ADVERTISEMENT

ಕೃಷಿ ಇಲಾಖೆಯಿಂದ ಕಳಪೆ ಬೀಜ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 9:25 IST
Last Updated 23 ಜೂನ್ 2012, 9:25 IST

ಬಾಗೇಪಲ್ಲಿ: ಮುಂಗಾರು ಮಳೆ ಸಂಧರ್ಭದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಕಳಪೆ ಮಟ್ಟದ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಆರೋಪಿಸಿ  ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.

ಪಟ್ಟಣದ ಕೃಷಿ ಇಲಾಖೆ ಮುಂಭಾಗ ಜಮೆಯಾದ ಕಾರ್ಯಕರ್ತರು, ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚನ್ನರಾಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಮುಂಗಾರು ಮಳೆ ಇಲ್ಲ. ರೈತರು ಬೆಳೆದ ಬೀಗಜಳಿಂದ ಉತ್ತಮ ಇಳುವರಿ ಬರುವುದಿಲ್ಲ ಎಂದು ಖಾಸಗಿ ಕಂಪೆನಿಗಳ ಬೀಜಗಳನ್ನು ವಿತರಿಸಲಾಗಿದೆ.

ಆದರೆ ಅವು ಬಿತ್ತನೆ ಮಾಡಲು ಯೋಗ್ಯವಾಗಿಲ್ಲ. ರಸಗೊಬ್ಬರಗಳ ಬೆಲೆಗಳು ಏರಿಕೆಯಾಗಿದೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್, ನೀರು ಸಮರ್ಪಕವಾಗಿ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 15 ದಿನಗಳಿಂದ ವಿತರಿಸಿರುವ ನೆಲಗಡಲೆ ಬೀಜ ಚಟ್ನಿಗೂ ಆಗುವುದಿಲ್ಲ. ಖಾಸಗಿ ರಸಗೊಬ್ಬರಗಳ ಅಂಗಡಿಗಳಲ್ಲಿ ಮನಸೋ ಇಚ್ಛೆ ಬೆಲೆಗೆ ಮಾರಾಟ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಕಾರ್ಯದರ್ಶಿ ಮಂಜುನಾಥರೆಡ್ಡಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸುವ ಎಲ್ಲಾ ಸೌಲಭ್ಯವನ್ನು ಸಾರ್ವಜನಿಕ ಸಭೆಗಳಲ್ಲಿ ವಿತರಿಸಬೇಕು. ರಾಸಾಯನಿಕ ಗೊಬ್ಬರಗಳ ಸರ್ಕಾರದ ನಿಗದಿತ ಬೆಲೆ ಪಟ್ಟಿಯನ್ನು ಅಂಗಡಿಗಳ ಮುಂದೆ ಪ್ರದರ್ಶಿಸಬೇಕು. ಖಾಸಗಿ ಕಂಪೆನಿಗಳ ಕಳಪೆ ಮಟ್ಟದ ಬಿತ್ತನೆ ಬೀಜಗಳ ಮಾರಾಟ ತಡೆಯಬೇಕು. ರಾಷ್ಟ್ರೀಯ ಬೆಳೆ ವಿಮಾ ಯೋಜನೆ ಜಾರಿಯಾಗಬೇಕು~ ಎಂದು ಆಗ್ರಹಿಸಿದರು. 

 ಪ್ರತಿಭಟನಾ ಸ್ಥಳಕ್ಕೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ವೆಂಕಟರವಣಪ್ಪ ಬಂದು ಸಮಸ್ಯೆಗಳನ್ನು ಆಲಿಸಿದರು. ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ತುರ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಚಂದ್ರಶೇಖರರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರರೆಡ್ಡಿ, ಗೋಪಾಲಕೃಷ್ಣ, ನಾರಾಯಣನಾಯಕ, ಸಿಪಿಎಂ ತಾಲ್ಲೂಕು ಘಟಕ ಕಾರ್ಯದರ್ಶಿ ರಘುರಾಮರೆಡ್ಡಿ, ಮುಖಂಡರಾದ ಗೋವರ್ಧನಚಾರಿ, ರಾಮಲಿಂಗಪ್ಪ, ರಮೇಶ, ಮಹಮದ್‌ಅಕ್ರಂ, ನಾಗಿರೆಡ್ಡಿ,  ಆಂಜನೇಯರೆಡ್ಡಿ, ಪ್ರಸಾದ್, ಸುಬ್ಬರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.