ADVERTISEMENT

ಗುರುಪೂಜಾ ಮಹೋತ್ಸವ, ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:38 IST
Last Updated 8 ಜುಲೈ 2017, 10:38 IST
ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವವನ್ನು ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ನೇತೃತ್ವದ ತಂಡ ಕೀರ್ತನೆಗಳನ್ನು ಹಾಡುವ ಮೂಲಕ ಉದ್ಘಾಟಿಸಿದರು (ಎಡಚಿತ್ರ). ಸಂಗೀತೋತ್ಸವದಲ್ಲಿ ಭಾಗವಹಿಸಿದ್ದ ಜನಸಮೂಹ
ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವವನ್ನು ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ನೇತೃತ್ವದ ತಂಡ ಕೀರ್ತನೆಗಳನ್ನು ಹಾಡುವ ಮೂಲಕ ಉದ್ಘಾಟಿಸಿದರು (ಎಡಚಿತ್ರ). ಸಂಗೀತೋತ್ಸವದಲ್ಲಿ ಭಾಗವಹಿಸಿದ್ದ ಜನಸಮೂಹ   

ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಮೂರು ದಿನಗಳು ನಡೆಯುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ಶುಕ್ರವಾರ ಅದ್ಧೂರಿಯಾಗಿ ಆರಂಭವಾಯಿತು. ಯೋಗಿನಾರೇಯಣ ಯತೀಂದ್ರರ ಮಠದಲ್ಲಿ ಸೂರ್ಯೋದಯದಿಂದಲೇ ಸಂಗೀತದ ಲಹರಿ ಮೊಳಗುತ್ತಿತ್ತು. 6 ಗಂಟೆಯಿಂದ ವಿವಿಧ ವಿದ್ವಾಂಸರಿಂದ ನಾದಸ್ವರ ಸೇವೆ ಸಮರ್ಪಣೆಯಾಯಿತು.

ಯತೀಂದ್ರರ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಶ್ರದ್ಧಾ– ಭಕ್ತಿಗಳಿಂದ ಮೆರವಣಿಗೆಯಲ್ಲಿ ಸಂಗೀತ ಸಭಾಂಗಣಕ್ಕೆ ಕರೆತರಲಾಯಿತು. ವಿಶೇಷವಾಗಿ ನಿರ್ಮಾಣ ಮಾಡಿದ್ದ ಅಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.

ತಿರುಪತಿ ದೇವಾಲಯದ ಮಾದರಿಯಲ್ಲಿ ಭವ್ಯ ಒಳಾಂಗಣ ವಿನ್ಯಾಸವನ್ನು ಸಭಾಭವನದಲ್ಲಿ ಅಳವಡಿಸಲಾಗಿದೆ. ಯತೀಂದ್ರರ ಎದುರಾಗಿ ನಿರ್ಮಿಸಿರುವ ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರಸ್ವಾಮಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ಮತ್ತು ತಂಡದವರು ಯತೀಂದ್ರರ ಕೀರ್ತನೆಗಳನ್ನು ಹಾಡುವ ಮೂಲಕ ವಿದ್ಯುಕ್ತವಾಗಿ ಗುರುಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಮಹೋತ್ಸವದ ಅಧಿಕೃತ ಚಾಲನೆಯ ನಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಳೀಯ ವಿದ್ವಾಂಸರು ಸಂಗೀತದ ರಸದೌತಣ ನೀಡಿದರು. ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರ ವೇದಿಕೆಯಲ್ಲಿ ಎರಡು ತಂಡಗಳಿಗೆ ಅವಕಾಶವಿದ್ದು, ಒಂದು ತಂಡ ಹಾಡುತ್ತಿದ್ದರೆ ಮತ್ತೊಂದು ತಂಡ ಸಿದ್ಧತೆಯಲ್ಲಿ ನಿರತವಾಗಿರುತ್ತಿತ್ತು. ಒಂದೊಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ಒದಗಿಸಲಾಗಿತ್ತು. ದಿನವಿಡೀ ನಿರಂತರಾಗಿ ನಡೆದ ಸಂಗೀತ ಕಛೇರಿಗಳು ಕೈವಾರದಲ್ಲಿ ನಾದಲೋಕವನ್ನೇ ಸೃಷ್ಟಿ ಮಾಡಿದ್ದವು.

ಸಂಜೆ ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ತಿರುವರೂರು ಗಿರೀಶ್‌ ಚೆನ್ನೈ ತಂಡ ಹಾಗೂ ಬಾಂಬೆ  ಬಿ.ಜಯಶ್ರೀ  ತಂಡದ ಗಾಯನ  ಸಂಗೀತಪ್ರಿಯರ ಮನತಣಿಸಿತು. ಯು.ರಾಜೇಶ್‌ ಚೆನ್ನೈ ಮಾಂಡೋಲಿನ್‌ ಸೋಲೋ, ನೂಪುರ ಫೈನ್‌ ಆರ್ಟ್ಸ್‌ನ ರೂಪಾರಾಜೇಶ್‌ ತಂಡದ ಕೂಚುಪುಡಿ ನೃತ್ಯ ನೆರೆದವರ ಮನಸೂರೆಗೊಂಡಿತು.

ಕೈವಾರದ ಬೀದಿ–ಬೀದಿಗಳಲ್ಲೂ ಸಂಗೀತದ ನೀನಾಧ ಕೇಳಿಬರುತ್ತಿತ್ತು. ಸಂಗೀತದ ಹಬ್ಬಕ್ಕೆ ಜನರ ಪ್ರವಾಹದಂತೆ ಹರಿದು ಬರುತ್ತಿದ್ದರು. ಯೋಗಿನಾರೇಯಣ ಮಠದ ಆವರಣದಲ್ಲಿ ಸಂಗೀತದ ಜತೆಗ ಫಂಡರೀಭಜನೆ, ಕೋಲಾಟ, ಕೀರ್ತನೆಗಳು ಮತ್ತು ತತ್ವಪದಗಳ ಗಾಯನದ ಕಂಪುನ್ನು ಭಕ್ತರು ಹಾಗೂ  ಸಾರ್ವಜನಿಕರು ಸವಿದರು.
ಯೋಗಿನಾರೇಯಣ ಯತೀಂದ್ರರ ಆಶ್ರಮದ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಆರ್‌.ಪಿ.ಎಂ.ಸತ್ಯನಾರಾಯಣ, ಕೆ.ನರಸಿಂಹಪ್ಪ,  ತಿಪ್ಪೇನಹಳ್ಳಿ ರಾಘವೇಂದ್ರ, ಚಿಂತಾಮಣಿ ಕುಂಟಿಗಡ್ಡೆಲಕ್ಷ್ಮಣ್‌,  ಬಾಲಕೃಷ್ಣ ಭಾಗವತರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.