ADVERTISEMENT

ಚಿಲ್ಲರೆ ಸಮಸ್ಯೆಗೆ ಪರಿಹಾರ ಉಂಟೆ?

​ಪ್ರಜಾವಾಣಿ ವಾರ್ತೆ
Published 9 ಮೇ 2012, 8:10 IST
Last Updated 9 ಮೇ 2012, 8:10 IST
ಚಿಲ್ಲರೆ ಸಮಸ್ಯೆಗೆ ಪರಿಹಾರ ಉಂಟೆ?
ಚಿಲ್ಲರೆ ಸಮಸ್ಯೆಗೆ ಪರಿಹಾರ ಉಂಟೆ?   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ  ಚಿಲ್ಲರೆ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದ್ದು, ಹೋಟೆಲ್ ಮಾಲೀಕರು, ಔಷಧ ವ್ಯಾಪಾರಸ್ಥರು, ಕಿರಾಣಿ ಅಂಗಡಿಯವರು, ಹಣ್ಣು-ತರಕಾರಿ ವ್ಯಾಪಾರಸ್ಥರು ಮುಂತಾದವರು ಬೇಸತ್ತಿದ್ದಾರೆ. ಪ್ರತಿ ದಿನ ಗ್ರಾಹಕರು ನೀಡುವ 100 ಅಥವಾ 500 ರೂಪಾಯಿ ನೋಟುಗಳಿಗೆ ಚಿಲ್ಲರೆ ಸಂಗ್ರಹಿಸಿ ಹಿಂತಿರುಗಿಸಲು ಹರಸಾಹಸ ಪಡುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿಯೂ ಸಕಾಲಕ್ಕೆ ಚಿಲ್ಲರೆ ಸಿಗದ ಕಾರಣದಿಂದ ಕಂಗೆಟ್ಟಿರುವ ಉದ್ಯಮಿಗಳು ಪರಿಹಾರ ಕಂಡುಕೊಳ್ಳಲಾಗದೆ ಹತಾಶರಾಗುತ್ತಿದ್ದಾರೆ.

ಬ್ಯಾಂಕ್‌ನಿಂದ ಸಕಾಲಕ್ಕೆ ಚಿಲ್ಲರೆ ದೊರೆಯದ ಕಾರಣದಿಂದಲೇ ದೇವಾಲಯದ ಮೊರೆ ಹೋಗುತ್ತಿದ್ದಾರೆ. ದೇವರಿಗೆ ಪ್ರಾರ್ಥಿಸಲು ಅಲ್ಲ, ದೇವಾಲಯದ ಹುಂಡಿಯಲ್ಲಿ ಸಿಗುವ ಚಿಲ್ಲರೆಗಾಗಿ. 100 ರೂಪಾಯಿ ಚಿಲ್ಲರೆಗಾಗಿ 5 ರಿಂದ 10 ರೂಪಾಯಿವರೆಗೆ ಕಮಿಷನ್ ಕೂಡ ಕೊಡುತ್ತಾರೆ.

`ದಿನದಿಂದ ದಿನಕ್ಕೆ ನಾಣ್ಯಗಳು ಅಷ್ಟೇ ಅಲ್ಲ, 10, 20 ಮತ್ತು 50 ರೂಪಾಯಿಗಳ ನೋಟುಗಳ ಬಳಕೆಯೇ ಕಡಿಮೆಯಾಗತೊಡಗಿದೆ. ತಿಂಡಿ ಮತ್ತು ಊಟಕ್ಕಾಗಿ ಬರುವ ಬಹುತೇಕ ಗ್ರಾಹಕರು 100 ಇಲ್ಲವೇ 500 ರೂಪಾಯಿ ಮೌಲ್ಯದ ನೋಟುಗಳನ್ನು ನೀಡುತ್ತಾರೆ. ಚಿಲ್ಲರೆ ಇಲ್ಲವೆಂದು ನೇರವಾಗಿಯೇ ಹೇಳುತ್ತಾರೆ. 5 ರೂಪಾಯಿ ಬಿಲ್‌ಗೆ 95 ರೂಪಾಯಿ ಚಿಲ್ಲರೆ ಸಂಗ್ರಹಿಸಿ ಹಿಂತಿರುಗಿಸುವುದರಲ್ಲಿ ಸಾಕುಸಾಕಾಗುತ್ತದೆ. ಎಷ್ಟೇ ಚಿಲ್ಲರೆ ಹಣವಿಟ್ಟುಕೊಂಡರೂ ಸಾಕಾಗುವುದಿಲ್ಲ~ ಎಂದು ಹೋಟೆಲ್ ಉದ್ಯಮಿ ಸೀತಾರಾಮ `ಪ್ರಜಾವಾಣಿ~ಗೆ ತಿಳಿಸಿದರು.

