ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆಯಾದರೂ ಯಾವಾಗ ಫಲ ದೊರೆಯುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
`ಶಾಶ್ವತ ನೀರಾವರಿ ಹೋರಾಟ ಹೀಗೆ ದಿಢೀರನೇ ಆರಂಭಗೊಳ್ಳುತ್ತದೆ ಎಂಬುದರ ಬಗ್ಗೆ ನಿರೀಕ್ಷೆ ಇರಲಿಲ್ಲ.
ಅಂತರ್ಜಲ ಮರುಪೂರಣ, ಕೆರೆ-ಕಾಲುವೆಗಳ ಒತ್ತುವರಿ, ಶಾಶ್ವತ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ಆರಂಭಿಸಿದ್ದೆವು. ಆದರೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳು ಕಂಡರೆ ಆತಂಕವಾಗುತ್ತದೆ~ ಎಂದು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.
`ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವ ಸಚಿವರು ಮತ್ತು ಜನಪ್ರತಿನಿಧಿಗಳು ಎಲ್ಲ ಹೊಣೆಯನ್ನು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮೇಲೆ ಹಾಕುತ್ತಾರೆ. ಅವರೊಂದಿಗೆ ಚರ್ಚಿಸಿರುವುದಾಗಿ ಹೇಳುತ್ತಾರೆ.
ಆದರೆ ಯೋಜನೆಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಯಾವುದೇ ವಿಷಯವನ್ನು ಪ್ರಸ್ತಾಪಿಸದೆ ಮೌನವಾಗಿದ್ದಾರೆ. ಅಕ್ಟೋಬರ್ 31ರೊಳಗೆ ಜಿಲ್ಲೆಗೆ ಭೇಟಿ ನೀಡಬೇಕೆಂದು ನಾವು ಆಗ್ರಹಿಸಿದರೂ ಅವರು ಸ್ಪಂದಿಸಲಿಲ್ಲ~ ಎಂದು ಹೇಳಿದರು.
`ಚಿಕ್ಕಬಳ್ಳಾಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ಡಿಸೆಂಬರ್‌ನಲ್ಲಿ ನಂದಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದರು.
ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಅದೇ ಯೋಜನೆಗೆ ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿಯವರು ಫೆಬ್ರುವರಿಯಲ್ಲಿ ಯೋಜನೆ ಆರಂಭ ಎಂದಿದ್ದರು.
ಮೂವರು ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಿದರೆ ಹೊರತು ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಬಗ್ಗೆ ನಿಖರ ಭರವಸೆ ನೀಡಲಿಲ್ಲ. ಹೀಗಿರುವಾಗ, ಶಾಶ್ವತ ನೀರಾವರಿ ಯೋಜನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವಾಗ ಕ್ರಮ ತೆಗೆದುಕೊಳ್ಳುತ್ತದೆ~ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.