ADVERTISEMENT

ಕೊಪ್ಪ: ಅವನತಿಯತ್ತ ಬತ್ತ ಬೇಸಾಯ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:23 IST
Last Updated 19 ಸೆಪ್ಟೆಂಬರ್ 2013, 8:23 IST

ಕೊಪ್ಪ: ತಾಲ್ಲೂಕಿನಲ್ಲಿ ಬತ್ತದ ಬೇಸಾಯ ಅವನತಿಯತ್ತ ಸಾಗುತ್ತಿದ್ದು, ಕಾರ್ಮಿಕರ ಕೊರತೆ, ಇಳುವರಿ ಕುಸಿತ ಹಾಗೂ ಕಾಡುಪ್ರಾಣಿಗಳ ಹಾವಳಿ­ಯಿಂದ ಕೃಷಿಕರು ಬೆಳೆ ಪರಿವರ್ತನೆ­ಯತ್ತ ಮುಖ ಮಾಡಿದ್ದಾರೆ.

ಕಳೆದ ಎರಡು ದಶಕದಲ್ಲಿ  ತಾಲ್ಲೂಕಿನ 2,500 ಎಕರೆ ಪ್ರದೇಶ­ದಲ್ಲಿ ಬತ್ತದ ಕೃಷಿ ಮಾಯವಾಗಿದ್ದು, ಅನ್ಯ ಕೃಷಿ ಪ್ರದೇಶವಾಗಿ ಪರಿವರ್ತನೆ ಹೊಂದಿರುವುದು ಆತಂಕದ ಸಂಗತಿ­ಯಾಗಿದೆ. 20 ವರ್ಷಗಳ ಹಿಂದೆ ತಾಲ್ಲೂಕಿನ 6200 ಹೆಕ್ಟೇರ್‌ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿದ್ದುದು, ಈಗ 5200 ಹೆಕ್ಟೇರ್‌ಗೆ  ಇಳಿದಿದೆ. ಭತ್ತದ ಬದಲಿಗೆ ಅಡಿಕೆ, ರಬ್ಬರ್, ಅಕೇಶಿಯಾ, ಶುಂಠಿ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಪಾರಂಪರಿಕವಾಗಿ ಬೆಳೆಯುತ್ತಿದ್ದ  ದೇಶಿ ತಳಿಗಳಾದ ವಾಳ್ಯ, ರತ್ನಸೂಡಿ, ಇಂಟಾನ್, ಅಸೂಡಿ, ಗಂಧಶಾಲಿ ಮುಂತಾದ ಸ್ವಾದಿಷ್ಟ ಬತ್ತದ ತಳಿಗಳನ್ನು ಕಳೆದೊಂದು ದಶಕದ ಹಿಂದೆ ಕೈಬಿಟ್ಟ ರೈತರು ಅಧಿಕ ಇಳುವರಿ ನೀಡುವ ಐಇಟಿ–71;91, ತುಂಗಾ, ಹೇಮಾವತಿ ಇನ್ನಿತರ ತಳಿಗಳತ್ತ ಮುಖ ಮಾಡಿದ್ದರು. ಎಕರೆಗೆ 7–8 ಕ್ವಿಂಟಲ್ ಬದಲಿಗೆ 15–16 ಕ್ವಿಂಟಲ್ ಇಳುವರಿ ನೀಡುವ ಈ ತಳಿಗಳಿಂದ ಇಳುವರಿ ಹೆಚ್ಚಾದಂತೆ ಭೂಮಿ ಹದಗೊಳಿಸಲು ಎತ್ತು, ಕೋಣಗಳ ಬರ, ಬದಲಿಯಾಗಿ ಟ್ರ್ಯಾಕ್ಟರ್, ಟಿಲ್ಲರ್ ಉಳುಮೆಗೆ ದುಬಾರಿ ವೆಚ್ಚ, ನಾಟಿ, ಕೊಯ್ಲಿಗೆ ಕಾರ್ಮಿಕರ ಕೊರತೆ, ಬೆಳೆದ ಪೈರಿಗೆ ಕಾಡುಕೋಣ, ಮಂಗ, ಹಂದಿಗಳ ಕಾಟ, ಜೊತೆಗೆ ಬೆಂಕಿ ರೋಗ, ಎಲೆಸುರುಳಿ ಮೊದಲಾದ ಕೀಟ ಬಾಧೆ,  ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಧಾರಣೆ ದೊರೆಯದಿರುವುದು ಕೃಷಿಕರ ನಿರಾಸಕ್ತಿಗೆ ಕಾರಣವಾಗಿದೆ.

ಬಹುತೇಕ ಕೃಷಿಕರು ಸುಲಭದ ಬೆಳೆಗಳಾದ ಅಕೇಶಿಯಾ ಕಾಡು ಬೆಳೆಸಲು ಮನಸ್ಸು ಹರಿಸಿದರೆ ಇನ್ನು ಕೆಲವರು ಅಡಿಕೆ, ರಬ್ಬರ್ ತೋಟ­ಗಳಾಗಿ ಭೂಮಿಯನ್ನು ಪರಿವರ್ತಿಸಿ­ದ್ದಾರೆ. ಯಾಂತ್ರಿಕ ನಾಟಿ, ಶ್ರೀಪದ್ಧತಿ ಬೇಸಾಯ ಮೊದಲಾದ ಯೋಜನೆಗಳ ಮೂಲಕ ಸರ್ಕಾರ ಪ್ರೋತ್ಸಾಹ ನೀಡಿ­ದರೂ ಫಲ ಮಾತ್ರ ಶೂನ್ಯವಾಗಿದೆ. 
–ಜಿನೇಶ್ ಇರ್ವತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.