ADVERTISEMENT

ಕೊರತೆಗಳ ಮಧ್ಯೆ ಸಾಗಿದ ಪದವಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:45 IST
Last Updated 13 ಅಕ್ಟೋಬರ್ 2011, 8:45 IST
ಕೊರತೆಗಳ ಮಧ್ಯೆ ಸಾಗಿದ ಪದವಿ ಪರೀಕ್ಷೆ
ಕೊರತೆಗಳ ಮಧ್ಯೆ ಸಾಗಿದ ಪದವಿ ಪರೀಕ್ಷೆ   

ಚಿಕ್ಕಬಳ್ಳಾಪುರ: ಪರೀಕ್ಷೆ ಆರಂಭಗೊಂಡು ಅರ್ಧ ಗಂಟೆ ಕಳೆದರೂ ಕೆಲವರಿಗೆ ಪ್ರವೇಶ ಪತ್ರ ಸಿಕ್ಕಿರಲಿಲ್ಲ. ಪರೀಕ್ಷೆ ಬರೆಯುವ ಕೆಲ ವಿದ್ಯಾರ್ಥಿಗಳಿಗೆ ತಮ್ಮ ನೋಂದಣಿ ಸಂಖ್ಯೆ ಗೊತ್ತಿರಲಿಲ್ಲ. ಕೆಲವರಿಗೆ ಅಚ್ಚುಕಟ್ಟಾದ ಮೇಜುಗಳು ಸಿಕ್ಕರೆ, ಇನ್ನೂ ಕೆಲವರು ಪ್ಲಾಸ್ಟಿಕ್ ಸ್ಟೂಲ್ ಮೇಲೆ ಕೂತು ಕಬ್ಬಿಣದ ಮೇಜಿನ ಮೇಲೆ ಪರೀಕ್ಷೆ ಬರೆದರು.
ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಪರೀಕ್ಷಾ ಕೇಂದ್ರವಾದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಬುಧವಾರ ಬೆಳಿಗ್ಗೆ ಕಂಡು ಬಂದ ದೃಶ್ಯಗಳಿವು.

ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದರೂ ಪ್ರವೇಶ ಪತ್ರ ಮತ್ತು ನೋಂದಣಿ ಸಂಖ್ಯೆಗಳ ಗೊಂದಲದಿಂದ ಕೆಲ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆ ಬರೆಯಬೇಕಾಯಿತು.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಉಂಟಾದ ಕಾರಣ ಸರ್ಕಾರಿ ಪ್ರೌಢಶಾಲೆ ಮತ್ತು ನೂತನ ಕಟ್ಟಡಗಳ ಕೊಠಡಿಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು.

ಸುಮಾರು 100 ಪ್ರಶ್ನೆಪತ್ರಿಕೆಗಳ ಕೊರತೆ ಕಂಡು ಬಂದ ಕಾರಣ ಕೂಡಲೇ ಅದಕ್ಕೆ ವ್ಯವಸ್ಥೆ ಮಾಡಲಾಯಿತು.

ಲಭ್ಯವಾಗದ ಪ್ರವೇಶ ಪತ್ರ: ಪ್ರವೇಶಪತ್ರವಿಲ್ಲದೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂಬ ಆತಂಕದಲ್ಲೇ ಬರುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ, ಪ್ರತ್ಯೇಕವಾದ ಕೊಠಡಿ ಯೊಂದರಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿತ್ತು. 

`ವಿದ್ಯಾರ್ಥಿಗೆ ತೊಂದರೆಯಾಗದಿರುವಂತೆ  ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ.
ವಿದ್ಯಾರ್ಥಿ ಗಳ ಭಾವಚಿತ್ರ ಮತ್ತು ಇತರ ಮಾಹಿತಿ ಒದಗಿಸಿ ದರೂ ಬೆಂಗಳೂರು ವಿಶ್ವವಿದ್ಯಾಲಯ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ, ನಾವಾದರೂ ಏನೂ ಮಾಡಲು ಸಾಧ್ಯ ? ಎಂದು ಪ್ರಾಧ್ಯಾಪಕರು `ಪ್ರಜಾವಾಣಿ~ಗೆ ತಿಳಿಸಿದರು.

