ADVERTISEMENT

ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:56 IST
Last Updated 13 ಅಕ್ಟೋಬರ್ 2017, 5:56 IST

ಶಿಡ್ಲಘಟ್ಟ: ‘ಶಾಸಕರು, ಅಧಿಕಾರಿಗಳು ಕೆರೆಗಳಿಗೆ ಬಾಗಿನ ಅರ್ಪಿಸುವುದಕ್ಕಿಂತ ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳದ ಬಳಿ ಲಕ್ಕಹಳ್ಳಿ ಗೇಟ್ ಹತ್ತಿರವಿರುವ ಮುಚ್ಚಿಹೋಗಿದ್ದ ರಾಜಕಾಲುವೆಯನ್ನು ಗುರುವಾರ ರೈತಸಂಘದ ಸದಸ್ಯರು ಜೆಸಿಬಿ ಬಳಸಿ ದುರಸ್ತಿಗೊಳಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಹಲವು ವರ್ಷಗಳ ನಂತರ ಅತ್ಯುತ್ತಮವಾಗಿ ಮಳೆ ಬೀಳುತ್ತಿದೆ. ಕೆರೆಗಳು ತುಂಬುತ್ತಿವೆ. ಕೆರೆಗಳಿಗೆ ನೀರು ಹರಿದು ಬರಲು ಬಹುಮುಖ್ಯವಾಗಿ ಕಾಲುವೆಗಳನ್ನು ದುರಸ್ತಿಗೊಳಿಸಿ, ಒತ್ತುವರಿ ತೆರವುಗೊಳಿಸಬೇಕು. ಆದರೆ ರಾಜಕಾರಣಿಗಳು ಕೇವಲ ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುತ್ತಾ ಬಾಗಿನ ಅರ್ಪಿಸುವುದರಲ್ಲಿ ನಿರತರಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಜಾತವಾರ ಮತ್ತು ಕೇಶವಪುರ ಕೆರೆಗಳು ತುಂಬಿವೆ. ಅವುಗಳಲ್ಲಿ ಹೆಚ್ಚಾದ ನೀರು ಹರಿದು ಬರಲು ಕಾಲುವೆಯು ಮುಚ್ಚಿಹೋಗಿದೆ. ಆದ್ದರಿಂದ ರೈತಸಂಘದ ಸದಸ್ಯರು ಒಗ್ಗೂಡಿ ಈ ಕೆಲಸಕ್ಕೆ ಮುಂದಾಗಿದ್ದೇವೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ’ ಎಂದು ತಿಳಿಸಿದರು.

ಜನಪ್ರತಿನಿಧಿಗಳು ಕೇವಲ ಕೆರೆ ಪೂಜೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಶೆಟ್ಟಹಳ್ಳಿ ಕೆರೆ ಸೇರಿದಂತೆ ಹಲವು ಕೆರೆಗಳ ತೂಬುಗಳು ಹಾಳಾಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಮಳೆ ಬರುವಷ್ಟರಲ್ಲಿ ಕಾಲುವೆಗಳನ್ನು, ಕೆರೆಗಳನ್ನು ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ, ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯ ಬೈರಸಾಗರ ಕೆರೆಯಲ್ಲಿದ್ದ ಜಾಲಿಗಿಡಗಳನ್ನು ಪಂಚಾಯಿತಿಯವರು ತೆರವುಗೊಳಿಸಿದ್ದಾರೆ. ಇದರಿಂದ ಪಂಚಾಯಿತಿಗೆ ಆದಾಯವೂ ಬಂದಿದ್ದು, ಪರಿಸರ ಉಳಿಯುವಿಕೆಗೆ ಸಹಾಯ ಮಾಡಿದ್ದಾರೆ ಎಂದರು.

ಇದೇ ಮಾದರಿಯಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಲ್ಲಿರುವ ಜಾಲಿ ಗಿಡಗಳನ್ನು ತೆರವು ಮಾಡಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಭಕ್ತರಹಳ್ಳಿ ಪ್ರತೀಶ್, ಎಸ್.ಎಂ.ಗೋವಿಂದಪ್ಪ, ನಾರಾಯಣಸ್ವಾಮಿ, ಆನಂದ್, ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.