ADVERTISEMENT

ಕೇಂದ್ರದ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 6:30 IST
Last Updated 17 ಜೂನ್ 2011, 6:30 IST
ಕೇಂದ್ರದ ವಿರುದ್ಧ ಬಿಜೆಪಿ ಪ್ರತಿಭಟನೆ
ಕೇಂದ್ರದ ವಿರುದ್ಧ ಬಿಜೆಪಿ ಪ್ರತಿಭಟನೆ   

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಮುಖಂಡರು, ಕಾರ್ಯಕರ್ತರು ಮತ್ತು ರೈತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಸಗೊಬ್ಬರ ಬೆಲೆ ಏರಿಕೆ, ರೇಷ್ಮೆ ಮೇಲಿನ ಆಮದು ಸುಂಕ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರ ತಳೆದಿರುವ ಧೋರಣೆ ರೈತ ವಿರೋಧಿಯಾಗಿದೆ. ರೈತರನ್ನು ರಕ್ಷಿಸಬೇಕಾದ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ಡಿ ಮಾತನಾಡಿ, `ಮಳೆಗಾಲ ಆರಂಭವಾಗಿದ್ದು, ರಸಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಈ ಅಂಶ ತಿಳಿದಿದ್ದರೂ ಕೇಂದ್ರ ಸರ್ಕಾರ ಏಕಾಏಕಿ ರಸಗೊಬ್ಬರದ ಬೆಲೆಯನ್ನು 200 ರಿಂದ 250 ರೂಪಾಯಿಗಳವರೆಗೆ ಏರಿಸಿದೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗಿದೆ~ ಎಂದರು.

`ಲಕ್ಷಾಂತರ ಮಂದಿ ರೇಷ್ಮೆ ಉದ್ಯಮದ ಮೇಲೆ ಅವಲಂಬಿಸಿದ್ದು, ರೇಷ್ಮೆ ಆಮದು ಸುಂಕವನ್ನು ಕಡಿತಗೊಳಿಸಿದ್ದರಿಂದ ರೇಷ್ಮೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ರೂ. 350 ಇದ್ದ ಒಂದು ಕೆಜಿ ರೇಷ್ಮೆಗೂಡಿನ ಬೆಲೆ ಈಗ ರೂ. 120ಕ್ಕೆ ಕುಸಿದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರೇಷ್ಮೆ ಆಮದು ಸುಂಕವನ್ನು ಹೆಚ್ಚಿಸಬೇಕು, ಸ್ಥಳೀಯವಾಗಿ ಬೆಳೆಯುವ ರೇಷ್ಮೆಗೆ ಹೆಚ್ಚಿನ ಬೆಲೆ ನೀಡಬೇಕು, ಕೃಷಿಕರು ಬಳಸುವ ಟ್ರಾಕ್ಟರ್‌ಗಳಿಗೆ ಡೀಸೆಲ್ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ, ಪದಾಧಿಕಾರಿಗಳಾದ ಶ್ರೀನಿವಾಸಗೌಡ, ಜಯರಾಮರೆಡ್ಡಿ, ಎ.ವಿ.ಬೈರೇಗೌಡ, ಪ್ರೇಮಲೀಲಾ, ಸುಜಾತ ಭೂಷಣ್, ನಾಗಭೂಷಣ್, ಕೆ.ನಾರಾಯಣಪ್ಪ, ಕೃಷ್ಣ,  ನಂಜಪ್ಪ, ಶ್ರೀನಿವಾಸರೆಡ್ಡಿ, ಲಕ್ಷಿನಾರಾಯಣಗುಪ್ತ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.