ADVERTISEMENT

ನಾಳೆ ಮತದಾನ: ತ್ರಿಕೋನ ಸ್ಪರ್ಧೆ

ಬುರುಡಗುಂಟೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಉಪ ಚುನಾವಣೆ

ಎಂ.ರಾಮಕೃಷ್ಣಪ್ಪ
Published 1 ಜುಲೈ 2017, 5:55 IST
Last Updated 1 ಜುಲೈ 2017, 5:55 IST
ನಾಳೆ ಮತದಾನ: ತ್ರಿಕೋನ ಸ್ಪರ್ಧೆ
ನಾಳೆ ಮತದಾನ: ತ್ರಿಕೋನ ಸ್ಪರ್ಧೆ   

ಚಿಂತಾಮಣಿ: ತಾಲ್ಲೂಕು ಪಂಚಾಯಿತಿಯ ಬುರುಡಗುಂಟೆ ಕ್ಷೇತ್ರಕ್ಕೆ ಭಾನುವಾರ (ಜುಲೈ 2ರಂದು) ಉಪ ಚುನಾವಣೆ ನಡೆಯಲಿದ್ದು,  ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತದಾನಕ್ಕೆ 2 ದಿನಗಳು ಮಾತ್ರ ಬಾಕಿ ಇದ್ದು, ಪ್ರಚಾರದ ಭರಾಟೆ ಜೋರಾಗಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ನಂತರ ನೀರಸವಾಗಿದ್ದ ರಾಜಕೀಯ, ಬುರುಡಗುಂಟೆ ಕ್ಷೇತ್ರದ ಉಪ ಚುನಾವಣೆಯಿಂದಾಗಿ ಚುರುಕಾಗಿದೆ. ಇಬ್ಬರು ಶಾಸಕರು ಮತ್ತು ಮಾಜಿ ಶಾಸಕರು ಅಖಾಡಾಗೆ ದುಮುಕಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ಚುನಾವಣೆ ನಡೆದರೂ ಜಿದ್ದಾ ಜಿದ್ದಿನಿಂದ ಕೂಡಿರುತ್ತದೆ. ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್‌ 17, ಜೆಡಿಎಸ್‌ 5 ಸದಸ್ಯರಿದ್ದು, ಬುರುಡುಗಂಟೆ ಸ್ಥಾನ ಖಾಲಿ ಇದೆ. ಫಲಿತಾಂಶ ಹೇಗೆ ಬಂದರೂ ತಾಲ್ಲೂಕು ಪಂಚಾಯಿತಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಆದರೂ ಪ್ರತಿಷ್ಠೆಗಾಗಿ ಮೂರು ಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ.

ADVERTISEMENT

ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ದಸ್ತುಗೀರ್‌ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಕ್ಷೇತ್ರವು ಹಿಂದುಳಿದವರ್ಗ ‘ಅ’ ಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ ಬಿ.ಪಿ.ಮುನೀರ್ ಜೆಡಿಎಸ್‌ನಿಂದ ಬಿ.ಎಸ್‌.ಷಹಬುದ್ದೀನ್‌, ಬಿಜೆಪಿಯಿಂದ ವೆಂಕಟೇಶ್‌ ಸ್ಪರ್ಧೆಯಲ್ಲಿದ್ದಾರೆ. ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ  ಪ್ರಚಾರದ ಭರಾಟೆ ರಂಗೇರುತ್ತಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವುದರಿಂದ ಈ ಉಪಚುನಾವಣೆಯಲ್ಲಿ ಜಯಗಳಿಸಲು  ಪಕ್ಷಗಳ ಅಭ್ಯರ್ಥಿಗಳು, ನಾಯಕರು ಗ್ರಾಮಗಳಿಗೆ ತೆರಳಿ ಮನೆ– ಮನೆಗೂ ಭೇಟಿ ನೀಡುತ್ತಿದ್ದಾರೆ. ಕಳೆದ 2 ದಿನಗಳಿಂದ ಮತಯಾಚನೆ ಚುರುಕು ಕಂಡಿದೆ.

ಚಿಂತಾಮಣಿ ತಾಲ್ಲೂಕಿಗೆ ಸೇರಿದ ಬುರುಡಗುಂಟೆ ಕ್ಷೇತ್ರವು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹೀಗಾಗಿ ಇಬ್ಬರು ವಿಧಾನಸಭೆ ಸದಸ್ಯರ ಜವಾಬ್ದಾರಿ ಇರುತ್ತದೆ. ಪ್ರಸ್ತುತ ಚಿಂತಾಮಣಿ ಮತ್ತು ಶಿಡ್ಲಘಟ್ಟ– ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

