ADVERTISEMENT

ನಡೆಯದ ಅವಲೋಕನ, ಅವರೋಹಣದತ್ತ ಸ್ಥಾನ

ಶಿಕ್ಷಕರಿಗಿಲ್ಲ ಅಂಕುಶ, ಪಾತಾಳ ಕಂಡಿತು ಎಸ್ಸೆಸ್ಸೆಲ್ಸಿ ಫಲಿತಾಂಶ, 31ನೇ ಸ್ಥಾನಕ್ಕೆ ಕುಸಿದ ಜಿಲ್ಲೆ, ಆತಂಕದಲ್ಲಿ ಪೋಷಕರು

ಈರಪ್ಪ ಹಳಕಟ್ಟಿ
Published 8 ಮೇ 2018, 10:13 IST
Last Updated 8 ಮೇ 2018, 10:13 IST
ನಡೆಯದ ಅವಲೋಕನ, ಅವರೋಹಣದತ್ತ ಸ್ಥಾನ
ನಡೆಯದ ಅವಲೋಕನ, ಅವರೋಹಣದತ್ತ ಸ್ಥಾನ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಎರಡು ವರ್ಷಗಳಲ್ಲಿ 18 ಸ್ಥಾನಗಳಷ್ಟು ಕೆಳಗೆ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಮತ್ತಷ್ಟು ಪಾತಾಳಕ್ಕೆ ಕುಸಿಯುತ್ತಿರುವ ಫಲಿತಾಂಶ ವಿಶೇಷವಾಗಿ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡ ಬಡವರ್ಗದ ಪೋಷಕ ವಲಯವನ್ನು ಚಿಂತೆಗೀಡು ಮಾಡಿದೆ.

ಈ ಬಾರಿ ಜಿಲ್ಲೆ ಫಲಿತಾಂಶದಲ್ಲಿ 7 ವರ್ಷ, ಸ್ಥಾನದಲ್ಲಿ 6 ವರ್ಷಗಳಷ್ಟು ಹಿಂದೆ ಬಿದ್ದಿದೆ. 2015–16ನೇ ಸಾಲಿನಲ್ಲಿದ್ದ ಸ್ಥಾನ (13) ಇದೀಗ ಹಿಂದೆ ಮುಂದಾಗಿ (31) ಗಣನೀಯ ಇಳಿಕೆ ಕಂಡು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಜಿಲ್ಲೆಯ ದಶಕದ ಆಸುಪಾಸಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ 2006–07ನೇ ಸಾಲಿನಲ್ಲಿ ಶೇ 79ರಷ್ಟು ಫಲಿತಾಂಶ ಪಡೆಯುವ ಮೂಲಕ 14 ಸ್ಥಾನ ಪಡೆದಿದ್ದ ಜಿಲ್ಲೆ, 8 ವರ್ಷಗಳ ನಂತರ 2015–16ನೇ ಸಾಲಿನಲ್ಲಿ 13ನೇ ಸ್ಥಾನ ಪಡೆದು ಜನರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಅದು ಪುನಃ ಕಳೆದ ಬಾರಿ 15 ಸ್ಥಾನ ಹಿಂದೆ ಬಿತ್ತು. ಇದೀಗ ಕೊನೆ ಸ್ಥಾನ ಮುಟ್ಟುವ ಹಂತ ತಲುಪಿದೆ.

ADVERTISEMENT

ಕಳೆದ ಬಾರಿ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ‘ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಪತ್ತೆ ಮಾಡಿ, ಬರುವ ಶೈಕ್ಷಣಿಕ ವರ್ಷಗಳಲ್ಲಿ ಸಮಸ್ಯೆಗಳನ್ನು ಆರಂಭದ ದಿನದಿಂದಲೇ ಬಗೆಹರಿಸಿಕೊಳ್ಳುವ ಕೆಲಸ ಮಾಡಿ, ಪುನಃ ಗತ ವೈಭವ ಮರು ಗಳಿಸಲು ಪ್ರಯತ್ನ ಮಾಡುತ್ತೇವೆ. ಆತ್ಮವಂಚನೆ ಇಲ್ಲದ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದರು.

ಈ ಬಾರಿಯ ಫಲಿತಾಂಶ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ, ಶಿಕ್ಷಕ ಸಮೂಹದಲ್ಲಿ ಅಂತಹದೊಂದು ಆತ್ಮಾವಲೋಕನ ನಡೆಯಲೇ ಇಲ್ಲ ಎಂದು ಸಾರಿ ಹೇಳುವಂತಿದೆ. ಖಾಸಗಿ ಶಾಲೆಗಳ ಪೈಪೋಟಿ ಫಲಿತಾಂಶ ನೋಡುತ್ತಿರುವ ಪೋಷಕರು ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಕರ ಬದ್ಧತೆ ಏಕೆ ಮತ್ತೆ ಮತ್ತೆ ಅಪನಂಬಿಕೆ ಹುಟ್ಟಿಸುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ.

