ADVERTISEMENT

ತಂಬಾಕಿನ ಗೀಳು ಆರೋಗ್ಯ, ಭವಿಷ್ಯ ಹಾಳು

ವಿಶ್ವ ತಂಬಾಕು ರಹಿತ ದಿನ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:30 IST
Last Updated 1 ಜೂನ್ 2018, 12:30 IST

ಚಿಕ್ಕಬಳ್ಳಾಪುರ: ತಂಬಾಕು ಸೇವನೆ ಮತ್ತು ಧೂಮಪಾನ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ಯುವ ಜನರು ತಂಬಾಕು ಚಟದಿಂದ ದೂರವಿರಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ತಂಬಾಕುರಹಿತ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆರೋಗ್ಯವಂತ ಮನುಷ್ಯ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದನ್ನು ಜೋಪಾನ ಮಾಡಿದರೆ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ತಂಬಾಕು ವ್ಯಸನಕ್ಕೆ ಒಳಗಾದವರು ಸಾವು–ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯ ಹವ್ಯಾಸ ಹೊಂದಿರುವವರು ಕೆಟ್ಟ ಚಟದಿಂದ ಹೊರ ಬಂದಾಗ ಸುಂದರ ಸಮಾಜ ಸಾಧ್ಯ’ ಎಂದು ಹೇಳಿದರು.

ADVERTISEMENT

21 ನೇ ಶತಮಾನದಲ್ಲಿ ಜಗತ್ತಿನಲ್ಲಿ ಸುಮಾರು 100 ಕೋಟಿ ಜನರಿಗೆ ತಂಬಾಕು ಸೇವನೆಯ ಪರಿಣಾಮ ತಟ್ಟುವ ಅಂದಾಜು ಮಾಡಲಾಗಿದೆ. ರಾಜ್ಯದಲ್ಲಿ ಜನಸಂಖ್ಯೆಯ ಶೇ 8.8 ರಷ್ಟು ಜನರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಇವತ್ತು ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಊಟ ಸೇವಿಸದೆ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅಧಿಕ ವೆಚ್ಚ ಭರಿಸುತ್ತಿರುವುದು ಆಂತಕದ ವಿಚಾರ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಮಾತನಾಡಿ, ‘ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಯುವ ಜನರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಒಮ್ಮೆ ತಂಬಾಕು ವ್ಯಸನಕ್ಕೆ ಸಿಲುಕಿದರೆ ಹೊರ ಬರಲು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೆಟ್ಟ ವ್ಯಸನಕ್ಕೆ ಬಲಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.

ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟಕಾ, ಮದ್ಯ, ಮಾದಕ ವಸ್ತುಗಳು ಮಾರಾಟ ಮಾರಾಟಕ್ಕೆ ನಿರ್ಬಂಧವಿದೆ. ಯಾರಾದರೂ ಮಾರಾಟ ಮಾಡಿದ್ದು ಕಂಡುಬಂದರೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರವಿಶಂಕರ್‌ ಮಾತನಾಡಿ, ಧೂಮಪಾನ ಮಾಡುವುದು, ತಂಬಾಕು ಬಳಕೆ ಮಾಡುವುದರಿಂದ ಹೃದ್ರೋಗ, ಶ್ವಾಸನಾಳಗಳ ಒಳಪೊರೆ ಉರಿಯೂತ, ಶ್ವಾಸಕೋಶದ ವಾಯುಕೋಶಗಳ ಊತ, ಪಾರ್ಶ್ವವಾಯು, ನೆನಪಿನ ಶಕ್ತಿ ಕುಂದುವಿಕೆ, ದೀರ್ಘಕಾಲದ ಶ್ವಾಸಕೋಶದ ಅಡಚಣೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ದೃಢ ಸಂಕಲ್ಪದೊಂದಿಗೆ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಗೆ ಧೂಮಪಾನ, ಮದ್ಯ ಸೇವನೆ ನಿತ್ಯ ಜೀವನದ ಭಾಗವಾಗುತ್ತಿದೆ. ಇದರಿಂದ ದುಷ್ಪರಿಣಾಮದ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ಭಯಾನಕ ಚಟದಿಂದ ಹೊರ ಬರಲು ಆಶಾ ಕಾರ್ಯಕರ್ತರು, ವಿದ್ಯಾರ್ಥಿಗಳು ಜನರಲ್ಲಿ ಆರೋಗ್ಯದ ಮೇಲೆ ಉಂಟಾಗುವ ಹಾನಿಗಳ ಕುರಿತು ಅರಿವು ಮೂಡಿಸಬೇಕು’ ಎಂದರು.

ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ತಂಬಾಕು ಉತ್ಪನಗಳ ಸೇವನೆಯಿಂದ ಉಂಟಾಗುವ ಅನಾಹುತಗಳ ಕುರಿತು ಸಾರ್ವಜನಿಕರಿಗೆ ಕರ ಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್‌ಕುಮಾರ್‌, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಾಬುರೆಡ್ಡಿ, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಜಂಟಿ ಕಾರ್ಯದರ್ಶಿ ಕೆ.ಎಸ್‌. ನರಸಿಂಹಮೂರ್ತಿ ಇದ್ದರು.

**
ಧೂಮಪಾನ, ತಂಬಾಕಿನ ವ್ಯಸನಕ್ಕೆ ಬಲಿಯಾದವರು ಶಿಸ್ತನ್ನು ಮೈಗೂಡಿಸಿಕೊಂಡು, ದೃಢ ಸಂಕಲ್ಪ ಮಾಡಿದರೆ ದುಶ್ಚಟದಿಂದ ಮುಕ್ತಿ ಹೊಂದಬಹುದು
– ಎಸ್‌.ಎಚ್. ಕೋರಡ್ಡಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.