ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ತಾತ್ವಿಕ ಒಪ್ಪಿಗೆ ನೀಡಿದರು.
ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಘೋಷಿಸಲೆಂದೇ ನಗರದ ಹೊರವಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ಅವರು ಕೊನೆಗೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ‘ನನ್ನ ಮೇಲೆ ಅಭಿಮಾನ ಇಟ್ಟಿರುವ ನಿಮ್ಮನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದರು.
ಇದಕ್ಕೂ ಮುನ್ನ, ‘ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಿಂತ ಇತರ ಸವಾಲುಗಳೇ ಹೆಚ್ಚು ಇವೆ. ರಾಮನಗರ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಜೊತೆ ಚರ್ಚಸಿ ತೀರ್ಮಾನ ಕೈಗೊಳ್ಳಲು ಎರಡು ದಿನ ಕಾಲಾವಕಾಶ ಕೊಡಿ. ರಾಮನಗರದಲ್ಲಿ ಶುಕ್ರವಾರ ಸಭೆ ನಡೆಸಿ, ಅಲ್ಲಿನ ಮುಖಂಡರು ಮತ್ತು ಕಾರ್ಯಕರ್ತರೊಡನೆ ಚರ್ಚಿಸಿ ನಂತರ ನಿಮಗೆ ತೀರ್ಮಾನ ಹೇಳುತ್ತೇನೆ’ ಎಂದು ಮನವೊಲಿಸಲು ಯತ್ನಿಸಿದರು.
ಅದಕ್ಕೆ ಮಣಿಯದ ಭಾರಿ ಸಂಖ್ಯೆಯ ಕಾರ್ಯಕರ್ತರು, ‘ನೀವು ಇಲ್ಲಿಂದಲೇ ಸ್ಪರ್ಧಿಸಬೇಕು. ನಿಮ್ಮ ಮೇಲೆಯೇ ನಂಬಿಕೆ ಇಟ್ಟಿದ್ದೇವೆ’ ಎಂದರು. ಶಾಸಕರು ಸೇರಿದಂತೆ ಎಲ್ಲರಿಂದ ಒತ್ತಡ ಹೆಚ್ಚುತ್ತಿರುವುದನ್ನು ಅರಿತ ಕುಮಾರಸ್ವಾಮಿ, ‘ನಾನು ಇಲ್ಲಿ ಸ್ಪರ್ಧಿಸುತ್ತೇನೆಂದು ಘೋಷಿಸಿಬಿಟ್ಟರೆ, ರಾಮನಗರದ ಕಾರ್ಯಕರ್ತರು ವಿಷ ಸೇವಿಸಿ ಸಾಯುವುದಾಗಿ ಹೇಳಿದ್ದಾರೆ.
ಮನೆಯಲ್ಲಿ ತಾಯಿಯವರೂ ಆತಂಕಗೊಂಡಿದ್ದಾರೆ. ಕಾಲಾವಕಾಶ ನೀಡಿ’ ಎಂದರು. ಕಾರ್ಯಕರ್ತರು ಇದ್ಯಾವುದಕ್ಕೂ ಒಪ್ಪಲಿಲ್ಲ. ಕೊನೆಗೆ ಅವರನ್ನು ಸಮಾಧಾನಪಡಿಸಿದ ಅವರು, ‘ಈಗಿನಿಂದಲೇ ಪ್ರಚಾರ ಆರಂಭಿಸಿ’ ಎಂದರು.
ಇಂದಿನಿಂದಲೇ ಮತಯಾಚಿಸಿ
ತಡ ಮಾಡದೇ ಇವತ್ತಿನಿಂದಲೇ ಕುಮಾರಸ್ವಾಮಿ ಹೆಸರಿನಲ್ಲಿ ಮತಯಾಚಿಸಲು ಆರಂಭಿಸಿ. ಚುನಾವಣಾ ಪ್ರಚಾರ ಕೈಗೊಳ್ಳಿ. ಒಂದೆರಡು ದಿನದಲ್ಲಿಯೇ ನಾಮಪತ್ರ ಸಲ್ಲಿಕೆ ದಿನಾಂಕ ತಿಳಿಸುತ್ತೇನೆ.
- ಎಚ್.ಡಿ. ಕುಮಾರಸ್ವಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.