ಗೌರಿಬಿದನೂರು: ಸಮಗ್ರ ಅಭಿವೃದ್ಧಿ ಕಾಣದೇ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ರೈಲ್ವೆ ಇಲಾಖೆಯು ಕ್ರಮ ಕೈಗೊಂಡಿದೆ. ನೂತನ ಕಟ್ಟಡ ನಿರ್ಮಿಸವುದು, ಮೇಲುಸೇತುವೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ರೈಲ್ವೆ ನಿಲ್ದಾಣದ ಆವರಣದಲ್ಲಿ ಕೈಗೊಳ್ಳಲಾಗುತ್ತಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಇಡೀ ನಿಲ್ದಾಣವು ಹೊಸ ರೂಪ ಪಡೆಯುವುದರ ಜೊತೆಗೆ ಸೌಲಭ್ಯಗಳನ್ನೂ ಸಹ ವೃದ್ಧಿಸಿಕೊಳ್ಳುವ ನಿರೀಕ್ಷೆಯಿದೆ.
ರೈಲ್ವೆ ನಿಲ್ದಾಣದ ಆವರಣದಲ್ಲಿ ಈಗಾಗಲೇ ಮೇಲುಸೇತುವೆ ನಿರ್ಮಾಣ ಕೈಗೊಳ್ಳಲಾಗಿದ್ದು, ನೂತನ ಕಟ್ಟಡ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಪಟ್ಟಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗಲು ಜೋಡಿ ರಸ್ತೆ ನಿರ್ಮಿಸುವ ಬಗ್ಗೆಯೂ ಯೋಜನೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲೂ ಕಾರ್ಯಗಳು ಮುಂದುವರೆದಿವೆ. `ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಮತ್ತು ಸೌಕರ್ಯಗಳನ್ನು ವಿಸ್ತರಿಸುವ ಉದ್ದೇಶದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ನಿಲ್ದಾಣವಲ್ಲದೇ ಪಟ್ಟಣವು ಪೂರಕವಾಗಿ ಅಭಿವೃದ್ಧಿಯಾಗಲಿದೆ' ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.
ನಮ್ಮ ಹಲವು ವರ್ಷಗಳ ಬೇಡಿಕೆಗಳ ನಂತರ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕೊನೆಗಾದರೂ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ ಎಂದು ರೈಲ್ವೆ ಪ್ರಯಾಣಿಕರ ಸಂಘದ ಸಂಚಾಲಕ ಮಹಮ್ಮದ್ ಬೇಗ್ ತಿಳಿಸಿದರು.
`ಮೇಲುಸೇತುವೆ ನಿರ್ಮಾಣದಿಂದ ಪ್ರಯಾಣಿಕರು ಅತ್ಯಂತ ಸುರಕ್ಷಿತವಾಗಿ ರೈಲ್ವೆ ಹಳಿಗಳನ್ನು ದಾಟಲು ಸಹಕಾರಿಯಾಗಲಿದೆ. ಪಟ್ಟಣದ ಈ ಬದಿಯಿಂದ ಮತ್ತೊಂದು ಬದಿಯಲ್ಲಿರುವ ವಿದ್ಯಾನಗರ, ಕರೇಕಲ್ಲಹಳ್ಳಿ ಮುಂತಾದ ಕಡೆ ಹೋಗಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಗೂಡ್ಸ್ ರೈಲು ಇಲ್ಲವೇ ಪ್ಯಾಸೆಂಜರ್ ರೈಲು ನಿಲುಗಡೆಯಾದಾಗಲೆಲ್ಲ, ಪ್ರಯಾಣಿಕರಿಗೆ ರೈಲ್ವೆ ಹಳಿ ದಾಟಲು ಕಷ್ಟವಾಗುತ್ತದೆ. ಮೇಲುಸೇತುವೆ ನಿರ್ಮಾಣಗೊಂಡಲ್ಲಿ, ಪ್ರಯಾಣಿಕರು ಮೇಲುಸೇತುವೆ ಮೂಲಕ ಓಡಾಡಬಹುದು. ಯಾವುದೇ ತೊಂದರೆಯಾಗುವುದಿಲ್ಲ. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ವಿತರಿಸಲು ಪ್ರತ್ಯೇಕ ಕೌಂಟರ್ ಜೊತೆಗೆ ಶೌಚಾಲಯ ಸೌಕರ್ಯ ಲಭ್ಯವಾಗಲಿದೆ' ಎಂದು ಅವರು ತಿಳಿಸಿದರು. `ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ರೈಲುಗಳ ಸಂಚಾರ ಮತ್ತು ಜನರ ಓಡಾಟ ಹೆಚ್ಚಾಗುವುದರಿಂದ ರಸ್ತೆಯಲ್ಲಿ ಸಹಜವಾಗಿಯೇ ದಟ್ಟಣೆಯಾಗಲಿದೆ. ಇದರ ಹಿನ್ನೆಲೆಯಲ್ಲಿ ಆಚಾರ್ಯ ಕಾಲೇಜು ವೃತ್ತದಿಂದ ರೈಲ್ವೆ ನಿಲ್ದಾಣದವರೆಗೆ ಜೋಡಿ ರಸ್ತೆ ನಿರ್ಮಿಸಲಾಗುವುದು. ಇದರಿಂದಾಗಿ ವಾಹನಗಳ ಸಂಚಾರವು ಸುಗಮವಾಗುತ್ತದೆ ಅಲ್ಲದೇ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುವುದಿಲ್ಲ. ಜೋಡಿ ರಸ್ತೆ ಕಾಮಗಾರಿ ವಿಸ್ತರಣೆಯಾಗಲಿವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.