ಆಸನ ಅವ್ಯವಸ್ಥೆ: 
ಉತ್ತಮ ಆಸನ ವ್ಯವಸ್ಥೆಯಿರದ ಕಾರಣ ಅದರಲ್ಲೇ ನಿಭಾಯಿಸಿ ಕೊಂಡು ಪರೀಕ್ಷೆ ಬರೆದರು.
`ನಮಗೆ ಕಟ್ಟಿಗೆ ಮೇಜುಗಳ ಮೇಲೆ ಪರೀಕ್ಷೆ ಬರೆದು ರೂಢಿಯಿತ್ತು. ಮೊದಲ ಬಾರಿಗೆ ಪ್ಲಾಸ್ಟಿಕ್ ಸ್ಟೂಲ್ ಮೇಲೆ ಕೂತು ಕಬ್ಬಿಣದ ಮೇಜಿನ ಮೇಲೆ ಪರೀಕ್ಷೆ ಬರೆದ ಕಾರಣ ಕೊಂಚ ಕಷ್ಟವಾಯಿತು~ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
 

ಕಾಲೇಜು ಎದುರಿಗೆ ಹಾಕಿದ್ದ ಫಲಕದಲ್ಲಿ 2011 ನವೆಂಬರ್ ಮತ್ತು ಡಿಸೆಂಬರ್ ಪದವಿ ಪರೀಕ್ಷೆಗಳು ಬರೆಯಲಾಗಿತ್ತು. ಇದು ಗೊಂದಲ ಮೂಡಿಸಿದರೂ ಅದೇ ಫಲಕದಲ್ಲಿ ಮತ್ತೊಂದು ಮಾಹಿತಿಯಿಂದ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.

ಆತಂಕಗೊಂಡ ವಿದ್ಯಾರ್ಥಿ
ಬೆಳಿಗ್ಗೆ ಕನ್ನಡ ವಿಷಯ ಪರೀಕ್ಷೆ ಇತ್ತು. ಕನ್ನಡ ಬದಲು ಐಚ್ಛಿಕ ಭಾಷೆ ತೆಗೆದುಕೊಂಡವರಿಗೆ ಐಚ್ಛಿಕ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಪರೀಕ್ಷೆಯಿತ್ತು.
 
ಪ್ರವೇಶ ಪತ್ರ ಲಭ್ಯವಾಗದ ಕಾರಣ ಚಿಕ್ಕಬಳ್ಳಾಪುರಿನಲ್ಲಿ ಓದುತ್ತಿರುವ ಮಣಿ ಪುರ ವಿದ್ಯಾರ್ಥಿ ಸೂರಜ್ ಎಂಬುವರು ತೊಂದರೆ ಎದುರಿಸಬೇಕಾಯಿತು. ಪ್ರವೇಶ ಪತ್ರ ಸಿಗದ ಕಾರಣ ಆತಂಕದಲ್ಲೇ ಜೂನಿಯರ್ ಕಾಲೇಜಿಗೆ ಬಂದ ಸೂರಜ್ ತನ್ನ ಸಂಕಷ್ಟವನ್ನು ಪ್ರಾಧ್ಯಾಪಕರ ಮುಂದೆ ಹೇಳಿಕೊಳ್ಳಲು ಯತ್ನಿಸಿದರು.

ಅದರೆ ಕನ್ನಡ ಬಾರದ ಕಾರಣ ತೊಂದರೆ ಪಡ ಬೇಕಾಯಿತು. ಸಮಸ್ಯೆ ಅರಿತ ಪ್ರಾಧ್ಯಾಪಕರು ಪರೀಕ್ಷಾ ಉಸ್ತುವಾರಿ ಮುಖ್ಯಸ್ಥರ ಗಮನಕ್ಕೆ ತಂದು ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.