‘ಫಲಿತಾಂಶ ನೋಡುತ್ತಿದ್ದರೆ ತುಂಬಾ ನೋವು ಆಗುತ್ತದೆ. ಇವತ್ತು ಸರ್ಕಾರಿ ಶಾಲೆಗಳ ಮಟ್ಟದಲ್ಲಿ ಶೈಕ್ಷಣಿಕ ನಾಯಕತ್ವದ ಕೊರತೆ ಇದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಮೇಲೆ ಕೇಳುವವರಿದ್ದಾರೆ ಎನ್ನುವ ಭಯ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಆ ಭಯವಿಲ್ಲ. ಇವತ್ತು ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡುವ ಜತೆಗೆ ಮಕ್ಕಳಲ್ಲಿ ಉತ್ತೇಜನ ಮತ್ತು ಕಲಿಕಾ ಕೌಶಲ ಬೆಳೆಸುವ ಕೆಲಸ ಮಾಡಬೇಕಿದೆ’ ಎನ್ನುತ್ತಾರೆ ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ.

‘ಇವತ್ತು ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ಓದುತ್ತಿರುವುದಿಂದ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಫಲಿತಾಂಶ ಸುಧಾರಿಸುವುದು ಇವತ್ತು ಹಿಂದಿನಷ್ಟು ಕಷ್ಟದ ಕೆಲಸವಲ್ಲ. ಅದಕ್ಕಾಗಿ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಬೇಕಷ್ಟೇ. ಶೈಕ್ಷಣಿಕ ವರ್ಷದ ಕೊನೆಯ ಎರಡ್ಮೂರು ತಿಂಗಳಲ್ಲಿ ಎಚ್ಚೆತ್ತುಕೊಳ್ಳುವ ಬದಲು ಮೊದಲ ದಿನದಿಂದಲೇ ಉತ್ತಮವಾಗಿ ಕೆಲಸ ಮಾಡಬೇಕು. 8ನೇ ತರಗತಿಯಿಂದಲೇ ಉತ್ತಮ ಬುನಾದಿ ಹಾಕಬೇಕಿದೆ’ ಎಂದರು.

‘ಇಂತಹ ಕಳಪೆ ಫಲಿತಾಂಶಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ. ಶಿಕ್ಷಕರು ದೋಷ ಒಂದೆಡೆಯಾದರೆ, ಇನ್ನೊಂದೆಡೆ ಜಿಲ್ಲಾಡಳಿತದ ದೊಡ್ಡ ಲೋಪವಿದೆ. ಇವತ್ತಿನ ವಿದ್ಯಾರ್ಥಿಗಳು ದಡ್ಡರಲ್ಲ. ನಮ್ಮಲ್ಲಿ ಬೋಧನೆಯ ಸಮಸ್ಯೆ ಇದೆ. ಶಿಕ್ಷಕರು ಬೋಧನೆ ಬಿಟ್ಟು ಉಳಿದೆಲ್ಲ ಮಾಡಲು ಹೊರಟಿರುವುದೇ ಇದಕ್ಕೆಲ ಕಾರಣ. ಶಿಕ್ಷಣ ಇಲಾಖೆಯಲ್ಲಿ ಆತ್ಮಾವಲೋಕನ ಖಂಡಿತ ನಡೆದಿಲ್ಲ’ ಎಂದು ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಹೇಳಿದರು.

‘ಪ್ರತಿ ವರ್ಷ ಫಲಿತಾಂಶ ಬಂದಾಗ ಜಿಲ್ಲಾಡಳಿತ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಯಾವೆಲ್ಲ ವಿಷಯಗಳಲ್ಲಿ ಹೆಚ್ಚು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಗಮನಿಸಿ, ಅಂತಹ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಶಿಬಿರಗಳನ್ನು ಏರ್ಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪ್ರತಿ ತಾಲ್ಲೂಕಿನಲ್ಲಿ ಶಿಕ್ಷಕರು, ಪೋಷಕರ ಸಮಾವೇಶ ಮಾಡಬೇಕು. ಈ ವಿಚಾರ ನಾನು ಕಳೆದ ಮೂರು ವರ್ಷಗಳಿಂದ ಹೇಳುತ್ತಿದ್ದೇನೆ. ಯಾರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಬೇಸರವಾಗುತ್ತದೆ’ ಎಂದು ತಿಳಿಸಿದರು.

‘ಈ ಬಾರಿಯಂತೂ ನಮ್ಮ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಪಾತಕ್ಕೆ ಕುಸಿದಿದೆ. ತುಂಬಾ ಬೇಸರವಾಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಮುಗಿದ ತಕ್ಷಣವೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ಫಲಿತಾಂಶ ಸುಧಾರಣೆ ಕೈಗೊಳ್ಳಬಹುದಾದ ಯೋಜನೆಗಳನ್ನು ರೂಪಿಸಲು ಸಮಿತಿಯೊಂದನ್ನು ಮೊದಲ ಆದ್ಯತೆಯಲ್ಲಿ ರಚನೆ ಮಾಡುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಅವರು ಹೇಳಿದರು.

