ADVERTISEMENT

ಕುಡಿಯುವ ನೀರಿಗೆ ನಿತ್ಯ ಹಾಹಾಕಾರ

ನೀರು ಶುದ್ಧೀಕರಣ ಘಟಕದಲ್ಲಿ ಕೆಟ್ಟು ನಿಂತ ಮೋಟರ್‌, ಪುರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಮೇ 2018, 7:14 IST
Last Updated 25 ಮೇ 2018, 7:14 IST
ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಶುದ್ಧೀಕರಣ ಘಟಕದಲ್ಲಿ ಕೆಟ್ಟು ಸ್ಥಗಿತವಾಗಿರುವ ಮೋಟರ್‌
ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಶುದ್ಧೀಕರಣ ಘಟಕದಲ್ಲಿ ಕೆಟ್ಟು ಸ್ಥಗಿತವಾಗಿರುವ ಮೋಟರ್‌   

ಬಾಗೇಪಲ್ಲಿ: ಪಟ್ಟಣದ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಐದು ಮೋಟರ್‌ಗಳು ಕೆಟ್ಟು ದುರಸ್ತಿಯಾಗದೆ ಹಾಗೇ ಬಿದ್ದಿದ್ದು, ಪರಿಣಾಮ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಸಾರ್ವಜನಿಕರು ನಿತ್ಯ ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಇರುವ 40 ದಶಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಶುದ್ಧೀಕರಣದ ಘಟಕದಲ್ಲಿ ಅಳವಡಿಸಿದ ಮೋಟರ್‌ಗಳು ಕೆಟ್ಟಿವೆ. ದುರಸ್ತಿಗೆ ಕಳುಹಿಸಿ 15 ದಿನಗಳಾಗಿದೆ. ಇದುವರೆಗೆ ದುರಸ್ತಿಯಾಗಿಲ್ಲ. ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದರೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಗಿಲ್ಲ. ಪರಗೋಡು ಚಿತ್ರಾವತಿ ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಈ ಶುದ್ಧೀಕರಣ ಘಟಕಕ್ಕೆ ಹರಿಸಿ ಸಂಸ್ಕರಿಸಿ ಮನೆಗಳಿಗೆ ಸರಬರಾಜು ಮಾಡಬೇಕು. ಆದರೆ ಮೋಟರ್‌ ದುರಸ್ತಿಗೆ ಬಂದಿರುವುದರಿಂದ ಕಲುಷಿತ ನೀರನ್ನು ನೇರವಾಗಿ ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ ಎಂದು ವಿವಿಧ ವಾರ್ಡ್‌ನ ಹನುಮಂತರಾಯಪ್ಪ ಆರೋಪಿಸುವರು.

ADVERTISEMENT

ಪಟ್ಟಣದ ಯಾವುದೇ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಹೀಗಾಗಿ ನೀರಿಗಾಗಿ ಮಹಿಳೆಯರು, ಮಕ್ಕಳು ಕೊಳಾಯಿಗಳ ಮುಂದೆ ಬಿಂದಿಗೆ ಹಿಡಿದು ಚಾತಕ ಪಕ್ಷಿಗಳಂತೆ ಕಾಯಬೇಕಾಗಿದೆ ಎಂಬುದು ಸಾರ್ವಜನಿಕರ ಆರೋಪ.

30 ವರ್ಷಗಳ ಹಿಂದೆ ಅಳವಡಿಸಿ ರುವ ನೀರು ಪೂರೈಕೆ ಪೈಪ್‌ಲೈನ್‌ ಮಾರ್ಗ ಸಹ ವಿವಿಧೆಡೆ ಒಡೆದು, ಕುಡಿ ಯುವ ನೀರು ಚರಂಡಿ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಟ್ಟಣದ ಕೆಲ ವಾರ್ಡ್‌ಗಳಲ್ಲಿ 15–20 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಜನರಿಗೆ ಕುಡಿಯಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಸೇರಿದಂತೆ ಗೃಹಪಯೋಗಿ ಕೆಲಸಗಳಿಗೆ ನೀರು ಸಿಗದೇ ಪರಿತಪಿಸುವಂತಾಗಿದೆ. ಕೆಲ ವಾರ್ಡ್‌ಗಳಲ್ಲಿ ಜನರು ದುಡ್ಡು ಕೊಟ್ಟು ಕುಡಿಯುವ ನೀರಿನ ಕ್ಯಾನ್ ಮತ್ತು ಮನೆ ಬಳಕೆಗೆ ಟ್ಯಾಂಕರ್ ಖರೀದಿಸುತ್ತಿದ್ದಾರೆ’ ಎಂದು 15ನೇ ವಾರ್ಡ್ ನಿವಾಸಿ ಪ್ರಶಾಂತ್ ಹೇಳಿದರು.

‘ಬಿಲ್‌, ಕಮಿಷನ್‌ಗಳ ನಡುವೆ ಮುಳುಗಿ ಹೋಗಿರುವ ಪುರಸಭೆ ಅಧಿಕಾರಿಗಳಿಗೆ ಜನರು ನೀರಿನ ಬವಣೆ ಕಾಣುತ್ತಿಲ್ಲ. ಕಣ್ಣಿದ್ದೂ ಕುರುಡರಂತೆ ವರ್ತಿಸುವವರ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟವರು ಕೆಟ್ಟಿರುವ ಮೋಟರ್‌ ದುರಸ್ತಿ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆಸಕ್ತಿ ತೋರುತ್ತಿಲ್ಲ’ ಎಂದು ನಗರದ ನಿವಾಸಿ ಹಿರಿಯರಾದ ವೆಂಕಟೇಶ್ ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.