`ಚಿಲ್ಲರೆ ನೀಡಲು ಸಾಧ್ಯವಾಗದೆ ಇದ್ದರೆ ಗ್ರಾಹಕರು ಸಿಟ್ಟಿಗೇಳುತ್ತಾರೆ. ಆದರೆ ಚಿಲ್ಲರೆ ಸಂಗ್ರಹಣೆಯ ನಮ್ಮ ಅಸಹಾಯಕತೆ ಅವರಿಗೆ ಅರ್ಥವಾಗುವುದಿಲ್ಲ. ಚಿಲ್ಲರೆಗಾಗಿ ಬ್ಯಾಂಕ್‌ನವರ ಮೊರೆ ಹೋದರೆ, ಬ್ಯಾಂಕ್‌ನವರು ಭಾರತೀಯ ರಿಸರ್ವ್ ಬ್ಯಾಂಕ್ ವಿರುದ್ಧ ದೂರುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸ್ಥಳೀಯ ಬ್ಯಾಂಕ್‌ನಿಂದ ಚಿಲ್ಲರೆಗಾಗಿ ಬೇಡಿಕೆಯೇ ಬಂದಿಲ್ಲವೆಂದು ಉತ್ತರಿಸುತ್ತಾರೆ.

ಬ್ಯಾಂಕ್‌ನಿಂದಲೂ ನೆರವು ಸಿಗದೆ ದೇವಾಲಯದ ಹುಂಡಿಯನ್ನೇ ಅವಲಂಬಿಸಬೇಕಾಗುತ್ತದೆ~ ಎಂದು ಅವರು ತಿಳಿಸಿದರು.

ಹೋಟೆಲ್ ಉದ್ಯಮಿಗಳಷ್ಟೇ ಅಲ್ಲ, ಔಷಧ ವ್ಯಾಪಾರಸ್ಥರು, ಕಿರಾಣಿ ಅಂಗಡಿ ಮಾಲೀಕರು ಮುಂತಾದವರು ಕೂಡ ಇದೇ ರೀತಿ ಅನಿಸಿಕೆ ವ್ಯಕ್ತಪಡಿಸುತ್ತಾರೆ. `ಚಿಲ್ಲರೆ ಸಿಗದಿರುವುದಕ್ಕೆ ಕಮಿಷನ್ ರೂಪದಲ್ಲಿ ಹಣ ತರುತ್ತಿದ್ದೇವೆ. 100 ರೂಪಾಯಿಗೆ 5 ಇಲ್ಲವೇ 10 ರೂಪಾಯಿ ಕಮಿಷನ್ ನೀಡಬೇಕು. ಕಾಡಿ-ಬೇಡಿಯಾದರೂ ಚಿಲ್ಲರೆ ಹಣವನ್ನು ತರಬೇಕು. ಇಲ್ಲದಿದ್ದರೆ ನೆಮ್ಮದಿಯಿಂದ ವ್ಯಾಪಾರ-ವ್ಯವಹಾರ ಮಾಡಲಾಗುವುದಿಲ್ಲ~ ಎಂದು ಔಷಧ ವ್ಯಾಪಾರಸ್ಥ ಮಹೇಶ್ ತಿಳಿಸಿದರು.

`ಚಿಲ್ಲರೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸೂಕ್ತ ಪರಿಹಾರ ಕಂಡುಕೊಂಡರೆ ಅನುಕೂಲವಾಗುತ್ತದೆ. ಗ್ರಾಹಕರು ಮತ್ತು ವ್ಯಾಪಾರಸ್ಥರು ಆಗಾಗ್ಗೆ ನಡೆಯುವ ಮಾತಿನ ಚಕಮಕಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.
 
ನಾಣ್ಯಗಳನ್ನು ಮತ್ತು 10,20 ಮತ್ತು 50 ರೂಪಾಯಿಗಳನ್ನು ಅಗತ್ಯ ಪ್ರಮಾಣದಲ್ಲಿ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದಲ್ಲಿ, ಜನಸಾಮಾನ್ಯರು ಚಿಲ್ಲರೆಗಾಗಿ ಹೆಣಗಬೇಕಾದ ಪರಿಸ್ಥಿತಿ ಬರುವುದಿಲ್ಲ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.