2015–16ನೇ ಸಾಲಿನಲ್ಲಿ 21ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಕಳೆದ ವರ್ಷ 7ನೇ ಸ್ಥಾನಕ್ಕೆ ಏರಿ ಗಮನಾರ್ಹ ಸಾಧನೆ ಮಾಡಿತ್ತು. ಈ ಬಾರಿ ಅದರಲ್ಲಿ ಒಂದು ಸ್ಥಾನ ವ್ಯತ್ಯಾಸವಾಗಿದೆ. ಅಂತಹ ಸಾಧನೆ ಜಿಲ್ಲೆಯಲ್ಲಿ ಏಕಿಲ್ಲ ಎನ್ನುವುದು ಸದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರಿಸಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಆತ್ಮಾವಲೋಕನದ ಮಾತುಗಳನ್ನಾಡುತ್ತಿದ್ದಾರೆ.

31ಕ್ಕೆ ಸ್ಥಾನಕ್ಕೆ ಕುಸಿದ ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆ ಶೇಕಡಾವಾರು 68.2ರಷ್ಟು ಫಲಿತಾಂಶ ಪಡೆಯುವ ಮೂಲಕ 31ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 70.13ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ 28ನೇ ಸ್ಥಾನದಲ್ಲಿತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಈ ವರ್ಷ ಮೂರು ಸ್ಥಾನಗಳಷ್ಟು ಕೆಳಗೆ ಕುಸಿದಿದೆ. ಫಲಿತಾಂಶದಲ್ಲಿ ಸಹ ಶೇ 1.9 ರಷ್ಟು ಇಳಿಕೆಯಾಗಿದೆ.

ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ

‘ಈ ಮಟ್ಟಿಗೆ ಜಿಲ್ಲೆಯ ಫಲಿತಾಂಶ ಕುಸಿತವಾಗಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಶಿಕ್ಷಣ ವ್ಯವಸ್ಥೆ ಕುರಿತು ನಿರ್ಲಕ್ಷ್ಯ ತಾಳಿದ್ದೇ ಮುಖ್ಯ ಕಾರಣ. ಬದ್ಧತೆಯಿಂದ ಕೆಲಸ ಮಾಡಬೇಕಾದ ಶಿಕ್ಷಕರು ಪಾಠ ಬಿಟ್ಟು, ವಿವಿಧ ಸಂಘಗಳನ್ನು ಕಟ್ಟಿಕೊಂಡು ಅವುಗಳ ಮೂಲಕ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ರಾಜಕಾರಣಿಗಳ ಚೇಲಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗಾಗಿ ಶಿಕ್ಷಕರಿಗೆ ಯಾವ ಅಧಿಕಾರಿಗಳ ಭಯವೂ ಉಳಿದಿಲ್ಲ. ಅದರ ಪರಿಣಾಮವೇ ಈ ಫಲಿತಾಂಶ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್.

ಕೈತುಂಬಾ ಸಂಬಳ, ಕಳಪೆ ಫಲಿತಾಂಶ

‘ಅತಿ ಕಡಿಮೆ ಸಂಬಳ ಪಡೆಯುವ ಖಾಸಗಿ ಶಾಲೆಗಳ ಶಿಕ್ಷಕರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುತ್ತಾರೆ. ಹೆಚ್ಚಿನ ಸಂಬಳ ಪಡೆಯುವ ಸರ್ಕಾರಿ ಶಿಕ್ಷಕರಿಗೆ ಫಲಿತಾಂಶದ ಗೊಡವೆ ಬೇಕಿಲ್ಲ ಇದು ನಮ್ಮ ಶಿಕ್ಷಣ ವ್ಯವಸ್ಥೆ ದುರಂತ’ ಎಂದು ಎಚ್.ಎಸ್.ಗಾರ್ಡನ್ ನಿವಾಸಿ ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚಿನ ವಿದ್ಯಾಭ್ಯಾಸ, ಪರಿಣಿತಿ ಹೊಂದಿದ್ದಾರೆ. ಹೀಗಿದ್ದರೂ ಸರ್ಕಾರಿ ಶಾಲೆಗಳ ಫಲಿತಾಂಶ ಕಳಪೆಯಾಗುತ್ತಿದೆ ಎಂದರೆ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಶಿಕ್ಷಕರು ಬೋಧನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಿತ್ತು. ಆದರೆ ಅವರು ಮಾಡಬೇಕಾದ ಕೆಲಸ ಬಿಟ್ಟು ಬೇರೆನೋ ಮಾಡಲು ಹೊರಟಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು’ ಎಂದರು.

**
ಶಿಕ್ಷಕರು ಬೋಧನೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಸಂಘಗಳ ಹೆಸರಿನಲ್ಲಿ ರಾಜಕೀಯ ಜೋರಾಗಿ ನಡೆಸುತ್ತಿದ್ದಾರೆ. ನಿದ್ದೆಯಲ್ಲಿರುವ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ
– ಸತೀಶ್, ಚಾಮರಾಜಪೇಟೆ ನಿವಾಸಿ

**
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.