ಕಾಂಗ್ರೆಸ್‌ನ ಬಿ.ಪಿ.ಮುನೀರ್‌ ಮತ್ತು ಜೆಡಿಎಸ್‌ನ ಬಿ.ಎಸ್‌.ಷಹಬುದ್ದೀನ್‌ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದ್ದು, ಇಬ್ಬರ ನಡುವೆ ಒಂದು ಕೈ ನೋಡುವ ಉತ್ಸಾಹದಲ್ಲಿ ಬಿಜೆಪಿಯ ವೆಂಕಟೇಶ್‌ ಇದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೃತಪಟ್ಟ ಕಾಂಗ್ರೆಸ್‌ ಸದಸ್ಯ ದಸ್ತುಗೀರ್‌ ಅವರ ಮೊಮ್ಮಗನಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ,  ಜೆಡಿಎಸ್‌ ಕಳೆದ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಗೆ ಟಿಕೆಟ್‌ ನೀಡಿ ಮತದಾರರ ಅನುಕಂಪ ಗಿಟ್ಟಿಸಲು ಹೊರಟಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದರೆ ಬಿಜೆಪಿ ಹಿಂದೂ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಬಿ.ಪಿ.ಮುನೀರ್‌ ಮತ್ತು ಬಿ.ಎಸ್‌.ಷಹಬುದ್ದೀನ್‌ ಬುರುಡಗುಂಟೆ ಗ್ರಾಮದ ನಿವಾಸಿಗಳು. ವೆಂಕಟೇಶ್‌ ಜಂಗಾಲಹಳ್ಳಿ ಗ್ರಾಮದವರು.

ಕಾಂಗ್ರೆಸ್‌ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೆ, ಜೆಡಿಎಸ್‌  ಸ್ಥಾನವನ್ನು ಕಸಿದುಕೊಂಡು ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲು ಹೋರಾಟ ನಡೆಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಬಹುಮತದಿಂದ ಸೋಲುಂಡರೂ ತಾಲ್ಲೂಕಿನ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಯಶಸ್ವಿಯಾಗಿದ್ದಾರೆ.

ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ  ಆಗಿರುವ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ  ಜೆಡಿಎಸ್‌ ಶಾಸಕ ಎಂ.ಕೃಷ್ಣಾರೆಡ್ಡಿ ನಿರತರಾಗಿದ್ದಾರೆ. ತಾಲ್ಲೂಕಿನಲ್ಲಿ ಪಕ್ಷಗಳಿಗಿಂತ ವ್ಯಕ್ತಿಗತ ರಾಜಕೀಯವೇ ಮುಖ್ಯ.

ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ವಿ.ಮುನಿಯಪ್ಪ ವಿದೇಶ ಪ್ರವಾಸದಲ್ಲಿರುವುದರಿಂದ ಕಾಂಗ್ರೆಸ್‌ ಪರವಾಗಿ ಡಾ.ಎಂ.ಸಿ.ಸುಧಾಕರ್‌ ನೇತೃತ್ವ ವಹಿಸಿಕೊಂಡು ಸೆಣಸಾಟ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಮ್ಮ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಸಾಥ್‌ ನೀಡುತ್ತಿದ್ದಾರೆ. ಜೆಡಿಎಸ್‌ ಪರವಾಗಿ ಶಾಸಕರಾದ ಎಂ.ರಾಜಣ್ಣ ಹಾಗೂ ಎಂ.ಕೃಷ್ಣಾರೆಡ್ಡಿ ಪ್ರಚಾರ ನಡೆಸುತ್ತಿದ್ದಾರೆ.

ಪಕ್ಷಗಳ ಮುಖಂಡರು ಪ್ರಚಾರ ನಡೆಸುತ್ತಿದ್ದರೂ ಮತದಾರರಲ್ಲಿ ಚುನಾವಣೆಯ ಬಗ್ಗೆ ನಿರಾಸಕ್ತಿ ಮೂಡಿದೆ. ಯಾರನ್ನು ಪ್ರಶ್ನಿಸಿದರೂ ಮತದಾನದ ಕುರಿತು ಗುಟ್ಟು ಬಿಟ್ಟುಕೊಡುವುದಿಲ್ಲ. ಯಾರು ಗೆದ್ದರೂ, ಸೋತರೂ ನಮ್ಮ ಕಷ್ಟ ತಪ್ಪಿದ್ದಲ್ಲ ಸ್ವಾಮಿ ಎಂದು ಉತ್ತರಿಸುತ್ತಾರೆ.

**

4189: ಪುರುಷರು

3973: ಮಹಿಳೆಯರು

8162: ಒಟ್ಟು ಮತದಾರರು

**

ತಾಲ್ಲೂಕಿನಲ್ಲಿ ತೀವ್ರವಾದ ಬರಗಾಲವಿದೆ. ಜಾನುವಾರುಗಳಿಗೆ ಕುಡಿಯಲು ನೀರು, ಮೇವಿನ ಸಮಸ್ಯೆ, ಜನರು ಕುಡಿಯುವ ನೀರು ಮತ್ತು ಉದ್ಯೋಗದ ಸಮಸ್ಯೆ ಎದುರಾಗಿದೆ. ಈ ವರ್ಷವೂ ಮಳೆ ಕೊಡುವ ಛಾಯೆ ತೋರಿಸುತ್ತಿದೆ. ಚುನಾವಣೆಯಲ್ಲಿ ಆಸಕ್ತಿ ಇಲ್ಲ.
-ಬಷೀರ್‌, ಮತದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.