ಚಿಕ್ಕಬಳ್ಳಾಪುರ: ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಕೆ.ಅರ್ಕೇಶ್ ಪರ ಪ್ರಚಾರಕ್ಕೆ ಮತ್ತು ರಸ್ತೆ ಬದಿ ಪ್ರಚಾರ (ರೋಡ್ ಷೋ) ನಡೆಸಲು ಭಾನುವಾರ ನಗರಕ್ಕೆ ಭೇಟಿ ನೀಡಿದ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಮಟ ಮಟ ಮಧ್ಯಾಹ್ನ ಡಬ್ಬಿ ಅಂಗಡಿಯ ಬಿಸಿ ಬಿಸಿ ಚಹಾ ಕುಡಿದರು.
ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ರೋಡ್ ಷೋ ನಡೆಸಿದ ಅವರು, ನಗರಸಭೆ ಕಚೇರಿ ಎದುರಿನ ಭುವನೇಶ್ವರಿದೇವಿ ವೃತ್ತದಲ್ಲಿ ತೆರೆದ ವಾಹನದಲ್ಲಿ ಕೆಲ ನಿಮಿಷ ಭಾಷಣ ಮಾಡಿದ ಬಳಿಕ ಚಹಾ ಸೇವಿಸಿದರು. ಚಹಾ ಲೋಟ ವಾಹನದ ಮುಂದಿರಿಸಿ ಪ್ರಯಾಣ ಬೆಳೆಸಿದರು.
ಭಾಷಣ ಮಾಡಿದ್ದರಿಂದ ಕೊಂಚ ಬಾಯಾರಿದಂತೆ ಕಂಡ ಅರವಿಂದ್, ಪಕ್ಷದ ಸಂಚಾಲಕರಿಗೆ ಸಂಜ್ಞೆ ಮಾಡಿ, ಸಮೀಪದ ಡಬ್ಬಿ ಅಂಗಡಿಯಿಂದ ಚಹಾ ತರುವಂತೆ ಸೂಚಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರ ಮಧ್ಯೆಯೇ ನುಸುಳಿಕೊಂಡು ಸಂಚಾಲಕರು ಡಬ್ಬಿ ಅಂಗಡಿಯಿಂದ ಚಹಾ ತಂದರು.
ಚಹಾ ಗುಟುಕು ಸವಿದ ಕೇಜ್ರಿವಾಲ್ ಅವರಿಗೆ ಲೋಟ ಎಲ್ಲಿಡಬೇಕೆಂದು ಗೊತ್ತಾಗಲಿಲ್ಲ. ತೆರೆದ ವಾಹನದ ಮುಂಭಾಗದಲ್ಲೇ ಲೋಟ ಇಟ್ಟರು. ಈಗಾಗಲೇ ತಡವಾಯಿತು ಎಂದು ಹೇಳಿ ಎಲ್ಲರತ್ತ ಕೈ ಬೀಸುತ್ತ ದೇವನಹಳ್ಳಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಬೆಂಗಳೂರಿಗೆ ತೆರಳಿದರು.
ಇದಕ್ಕೂ ಮುನ್ನ ಅವರು ಕ್ಷೇತ್ರ ವ್ಯಾಪ್ತಿಯ ಯಲಹಂಕ, ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದರು. ಕೊರಳಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಪಟ್ಟಿ ಮತ್ತು ರಾಜ್ಯ ರೈತ ಸಂಘದ ಸಂಕೇತವಾದ ಹಸಿರು ಬಣ್ಣದ ಶಲ್ಯ ಹಾಕಿಕೊಂಡಿದ್ದ ಅವರು ಹಿಂದಿಯಲ್ಲಿ ಮಾತನಾಡಿದರು. ಕೆ.ಅರ್ಕೇಶ್ ಪರ ಮತ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.