ, ಇನ್ನೂ ಕೆಲವರಿಗೆ ಅಸ್ತಮಾ, ಎದೆನೋವು ಕಾಣಿಸಿಕೊಂಡಿದೆ. ಅವರನ್ನು ತಪಾಸಣೆಗೆ ಒಳಪಡಿಸಿದರೆ, ವೈದ್ಯರು `ಡಸ್ಟ್ ಅಲರ್ಜಿ~ಯೇ  ಕಾರಣ ಎನ್ನುತ್ತಾರೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಮಾಡುತ್ತಿರುವ ನಾವು ಆಸ್ಪತ್ರೆಗೆ ಪ್ರತಿ ತಿಂಗಳು ಹಣ ಖರ್ಚು ಮಾಡಬೇಕು. ದುಡಿದಿದ್ದನ್ನು ಆಸ್ಪತ್ರೆಗೆ ಖರ್ಚು ಮಾಡಿದರೆ, ಜೀವನ ಮಾಡುವುದಾದರೂ ಹೇಗೆ~ ಎಂದು ನಿವಾಸಿಗಳು ತಮ್ಮ ಸ್ಥಿತಿಯನ್ನು ಹೇಳಿಕೊಂಡರು.

ಕೆಲಸವಿಲ್ಲ, ಆರೋಗ್ಯವಿಲ್ಲ: `ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ಶೇ 75ರಷ್ಟು ಪೂರ್ಣಗೊಳ್ಳುವವರೆಗೆ ಇಲ್ಲಿ ಸಿಮೆಂಟ್ ಕಾರ್ಖಾನೆಯಾಗಲಿದೆ ಎಂಬುದು ನಾವ್ಯಾರೂ ಕಲ್ಪನೆ ಕೂಡ ಮಾಡಿರಲಿಲ್ಲ. ಗಾರ್ಮೆಂಟ್ಸ್ ಕಾರ್ಖಾನೆ ಅಥವಾ ಬೇರೆ ಕಾರ್ಖಾನೆಯಾದರೆ, ನಮ್ಮಲ್ಲಿ ಕೆಲವರಿಗೆ ಕೆಲಸ ಸಿಗುತ್ತೆಂದು ಭಾವಿಸಿದ್ದೆವು. ಆದರೆ ಇಲ್ಲೂ ಯಾರಿಗೂ ಕೆಲಸ ಸಿಗಲಿಲ್ಲ. ಕೆಲವರಿಗೆ ಕಸಗುಡಿಸುವ, ಶುಚಿಗೊಳಿಸುವ ಕೆಲಸ ಕೊಟ್ಟರಾದರೂ ಅವರು ಅಸ್ವಸ್ಥಗೊಂಡು ನಾಲ್ಕೇ ತಿಂಗಳಲ್ಲಿ ಕೆಲಸ ಬಿಟ್ಟರು.

ಎರಡು ವರ್ಷಗಳ ಹಿಂದೆ ಕಾರ್ಖಾನೆಗೆ ಚಾಲನೆ ನೀಡಿದ್ದ ಕೇಂದ್ರ ಸಚಿವರಿಗೆ ಈಗ ಮನವಿಪತ್ರ ಸಲ್ಲಿಸಿದರೆ, ಅವರು ಸ್ವೀಕರಿಸಿ ಸುಮ್ಮನಾಗುತ್ತಾರೆ ಹೊರತು ಮತ್ತೇನನ್ನೂ ಮಾಡುವುದಿಲ್ಲ~ ಎಂದು ನಿವಾಸಿ ಸಾದಿಕ್ ತಿಳಿಸಿದರು.

`ಸಿಮೆಂಟು ಕಾರ್ಖಾನೆಯ ದೂಳು ಸುತ್ತಮುತ್ತಲಿನ 8 ಕಿ.ಮೀ.ಗೆ ವ್ಯಾಪಿಸಿದೆ. ಕಲ್ಲಾಕನಹಳ್ಳಿ, ಬಸವಾಪುರ, ಇಂದಿರಾನಗರ, ಮುತ್ತುಗದಹಳ್ಳಿ, ಕಮಲಾಪುರ, ಹುಸೇನಪುರ, ಪೋತೇನಹಳ್ಳಿ ಮುಂತಾದ ಹಳ್ಳಿಗಳ ರೈತರ ಫಲವತ್ತಾದ ಜಮೀನುಗಳು ಬಂಜರು ಭೂಮಿಯಾಗಿ ಮಾರ್ಪಟ್ಟಿವೆ.

 ಏನನ್ನೂ ಬಿತ್ತನೆ ಮಾಡಲು ಆಗುತ್ತಿಲ್ಲ. ಬೆಳೆಗಳ ಮೇಲೆಲ್ಲ ಸಿಮೆಂಟು ದೂಳು ಆವರಿಸಿಕೊಂಡಿದೆ~ ಎಂದು ಲಲಿತಮ್ಮ ಸಂಕಷ್ಟ ತೋಡಿಕೊಂಡರು.

ಶಾಲೆಯಲ್ಲಿ ಹಾಜರಾತಿ ಕೊರತೆ:
`ಕಾರ್ಖಾನೆ ಪಕ್ಕದಲ್ಲಿಯೇ ಸ್ವಾಮಿ ಶಿವಾನಂದ ಸೇವಾಶ್ರಮ ಪ್ರೌಢಶಾಲೆಯಿದ್ದು, ಮಕ್ಕಳ ಹಾಜರಾತಿ ಕೊರತೆ ಕಾಡುತ್ತಿದೆ. ಸಿಮೆಂಟ್ ದೂಳಿನಿಂದ ಅಸ್ವಸ್ಥಗೊಳ್ಳುವ ಮಕ್ಕಳು ಸರಿಯಾಗಿ ಶಾಲೆಗೆ ಬರುವುದಿಲ್ಲ. ಜನವಸತಿ ಪ್ರದೇಶದಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಶಾಲೆ, ಸರ್ಕಾರಿ ಕಚೇರಿಗಳು ಮುಂತಾದವುಗಳಿದ್ದು, ಇವುಗಳ ಬಳಿಯೇ ಕಾರ್ಖಾನೆ ಸ್ಥಾಪಿಸಲು ನೀಡಿದ್ದಾದರೂ ಹೇಗೆ~ ಎಂದು ನಿವಾಸಿ ಶ್ರೀನಿವಾಸಮೂರ್ತಿ ಪ್ರಶ್ನಿಸುತ್ತಾರೆ.

`ಕಾರ್ಖಾನೆ ವಿರುದ್ಧ ಧ್ವನಿಯೆತ್ತಿದ್ದವರಿಗೆಲ್ಲ ಭಾರಿ ಹಣವನ್ನು ನೀಡಿ ಕಾರ್ಖಾನೆ ಆಡಳಿತ ಮಂಡಳಿಯವರು ಬಾಯಿ ಮುಚ್ಚಿಸಿದ್ದಾರೆ. ಶಾಸಕರಿಗೆ, ಜಿಲ್ಲಾಧಿಕಾರಿಗೆ, ಲೋಕಾಯುಕ್ತರಿಗೆ ಮತ್ತು ರಾಜ್ಯಪಾಲರಿಗೆ ಪದೇ ಪದೇ ಮನವಿ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ.

ಸಿಮೆಂಟ್ ದೂಳಿನಿಂದ ಇಲ್ಲಿನ ನಿವಾಸಿಗಳು ವಿವಿಧ ಕಾಯಿಲೆಗಳಿಂದ ಉಸಿರುಗಟ್ಟಿ ಸಾಯುವಂತಹ ಸ್ಥಿತಿಗೆ ಬಂದರೂ ಸರ್ಕಾರ ಮಾತ್ರ ಯಾವುದೇ ಕಾಳಜಿ ತೋರುತ್ತಿಲ್ಲ~ ಎಂದು ಸಿಐಟಿಯು ಸಂಘಟನೆ ಮುಖಂಡ ಸಿದ್ದಗಂಗಪ್ಪ ಅಸಮಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.